ಕೆ.ಆರ್.ಪೇಟೆ-ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಬುದ್ದ,ಬಸವ,ಅಂಬೇಡ್ಕರ್ ಯೋಗ ಕೇಂದ್ರದಲ್ಲಿ ವಿಶ್ವ ಧ್ಯಾನ ದಿನ ಆಚರಣಾ ಅಂಗವಾಗಿ ಯೋಗ ಮತ್ತು ಧ್ಯಾನ ಶಿಬಿರವು ಯೋಗ ಗುರು ಎಸ್.ಎಂ.ಅಲ್ಲಮಪ್ರಭು ನೇತೃತ್ವದಲ್ಲಿ ನಡೆಯಿತು.
ಶಿಬಿರಕ್ಕೆ ಚಾಲನೆ ನೀಡಿದ ಯೋಗ ಗುರು ಎಸ್.ಎಂ.ಅಲ್ಲಮಪ್ರಭು ಮಾತನಾಡಿ, ಯೋಗ ಮತ್ತು ಧ್ಯಾನದಿಂದ ಮಾನಸಿಕ ಒತ್ತಡ ದೂರವಾಗಿ ಆಂತರಿಕ ಮತ್ತು ಬಾಹ್ಯ ಶಾಂತಿ ನೆಮ್ಮದಿ ದೊರೆಯುತ್ತದೆ. ಹಾಗಾಗಿ ಡಿಸೆಂಬರ್ 21ನ್ನು ವಿಶ್ವ ಸಂಸ್ಥೆಯು ವಿಶ್ವ ಧ್ಯಾನ ದಿನವನ್ನಾಗಿ ಘೋಷಣೆ ಮಾಡಿದ್ದು, ವಿಶ್ವಸಂಸ್ಥೆಯಲ್ಲಿ ಇಂದು ಪೂಜ್ಯ ರವಿಶಂಕರ ಗುರೂಜಿ ಯವರಿಂದ ಧ್ಯಾನ ಕೂಟ ಏರ್ಪಡಿಸಿರುವುದು ಭಾರತದ ಸಂಸ್ಕೃತಿಯ ಹೆಮ್ಮೆ ಎಂದು ತಿಳಿಸಿದರು.
ಭಾರತದ ಸನಾತನ ಧರ್ಮ ಮತ್ತು ಬೌದ್ಧ, ಜೈನ, ಸಿಖ್ ಹಾಗೂ ಲಿಂಗಾಯತ ಧರ್ಮಗಳು ಧ್ಯಾನಕ್ಕೆ ಅತ್ಯಂತ ಮಹತ್ವ ನೀಡಿವೆ, ವಸುದೈವ ಕುಟುಂಬಕo ಎಂಬುದು ನಮ್ಮ ಸಂಸ್ಕೃತಿ. ಸರ್ವೇ ಜನೋ ಸುಖಿನೋ ಭವಂತುಃ, ಸರ್ವೇ ಭದ್ರಾಣಿ ಪಶ್ಯಂತು ಎಂಬ ಮೂಲ ಧ್ಯೆಯವೇ ಧ್ಯಾನದ ತಳಹದಿಯಾಗಿದೆ. ಬೌದ್ಧ ಧರ್ಮದಲ್ಲಿ ಆನಪಾನಸತಿ ಧ್ಯಾನ, ವಿಪಶ್ಯನ ಧ್ಯಾನ ವಿಶ್ವ ಪ್ರಸಿದ್ಧಿ ಪಡೆದಿದೆ ಎಂದು ಹೇಳಿದರು.
ಐದು ಸಾವಿರ ವರ್ಷಗಳ ಹಿಂದೆ ಅರಣ್ಯಕ ಹಾಗೂ ಮಂಡೂಕೋಪನಿಷತ್ ನಲ್ಲಿ ಧ್ಯಾನದ ಮಹತ್ವ ತಿಳಿಸಿದೆ. ನಂತರ ಬುದ್ದರ ಕಾಲವನ್ನು ಧ್ಯಾನದ ಗೋಲ್ಡನ್ ಸೆಂಚುರಿ ಎಂದು ಕರೆಯಲಾಗುತ್ತಿದೆ,ಮಾನಸಿಕ ಕ್ಷೋಭೆ ನಿವಾರಣೆಗೆ ಧ್ಯಾನ ಅವಶ್ಯಕ ಎಂದರು.
ವಿಠಲಾಪುರ ಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ಸ್ವರ್ಣಲತಾ ರವಿಕುಮಾರ್ ಮಾತನಾಡಿ, ಡಿಸೆಂಬರ್ 21ನ್ನೇ ಏಕೆ ವಿಶ್ವಸಂಸ್ಥೆ ಧ್ಯಾನದ ದಿನ ಎಂದು ಆಯ್ಕೆ ಮಾಡಿಕೊಂಡಿದೆಯೆoದರೆ ಉತ್ತರಾರ್ಧ ಗೋಳದಲ್ಲಿ ಅತಿ ಕಡಿಮೆ ಹಗಲು ಹೊಂದಿರುವ ದಿನ, ಮತ್ತು ಉತ್ತರಾಯಣ ಪುಣ್ಯ ಕಾಲದ ಆರಂಭದ ದಿನವಾಗಿದ್ದು ಅತ್ಯಂತ ವಿಶೇಷ ದಿನವೆಂದು ವಿಶ್ವಸಂಸ್ಥೆ ಈ ದಿನವನ್ನು ಆಯ್ಕೆ ಮಾಡಿದೆ ಎಂದರು. ಭಾರತದ ಎರಡು ವಿಶೇಷ ದಿನಗಳು ವಿಶ್ವಸಂಸ್ಥೆಗೆ ಸೇರಿದಂತಾಯಿತು ಎಂದು ಯೋಗ ದಿನವನ್ನು ಸ್ಮರಿಸಿದರು.ಕಾರ್ಯಕ್ರಮದಲ್ಲಿ ಮೈತ್ರಿ ಧ್ಯಾನ, ಆನಪಾನಸತಿ ಧ್ಯಾನ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕರಾದ ಸಿ.ವೀರಭದ್ರಯ್ಯ, ಶಿಕ್ಷಕ ಮಾಕವಳ್ಳಿ ವಸಂತರಾಜು, ಅರುಣ್, ಶಿಕ್ಷಕಿಯರಾದ ಶ್ರೀಮತಿ ವಾಣಿ, ಪವಿತ್ರ, ಯಮುನಾ, ರೇಣುಕಾ ಮಂಜೇಗೌಡ, ಕೆಇಬಿ ಸುಲೋಚನಾ, ಕರುಣಾ, ನಿಸರ್ಗ, ನಳಿನಿ, ತ್ರಿವೇಣಿ, ಶೋಭಾ ಮಂಜುನಾಥ್, ಜಾಹ್ನವಿ, ವೈರಮುಡಿ, ಯಶೋಧ, ನವೀನಾ, ಮುಂತಾದವರು ಉಪಸ್ಥಿತರಿದ್ದರು.
———ಶ್ರೀನಿವಾಸ್ ಆರ್