ಮೂಡಿಗೆರೆ:ವಿಧಾನ ಸಭೆಯಲ್ಲಿ ಪಾಕಿಸ್ಥಾನ್ ಜಿಂದಾಬಾದ್ ಎಂದು ಕೂಗಿದವರನ್ನು ಬಂಧಿಸಲು ಸಾಧ್ಯವಾಗದ ರಾಜ್ಯದ ತುಘಲಕ್ ಕಾಂಗ್ರೆಸ್ ಸರ್ಕಾರ ಯಾವುದೇ ಸಾಕ್ಷಿ ಇಲ್ಲದಿದ್ದರೂ ಸಿ.ಟಿ.ರವಿ ಅವರನ್ನು ಬಂಧಿಸಿ,ಉಗ್ರಗಾಮಿಗಳ ರೀತಿ ನಡೆಸಿಕೊಂಡಿರುವುದು ಅಕ್ಷಮ್ಯ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಬಂಧನ ಖಂಡಿಸಿ ಬಿಜೆಪಿ ಪಕ್ಷದ ಕಾರ್ಯಕರ್ತರು ಶುಕ್ರವಾರ ಮೂಡಿಗೆರೆ ಪಟ್ಟಣದ ಕೆ.ಎಂ.ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಸಂದರ್ಭ ಅವರು ಮಾತನಾಡಿದರು.
ಅಧಿಕಾರ ಶಾಶ್ವತವಲ್ಲ. ಕಳೆದ 2 ವರ್ಷದಲ್ಲಿ ಕಾಂಗ್ರೆಸ್‌ನ ದುರಾಡಳಿತ ಹಾಗೂ ಹಿಟ್ಲರ್ ನೀತಿಯಿಂದಾಗಿ ರಾಜ್ಯದ ಜನತೆ ಬೇಸತ್ತಿದ್ದಾರೆ. ಮುಂದಿನ ಅವದಿಯಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲುಂಟಾಗಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಈಗ ನಡೆಯುತ್ತಿರುವ ಎಲ್ಲಾ ಅನಾಚರಗಳಿಗೆ ಉತ್ತರ ಕೊಡುವ ಕಾಲ ಬರಲಿದೆ ಎಂದು ಹೇಳಿದರು.
ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ,ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಸತ್ತು ಹೋಗಿದೆ. ಜನಪ್ರತಿನಿಧಿಯೊಬ್ಬರನ್ನು ಸುಖಾ ಸುಮ್ಮನೆ ಆರೋಪಿಸಿ ಬಂಧಿಸಲಾಗಿದೆ. ವಿಧಾನ ಪರಿಷತ್‌ನಲ್ಲಿ ನಡೆಯುವ ಎಲ್ಲಾ ಘಟನೆ ನಿಭಾಯಿಸಲು ಸಭಾಧ್ಯಕ್ಷರೆ ಸುಪ್ರಿಂ ಆಗಿರುತ್ತಾರೆ. ಆದರೆ ಹೊಸ ಮಾದರಿಯ ಅನೈತಿಕ ನಡವಳಿಯನ್ನು ಪೊಲೀಸ್ ದೌರ್ಜನ್ಯದ ಮೂಲಕ ನಾಡಿನ ಜನತೆಗೆ ಪರಿಚಯಿಸುತ್ತಿದ್ದಾರೆ. ಇದು ನಡೆಯದು ಎಂದು ಎಚ್ಚರಿಸಿದರು.
ಹಳಸೆ ಶಿವಣ್ಣ ಮಾತನಾಡಿ, ವಿಧಾನಸೌಧದಲ್ಲಿ ಎಲ್ಲರೂ ಪ್ರವೇಶಿಸಲು ಅವಕಾಶವಿಲ್ಲ.ಆದರೆ ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್‌ಕರ್ ಮತ್ತು ಚಿನ್ನರಾಜ್ ಹಟ್ಟಿಹೊಳಿ ಅವರ ಬೆಂಬಲಿಗರು ಗೂಂಡಾಗಳoತೆ ವಿಧಾನಸೌಧಕ್ಕೆ ನುಗ್ಗಿ ಓರ್ವ ಜನಪ್ರತಿನಿಧಿಯ ಮೇಲೆ ಹಲ್ಲೆ ನಡೆಸಿರುವ ಘಟನೆಯಲ್ಲಿ ಸರ್ಕಾರ ಮತ್ತು ಪೊಲೀಸರ ವೈಪಲ್ಯ ಎದ್ದು ಕಾಣುತ್ತಿದೆ. ಈ ಬಗ್ಗೆ ಸಂಪೂರ್ಣ ತನಿಖೆಗೆ ಒಳಪಡಿಸಿ ಆರೋಪಿಗಳನ್ನು ಬಂಧಿಸಬೇಕೆoದು ಆಗ್ರಹಿಸಿದರು.
ಸರೋಜಾ ಸುರೇಂದ್ರ, ಆಶಾ ಮೋಹನ್, ವಿನಯ್ ಹಳೆಕೋಟೆ,ಪಂಚಾಕ್ಷರಿ ಹಾಲೂರು, ಧನಿಕ್ ಕೋಡದಿಣ್ಣೆ, ಪ್ರಶಾಂತ್ ಬಿಳಗುಳ,ಸುಂದ್ರೇಶ್ ಕೊಣಗೆರೆ, ಸಂದೀಪ್ ಕೆಲ್ಲೂರು, ಎಂ.ಎಸ್.ಸುಜಿತ್, ಯತೀಶ್ ಮತ್ತಿತರರಿದ್ದರು.
……….ವರದಿ:ವಿಜಯಕುಮಾರ್.ಟಿ. ಮೂಡಿಗೆರೆ