
ಕೊಟ್ಟಿಗೆಹಾರ:ಸಾಹಿತ್ಯ ಎನ್ನುವುದು ತೇಜಸ್ವಿ ಅವರ ಮುಖ್ಯ ಉದ್ದೇಶವಾದರೂ ಕೂಡ ಅದಕ್ಕೆ ಪೂರಕವಾಗಿ ಅವರಿಗೆ ಇದ್ದಂತಹ ಹಲವಾರು ಆಸಕ್ತಿಗಳನ್ನು ತೇಜಸ್ವಿ ಪ್ರತಿಷ್ಠಾನದಲ್ಲಿ ಅನುಷ್ಠಾನಕ್ಕೆ ತರಲು ಸಕ್ರಿಯವಾಗಿ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಟ್ರಸ್ಠಿಗಳು ಹಾಗೂ ಲೇಖಕರಾದ ಪ್ರದೀಪ ಕೆಂಜಿಗೆ ಹೇಳಿದರು.
ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಕನಸುಗಳ ಇನ್ಫಿನಿಟಿ ಮತ್ತು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಇತ್ತಿಚೇಗೆ ನಡೆದ ಪುಸ್ತಕ ಪರಿಶೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವ್ಯಕ್ತಿಯ ವ್ಯಕ್ತಿತ್ವದ ಪ್ರತಿಷ್ಠಾಪನೆ ಮಾಡದೇ ತೇಜಸ್ವಿ ಅವರ ಆಸಕ್ತಿಗೆ ಪೂರಕವಾಗಿ ವಸ್ತುಸಂಗ್ರಹಾಲಯ, ಕೀಟ ಸಂಗ್ರಹಾಲಯಗಳನ್ನು ನಿರ್ಮಿಸಲಾಗುತ್ತಿದೆ.ಆರ್ಕಿಡೇರಿಯಂ ಮತ್ತು ಚಿಟ್ಟೆ ಉದ್ಯಾನವನದ ಕಾರ್ಯಗಳು ನಡಯುತ್ತಿದೆ. ಇದರ ಜೊತಗೆ ವಿವಿಧ ಕಾರ್ಯಕ್ರಮಗಳನ್ನು ಕೂಡ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಕೆ.ಪಿ.ಪೂರ್ಣಚoದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿಗಳಾದ ಡಾ.ಸಿ.ರಮೇಶ್ ಮಾತನಾಡಿ, ಆಯಾ ಕಾಲದ ಅಂಶಗಳನ್ನು ತನ್ನ ಕೃತಿಗಳಲ್ಲಿ ದಾಖಲಿಸುವವನೇ ನಿಜವಾದ ಲೇಖಕ. ಪುಸ್ತಕ ಪರಿಶೆ ಕಾರ್ಯಕ್ರಮದಲ್ಲಿ ಪುಸ್ತಕ ಪ್ರಕಟಣೆಯ ಸವಾಲುಗಳು ಮತ್ತು ಸಾಧ್ಯತೆಗಳು, ಮುದ್ರಣ, ಪುಸ್ತಕದ ವಸ್ತು ವಿಷಯ ಮುಂತಾದ ವಿಷಯಗಳ ಕುರಿತ ಅವಲೋಕನ ನಡೆಯಲಿದೆ ಎಂದು ತಿಳಿಸಿದರು.
ಲೇಖಕರಾದ ನರೇಂದ್ರ ರೈ ದೇರ್ಲ ಮತ್ತು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ಸುಚಿತ್ರಕುಮಾರಿ ಎಂ.ಹೆಚ್ ಮಾತನಾಡಿದರು.
ನರೇಂದ್ರ ರೈ ದೇರ್ಲ ಅವರ ‘ಪೂರ್ಣಚಂದ್ರ ತೇಜಸ್ವಿ’ ಪುಸ್ತಕವನ್ನು ಲೇಖಕರಾದ ಪ್ರದೀಪ್ ಕೆಂಜಿಗೆ ಅವರು ಬಿಡುಗಡೆಗೊಳಿಸಿದರು. 2025 ರ ಕೀಟಗಳ ಮಾಹಿತಿ ಇರುವ ನಡೆಯುವ ಕಡ್ಡಿ! ಹಾರುವ ಎಲೆ! ಕ್ಯಾಲೆಂಡರ್ ಅನ್ನು ವೇದಿಕೆಯ ಗಣ್ಯರು ಬಿಡುಗಡೆಗೊಳಿಸಿದರು.
ಉದ್ಘಾಟನಾ ಕಾರ್ಯಕ್ರಮದ ನಂತರ ವಿವಿಧ ಸಂವಾದ ಕಾರ್ಯಕ್ರಮಗಳು ನಡೆದಿದ್ದು ಪುಸ್ತಕ ಪ್ರಕಟಣೆ ಮಾರುಕಟ್ಟೆ ಕುರಿತ ಸಂವಾದದಲ್ಲಿ ಪ್ರಕಾಶರಾದ ಆರ್.ಜಿ.ಹಳ್ಳಿ ನಾಗರಾಜ್, ರತೀಶ ಬಿ.ಆರ್, ಸೂರ್ಯ ಕೀರ್ತಿ ಮಾತನಾಡಿದರು.

ಬರಹದ ಆಶಯ ಹೊಸ ತಲೆಮಾರಿನ ಸಾಹಿತ್ಯಿಕ ಜವಾಬ್ದಾರಿಗಳು ವಿಷಯದ ಕುರಿತು ನಡೆದ ಸಂವಾದದಲ್ಲಿ ವಿಮರ್ಶಕ ಡಾ.ಎಚ್.ಎಸ್ .ಸತ್ಯನಾರಾಯಣ, ಕವಯತ್ರಿ ಭಾಗ್ಯ ಜ್ಯೋತಿ ಹೀರೇಮಠ, ಲೇಖಕ ಜಯರಾಮಚಾರಿ ಮಾತನಾಡಿದರು. ಬರಹದ ಹೊಸ ಮಾಧ್ಯಮ ಪ್ರತಿಲಿಪಿಯ ನಿರ್ವಾಹಕರಾದ ಅಕ್ಷಯ್ ಬಾಳೆಗೆರೆ, ಪತ್ರಕರ್ತ ವಿಕಾಸ್ ನೇಗಿಲೋಣ , ಲೇಖಕಿ ತನ್ಮಯಿ ಪ್ರೇಂಕುಮಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ಕನಸುಗಳ ಇನ್ಫಿನಿಟಿ ತಂಡದ ಮುಖ್ಯಸ್ಥ ಪೃಥ್ವಿಸೂರಿ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ತಾಂತ್ರಿಕ ಮುಖ್ಯಸ್ಥ ಪ್ರಜ್ವಲ್ ಎ.ಜೆ, ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿಗಳಾದ ಸತೀಶ್ ತರುವೆ, ಸಂಗೀತಾ, ಲೇಖಕ ಪೂರ್ಣೇಶ್ ಮತ್ತಾವರ. ಕೀಟತಜ್ಞ ಡಾ.ಅವಿನಾಶ್, ಚಂದನ ವೆಂಕಟೇಶ್, ಸಂಜಯಗೌಡ ಕೊಟ್ಟಿಗೆಹಾರ ಮುಂತಾದವರು ಇದ್ದರು.