ಮೂಡಿಗೆರೆ: ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂವಿಧಾನವನ್ನು ಎಂದಿಗೂ ಗೌರವಿಸುವುದಿಲ್ಲ.ಅದೇ ಮನಸ್ಥಿತಿಯಲ್ಲಿರುವ ಕೇಂದ್ರದ ಗೃಹ ಸಚಿವ ಅಮಿತ್ ಷಾ ಅವರು ಅಂಬೇಡ್ಕರ್ ಬಗ್ಗೆ ಅಪಮಾನ ಮಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು.
ಅವರು ಶುಕ್ರವಾರ ಪ್ರಗತಿಪರ ಸಂಘಟನೆಗಳು ಹಾಗೂ ವಿವಿಧ ರಾಜಕೀಯ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಅಂಬೇಡ್ಕರ್ ಅವರು ಈ ದೇಶಕ್ಕೆ ಸಂವಿಧಾನ ಕೊಡದಿದ್ದರೆ ಅಮಿತ್ ಷಾ ಗುಜರಿ ಅಂಗಡಿಯನ್ನಿಟ್ಟುಕೊoಡು ಹಾಗೂ ಮೋದಿ ಅವರು ರೈಲ್ವೇ ಸ್ಟೇಷನ್‌ನಲ್ಲಿ ಚಹ ಮಾರಿಕೊಂಡು ಇರಬೇಕಿತ್ತು.ಅಂಬೇಡ್ಕರ್ ಅವರಿಗೆ ನಿರಂತರವಾಗಿ ಅಪಮಾನ ಮಾಡುತ್ತಿರುವ ಬಿಜೆಪಿ ಕೇಂದ್ರ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಟಿಡಿಪಿ ಮತ್ತು ಜೆಡಿಯು ಪಕ್ಷ ಹಿಂಪಡೆಯಬೇಕೆoದು ಒತ್ತಾಯಿಸಿದರು.
ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ವಿಶ್ವದಲ್ಲಿ ಕ್ಷಣ ಕ್ಷಣಕ್ಕೂ ಗೌರವ ಪಡೆಯುತ್ತಿರುವ ವ್ಯಕ್ತಿಯೊಬ್ಬರಿದ್ದರೆ ಅದು ಅಂಬೇಡ್ಕರ್ ಮಾತ್ರ. ಹಾಗಾಗಿ ಅವರ ಹುಟ್ಟಿದ ದಿನವನ್ನು ವಿಶ್ವ ಜ್ಞಾನದ ದಿನವೆಂದು ವಿಶ್ವದಾಧ್ಯಂತ ಆಚರಣೆ ನಡೆಯುತ್ತಿದೆ. ಅಂತಹ ಮಹಾನ್ ವ್ಯಕ್ತಿಗೆ ಅಪಮಾನ ಮಾಡಿರುವುದನ್ನು ಖಂಡನೀಯ ಎಂದು ಹೇಳಿದರು.
ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿ, ದೇಶದ ಕಾನೂನನ್ನು ರಕ್ಷಿಸಬೇಕಾದ ಕೇಂದ್ರದ ಗೃಹ ಸಚಿವ ಅಮಿತ್ ಷಾ ಅವರ ಬಾಯಲ್ಲಿ ಇಂತಹ ಮಾತು ಬರಬಾರದಿತ್ತು. ಮನುಧರ್ಮ ಶಾಸ್ತ್ರವನ್ನು ಸಂವಿಧಾನ ಮಾಡಲು ಹೊರಟಿದ್ದಾರೆಂದು ಅವರ ಹೇಳಿಕೆಯಿಂದ ತಿಳಿಯುತ್ತದೆ. ಅಮಿತ್ ಷಾ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ಎಸ್‌ಡಿಪಿಐ ತಾಲೂಕು ಅಧ್ಯಕ್ಷ ಅಂಗಡಿ ಚಂದ್ರು, ಬಿಎಸ್‌ಪಿ ಅಧ್ಯಕ್ಷ ಲೋಕವಳ್ಳಿ ರಮೇಶ್, ವಿವಿಧ ಸಂಘಟನೆ ಮುಖಂಡ ರಾದ ಅಭಿ ಹೆಡ್ದಾಳ್, ಕುಮಾರ್ ಬಕ್ಕಿ,ಶಿವಾನಂದ್, ಸುಂದ್ರೇಶ್ ಕನ್ನಾಪುರ, ಗಣೇಶ್ ಬಿಳಗುಳ, ಸುಧೀರ್ ಚಕ್ರಮಣಿ, ಹರೀಶ್ ಸಬ್ಬೇನಹಳ್ಳಿ, ಸುರೇಂದ್ರ ಉಗ್ಗೇಹಳ್ಳಿ, ಗಿರೀಶ್ ಹೆಸಗಲ್,ಹಂಝಾ, ಜುಬೇರ್, ನಿಕಿಲ್ ಚಕ್ರವರ್ತಿ, ಎಂ.ಎಸ್.ಕೃಷ್ಣ ಮತ್ತಿತರರಿದ್ದರು.
……….ವರದಿ:ವಿಜಯಕುಮಾರ್.ಟಿ. ಮೂಡಿಗೆರೆ