ಎಚ್.ಡಿ.ಕೋಟೆ:ತಾಲೂಕಿನ ಆಲ್ತಾಳಹುಂಡಿ ಗ್ರಾಮದ ಕಾಳಮ್ಮನ ದೇವಸ್ಥಾನ ಸಮೀಪದ ರೈತ ಗುರುಸ್ವಾಮಿ ಅವರ ಜಮೀನಿನಲ್ಲಿ ಐದು ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ.
ಗುರುಸ್ವಾಮಿ ಅವರ ಜಮೀನಿನಲ್ಲಿ ನಿನ್ನೆ ಸಂಜೆ 6 ಗಂಟೆಯ ಸಮಯದಲ್ಲಿ ಕರುವಿನ ಬಲಿ ಪಡೆದಿದ್ದ ಚಿರತೆ ಅಲ್ತಾಲಹುಂಡಿ ಸೇರಿದಂತೆ ಕಟ್ಟೆಮನುಗನಹಳ್ಳಿ ಗ್ರಾಮಸ್ಥರಲ್ಲಿ ಭಯ ಮೂಡಿಸಿತ್ತು. ಅಲ್ಲದೇ ಈ ಭಾಗದಲ್ಲಿ ಹಲವು ತಿಂಗಳುಗಳ ಹಿಂದೆ ಸುಮಾರು ಐದಾರು ಕರುಗಳನ್ನು ಚಿರತೆ ಬಲಿ ಪಡೆದಿದ್ದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಈ ಕುರಿತು ಗ್ರಾಮಸ್ಥರು ಪ್ರಾದೇಶಿಕ ವಲಯ ಅರಣ್ಯ ಕಚೇರಿ ಎಚ್.ಡಿ. ಕೋಟೆಯ ಸಿಬ್ಬಂದಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದಾರೆ.
ಅರಣ್ಯ ಸಿಬ್ಬಂದಿ ನಿನ್ನೆ ರಾತ್ರಿ ಜಮೀನಿನಲ್ಲಿ ಬೋನು ಇರಿಸಿ, ಕರುವನ್ನು ಬೋನಿನೊಳಗಿರಿಸಿದ್ದರು. ಕರುವನ್ನು ಭೇಟೆಯಾಡಲು ಮತ್ತೆ ಬಂದ ಚಿರತೆ ಬೋನಿನಲ್ಲಿ ಬಂಧಿಯಾಗಿದೆ.
ಚಿರತೆ ಸ್ಥಳಾಂತರಿಸುವ ಕಾರ್ಯದಲ್ಲಿ ಅರಣ್ಯಾಧಿಕಾರಿ ಪೂಜಾ, ಸಿಬ್ಬಂದಿಗಳಾದ ನಾರಾಯಣ, ಪರಮೇಶ್, ಸ್ನೇಹಾ, ಧನುಷ್, ದೀಪಕ್ ಸೇರಿದಂತೆ ಅಲ್ತಾಳಹುಂಡಿ ಹಾಗೂ ಕಟ್ಟೆಮನುಗನಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.
–—-ಶಿವು ಕೋಟೆ