ಕೆ.ಆರ್.ಪೇಟೆ-ವಿಕಲ ಚೇತನರಿಗೆ ಅನುಕಂಪಕ್ಕಿoತ ಅವಕಾಶಗಳ ಅಗತ್ಯವಿದೆ-ನಿವೃತ್ತ ಪ್ರಾಂಶುಪಾಲ ಕೆ.ಕಾಳೇಗೌಡ ಅಭಿಮತ

ಕೆ.ಆರ್.ಪೇಟೆ-ವಿಕಲಚೇತನರಿಗೆ ಅನುಕಂಪಕ್ಕಿoತ ಅವಕಾಶಗಳು ಹೆಚ್ಚಬೇಕು. ಅವರಿಗೆ ಸಿಗಬೇಕಾದ ಸವಲತ್ತುಗಳು ಸುಲಭವಾಗಿ ದೊರೆಯಬೇಕು ಎಂದು ಪ್ರಗತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಹಾಗೂ ನಿವೃತ್ತ ಪ್ರಾಂಶುಪಾಲ ಕೆ.ಕಾಳೇಗೌಡ ಹೇಳಿದರು.

ಪಟ್ಟಣದ ಶ್ರೀ ರಮಣ ಮಹರ್ಷಿ ಅಂದರ ಪರಿಷತ್ ಸಂಸ್ಥೆಯ ವತಿಯಿಂದ ನಡೆದ ವಿಶ್ವ ಅಂಗವಿಕಲ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಕಲಚೇತನರು ಹಲವಾರು ಉನ್ನತ ಸ್ಥಾನಗಳಲ್ಲಿ ಅವಕಾಶಗಳನ್ನು ಪಡೆದಿದ್ದಾರೆ. ಅವರು ಉತ್ತಮವಾದ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಪ್ರಮುಖವಾಗಿ ಈಚೆಗೆ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಪಡೆದ ರಾಜ್ಯದ ವಿಕಲಚೇತನ ಆಯೋಗದ ಮಾಜಿ ಅಧ್ಯಕ್ಷರಾದ ಮಂಡ್ಯದ ಡಾ.ರಾಜಣ್ಣ ಅವರನ್ನು ನಾವು ಸ್ಮರಿಸಲೇಬೇಕು. ಏಕೆಂದರೆ ಅವರಿಗೆ ಎರಡೂ ಕೈಗಳು, ಎರಡೂ ಪಾದಗಳು ಇಲ್ಲ ಆದರೂ ವಿಕಲಚೇತನರ ಅಭಿವೃದ್ಧಿಗೆ ಹೆಚ್ಚಿನ ಉತ್ತಮ ಸೇವೆ ಸಲ್ಲಿಸಿದ್ದಾರೆ. ಇದೇ ರೀತಿ ವೈದ್ಯರು, ಇಂಜಿನಿಯರ್‌ಗಳು , ನೌಕರರು ಆಡಳಿತಗಾರರು, ಮುಂತಾದ ಕ್ಷೇತ್ರಗಳಲ್ಲಿ ಮುಂತಾದ ಕಡೆ ಅವರ ಸೇವೆ ಉನ್ನತವಾಗಿದೆ. ಅವರನ್ನು ಮಾದರಿಯಾಗಿ ಇಟ್ಟುಕೊಂಡು ಕೆಲಸ ಮಾಡಿದರೆ ಉತ್ತಮ ಅವಕಾಶಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ವಿಶ್ವದ ಜೀವ ರಾಶಿಗಳಲ್ಲಿ ಮನುಷ್ಯರಿಗೆ ಮಾತ್ರ ಇರುವ ವಿಶೇಷ ಗುಣ ಆಲೋಚನಾ ಶಕ್ತಿ.ಆದುದರಿಂದ ನಾವು ಆಡುವ ಮಾತು,ಕ್ರಿಯೆ ಸಕಾರಾತ್ಮಕವಾಗಿ ಇರಬೇಕು.ಅದು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ ಸಮಾಜದಲ್ಲಿನ ಹುಳುಕುಗಳನ್ನ ಪತ್ತೆ ಮಾಡುವ ಬದಲು ಸ್ವಚಿಂತನೆ, ಸದಾಚಾರ, ಒಳ್ಳೆಯ ನುಡಿಗಳನ್ನು ನುಡಿಯುವ ಮೂಲಕ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದರು.

