ಅರೇಹಳ್ಳಿ-ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ಸಂತೆ ಜಾಗ ಒತ್ತುವರಿ ತೆರವಿಗೆ ಆಗ್ರಹಿಸಿ ಹಿರಿಯ ದಲಿತ ಮುಖಂಡ ಅರೇಹಳ್ಳಿ ನಿಂಗರಾಜು ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಸಂತೆ ಮೈದಾನದ ಒತ್ತುವರಿ ಜಾಗದಲ್ಲೇ ಹಮ್ಮಿಕೊಳ್ಳಲಾಗಿದ್ದ ಅಹೋರಾತ್ರಿ ಧರಣಿಯನ್ನು ಡಿವೈಎಸ್ಪಿ, ಈ.ಓ ಅವರ ಶೀಘ್ರವಾಗಿ ತೆರವುಗೊಳಿಸುವ ಭರವಸೆ ಮೇರೆಗೆ ಹಿಂಪಡೆಯಲಾಗಿದೆ.
ಅರೇಹಳ್ಳಿ ಯ ಸರ್ವೆ ನಂ.13 ರಲ್ಲಿನ 36 ಗುಂಟೆ ಜಮೀನು ಒತ್ತುವರಿಯಾಗಿದ್ದು ಅದನ್ನು ತೆರವುಗೊಳಿಸಿ ಸಂತೆಗಾಗಿಯೇ ಮೀಸಲು ಇಡಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟದಲ್ಲಿ ದಲಿತ ಸಂಘರ್ಷ ಸಮಿತಿ, ಎಸ್.ಡಿ.ಪಿ.ಐ, ಕಾರ್ಮಿಕ ಸಂಘಟನೆ,ಅಹಿಂದ, ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು ಭಾಗಿಯಾಗಿದ್ದವು.
ಇಂದು ಬೆಳಿಗ್ಗೆಯಿಂದಲೇ ಹೋರಾಟ ನಡೆದು ಒತ್ತುವರಿ ಜಾಗದಲ್ಲೇ ಶಾಮಿಯಾನ ಹಾಕಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ವಿವಿಧ ಸಂಘಟನೆಗಳ ಮುಖಂಡರು ಧರಣಿ ಆರಂಭಿಸಿದರು. ಬಳಿಕ ಸಂಜೆ ವೇಳೆಗೆ ಡಿವೈಎಸ್ಪಿ ಲೋಕೇಶ್, ಈ.ಓ ವಸಂತ್ ಕುಮಾರ್ ಸಮ್ಮುಖದಲ್ಲಿ ಪಿಡಿಓ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿದರು.
ಈ ವೇಳೆ ದಸಂಸ ಜಿಲ್ಲಾ ಸಂಚಾಲಕ ಅರೇಹಳ್ಳಿ ನಿಂಗರಾಜು ಮಾತನಾಡಿ, ಗ್ರಾಮ ಪಂಚಾಯಿತಿ ತಪ್ಪುಗಳ ಬಗ್ಗೆ ಅಧಿಕಾರಿಗಳಿಗೆ ವಿವರಿಸಿದರು. ಬಳಿಕ ಡಿವೈಎಸ್ಪಿ ಲೋಕೇಶ್ ಮಾತನಾಡಿ ಕೂಡಲೇ ಕಾನೂನು ಬದ್ಧವಾಗಿ ತೆರವು ಮಾಡುವ ಮೂಲಕ ಸಮಸ್ಯೆ ಬಗೆ ಹರಿಸುವಂತೆ ಈ.ಓ ಅವರಿಗೆ ಸೂಚನೆ ನೀಡಿದರು. ಬಳಿಕ ಶನಿವಾರದ ಒಳಗಾಗಿ ಖಾಲಿ ಜಾಗ ತೆರವು ಮಾಡಿ ಸ್ಟೇ ಇರುವ ಮನೆಗಳ ಬಗ್ಗೆಯೂ ನ್ಯಾಯಾಲಯಕ್ಕೆ ಸರಿಯಾದ ವರದಿ ನೀಡಿ ಸ್ಟೇ ಹಿಂಪಡೆದ ಬಳಿಕ ಶೀಘ್ರವಾಗಿ ಖುಲ್ಲಾ ಮಾಡಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಅಧಿಕಾರಿಗಳ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆದ ಸಂಘಟನೆಗಳು. ಹೋರಾಟ ಇಂದಿಗೆ ಮುಗಿದಿಲ್ಲ, ನಿಗದಿತ ಅವಧಿಯ ಒಳಗೆ ತೆರವು ಮಾಡದಿದ್ದರೆ ಮುಂದೆ ಮತ್ತೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಕರ್ನಾಟಕ ಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷ ಅನಂತರಾಜು (ಅನು), ಅಹಿಂದ ಚಳುವಳಿ ಜಿಲ್ಲಾ ಸಂಚಾಲಕರಾದ ಫ್ರಾನ್ಸಿಸ್ ಕ್ಸೇವಿಯರ್, ದಲಿತ ಸಂಘಟನಾ ಸಮಿತಿ ಹಾಸನ ಜಿಲ್ಲಾ ಅಧ್ಯಕ್ಷ ಚೇತನ್ (ಶಾಂತಿಗ್ರಾಮ), ವೈಚಾರಿಕ ಪತ್ರಿಕೆಯ ಸಂಪಾದಕ ವೆಂಕಟೇಶ್ ಬ್ಯಾಕರವಳ್ಳಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ದರಾಜು, ತಾ. ಪಂ ಮಾಜಿ ಅಧ್ಯಕ್ಷ ಅಣ್ಣಪ್ಪ, ಎಸ್.ಡಿ.ಪಿ .ಐ ಜಿಲ್ಲಾಧ್ಯಕ್ಷ ಇಮ್ರಾನ್, ಕರವೇ ಮುಖಂಡ ಅಪಸರ್ ಆಲಿ, ಪಾಲಾಕ್ಷ, ಧರ್ಮಾರಾಜು, ಮುಸ್ಥಾಪ, ದಲಿತ ಮುಖಂಡ ಜಗದೀಶ್, ಸ್ಥಳೀಯ ಮುಖಂಡ ಮೂರ್ತಿ ಬೆಳ್ಳವರ, ಹಾಗೂ ನಿವೇಶನ ರಹಿತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.