ವಿಕಲಚೇತನರಿಗೆ ಸರ್ಕಾರ ನೀಡುವ ಸೌಲತ್ತುಗಳು ಸುಲಭವಾಗಿ ಸಿಗುವಂತಾಗಬೇಕು. ಗ್ರಾಮ ಪಂಚಾಯಿತಿಗಳು, ತಾಲೂಕು ಪಂಚಾಯಿತಿಗಳು, ಜಿಲ್ಲಾ ಪಂಚಾಯಿತಿ ಸರ್ಕಾರದ ವಿವಿಧ ಯೋಜನೆ ಕಾರ್ಯಕ್ರಮಗಳು ಸುಲಭವಾಗಿ ಅವರಿಗೆ ದೊರೆಯುವಂತಾದರೆ ಸಾಕಷ್ಟು ಸಮಸ್ಯೆಗಳು ನಿವಾರಣೆಯಾಗುತ್ತದೆ. ಇದಕ್ಕೆ ಪ್ರಾಮಾಣಿಕ ವ್ಯವಸ್ಥೆಯನ್ನು ಕಾಣಬೇಕು ಅಂಗವಿಕಲರು ಮುಖ್ಯ ವಾಹಿನಿಯಲ್ಲಿ ಬರಲು ಸಮಾಜದ ಎಲ್ಲರೂ ಕೈಜೋಡಿಸಬೇಕು ಎಂದು ಕೆ.ಕಾಳೇಗೌಡ ಹೇಳಿದರು.

ಶ್ರೀ ರಮಣ ಮಹರ್ಷಿ ಅಂದರ ಪರಿಷತ್ ಯೋಜನೆಯ ನಿರ್ದೇಶಕ ನಿರ್ದೇಶಕ ಸಂತೋಷ್ ಕುಮಾರ್ ಪಾಂಡೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು, ವಿವಿಧ ಅಂಗವಿಕಲ ಸಾಧಕರನ್ನು ಸನ್ಮಾನಿಸಿದರು.

ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ್ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿಶೇಷ ಚೇತನ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿದರು.

ತಾಲೂಕು ವಿಕಲ ಚೇತನರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ನಿಂಗರಾಜೇಗೌಡ ವಿಕಲಚೇತನರಿಗೆ ಸರ್ಕಾರದಿಂದ ದೊರೆಯುವ ವಿವಿಧ ಯೋಜನೆಗಳ ಪರಿಚಯ ಮಾಡಿದರು ಹಾಗೂ ಹಲವು ಸಲಕರಣೆಗಳನ್ನು ವಿತರಿಸಿದರು.

ವಿಕಲಚೇತನರಿಗಾಗಿ ಸೇವೆ ಸಲ್ಲಿಸುತ್ತಿರುವ ವಿಕಲಚೇತನರಾದ, ಸಿಂಗರಣ್ಣ , ಹುಚ್ಚೇಗೌಡ, ಕಲಾವತಿ ಜ್ಞಾನೇಶ್ ಮುಂತಾದವರನ್ನು ಶ್ರೀ ರಮಣ ಮಹರ್ಷಿ ಅಂದರ ಪರಿಷತ್ ಸಂಸ್ಥೆಯ ವತಿಯಿಂದ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಶ್ರೀ ರಮಣ ಮಹರ್ಷಿ ಅಂದರ ಪರಿಷತ್ ಸಂಸ್ಥೆಯ ಮುಖ್ಯಸ್ಥ ಪ್ರತಾಪ್, ತಾಲೂಕು ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಕೃಷ್ಣಶೆಟ್ಟಿ, ವ್ಯವಸ್ಥಾಪಕ ಸಾಗರ್, ತಹಸೀಲ್ದಾರ್ ಕಚೇರಿಯ ಪಿಂಚಣಿ ವಿಭಾಗದ ಆಶಾ, ಶಿಕ್ಷಕರಾದ ಶಿವಕುಮಾರ್, ಗಂಗಾಧರ್,ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದ ಮಾಲೀಕರಾದ ಮಿಥುನ್ ರಮಾಣ ಮಹರ್ಷಿ ಸಂಸ್ಥೆಯ ಕಾರ್ಯಕರ್ತರಾದ ಕುಂದನಹಳ್ಳಿ ವಸಂತ ಆನೆಗೋಳ ಭವ್ಯ,ಪ್ರೇಮಲತಾ,ಸೋಮನಹಳ್ಳಿ ಜಲೇಂದ್ರ, ಶೀಳನೆರೆ ನಾಗರತ್ನ, ಬೀರುವಳ್ಳಿ ಲಕ್ಷ್ಮಿದೇವಿ, ಜಯಮ್ಮ, ಶಿವಲಿಂಗಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

—————-ಶ್ರೀನಿವಾಸ್ ಆರ್

Leave a Reply

Your email address will not be published. Required fields are marked *

× How can I help you?