ಕೆ.ಆರ್.ಪೇಟೆ-ರಾಜ್ಯದ ಆರು ಜಿಲ್ಲೆಗಳ ರೈತಾಪಿ ಜನರು ಮತ್ತು ಸಾರ್ವಜನಿಕರ ಪಾಲಿಗೆ ಜೀವನದಿಯಾಗಿರುವ ಹೇಮಾವತಿ ನದಿ ಉಗಮ ಸ್ಥಳ ಮತ್ತು ನದಿ ಕೊಳ್ಳದ ಸಮಗ್ರ ಅಭಿವೃದ್ದಿಗಾಗಿ ಹೇಮಾವತಿ ನದಿ ಅಭಿವೃದ್ದಿ ಪ್ರಾಧಿಕಾರವನ್ನು ರಚಿಸುವಂತೆ ಹೇಮಾವತಿ ನದಿ ಉಗಮ ಹಿತರಕ್ಷಣಾ ಒಕ್ಕೂಟ (ರಿ) ಸಮಿತಿಯ ಅಧ್ಯಕ್ಷ ಮೂಡಿಗೆರೆ ಬಿ.ಆರ್.ಬಾಲಕೃಷ್ಣ ಒತಾಯಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಮಾವತಿ ನದಿಯು ಪಶ್ಚಿಮ ಘಟ್ಟದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಜಾವಳಿ ಗ್ರಾಮದಲ್ಲಿ ಹುಟ್ಟಿ, ಮೂಡಿಗೆರೆ ಮುಖಾಂತರ ಹಾಸನ ಜಿಲ್ಲೆ ಪ್ರವೇಶಿಸಿ, ಹಾಸನ ಜಿಲ್ಲೆಯಲ್ಲಿ ಹರಿದು ಹಸಿರುಮಯ ಮಾಡಿ ನಂತರ ಮಂಡ್ಯ ಜಿಲ್ಲೆಯನ್ನ್ನು ಪ್ರವೇಶಿಸಿ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಸುಮಾರು 45ಕಿ.ಮೀ ದೂರ ಹರಿದು ನಂತರ ಅಂಬಿಗರಹಳ್ಳಿ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿಯೊಂದಿಗೆ ವಿಲೀನವಾಗುತ್ತದೆ.
ಕಾವೇರಿಯ ಉಪನದಿಗಳಲ್ಲಿ ಹೆಚ್ಚು ಕಿ.ಮಿ ಉದ್ದ ಹರಿಯುವ ಹೇಮಾವತಿ ನದಿಯಿಂದ ಹಾಸನ, ಮಂಡ್ಯ, ಕೊಡಗು, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಲಕ್ಷಾಂತರ ಎಕರೆ ಭೂಮಿ ಅಚ್ಚುಕಟ್ಟು ಆಗಿದೆ.ಆರು ಜಿಲ್ಲೆಯ ತಾಲ್ಲೂಕುಗಳೊಂದಿಗೆ ಈಗ ಬೆಂಗಳೂರು ನಗರಕ್ಕೂ ಕುಡಿಯುವ ನೀರಿನ ಆಸರೆಯಾಗಿದೆ.ಅಲ್ಲದೆ ಗೊರೂರು ಡ್ಯಾಂ’ನಿoದ ಎಡದಂಡೆ ಮತ್ತು ಬಲದಂಡೆ ಕಾಲುವೆಯಲ್ಲಿ ಹರಿಯುವ ಹೇಮಾವತಿ ನೀರು ಹಾಸನ,ಮಂಡ್ಯ ತುಮಕೂರು ಜಿಲ್ಲೆಗಳ ರೈತರಿಗೆ ಜೀವನದಿಯಾಗಿದೆ. ಆದರೆ ಇಷ್ಟೆಲ್ಲಾ ಅನುಕೂಲಕರವಾಗಿರುವ ಹೇಮಾವತಿ ನದಿ ಹುಟ್ಟುವ ಸ್ಥಳ ಮತ್ತು ಅದರ ಪಾತ್ರದ ಪುಣ್ಯ ಸ್ಥಳಗಳ ಅಭಿವೃದ್ದಿಗೆ ಕ್ರಮ ವಹಿಸದಿರುವದು ದುಃಖ್ಖದ ವಿಚಾರವಾಗಿದೆ. ಕಾವೇರಿ ನದಿಕೊಳ್ಳದ ಸಮಗ್ರ ಅಭಿವೃದ್ದಿಗೆ ಪ್ರಾಧಿಕಾರ ರಚಿಸಿರುವಂತೆ ಹೇಮಾವತಿ ನದಿಕೊಳ್ಳದ ಅಭಿವೃದ್ದಿಗೆ ಈವರೆವಿಗೂ ಯಾವುದೇ ಅಭಿವೃದ್ದಿ ಪ್ರಾಧಿಕಾರಗಳನ್ನು ರಚಿಸಿಲ್ಲ. ಲಕ್ಷಾಂತರ ಜನರ ಬಾಯಾರಿಕೆ ಮತ್ತು ದಿನನಿತ್ಯದ ನೀರಿನ ಅವಶ್ಯಕತೆಯನ್ನು ಪೂರೈಸುತ್ತಿರುವ ಹೇಮಾವತಿ ನದಿ ಕೊಳ್ಳದ ಸಮಗ್ರ ಅಭಿವೃದ್ದಿಗಾಗಿ ಮತ್ತು ಹೇಮಾವತಿ ನದಿ ಮೂಲ ಸ್ಥಳವಾದ ಜಾವಳಿ ಗ್ರಾಮವನ್ನು ತಲಕಾವೇರಿಯ ರೀತಿ ಸಮಗ್ರವಾಗಿ ಅಭಿವೃದ್ದಿಗೊಳಿಸಿ ಪ್ರವಾಸಿ ಮತ್ತು ಯಾತ್ರಾಸ್ಥಳವಾಗಿ ರೂಪಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಈ ಸಂಭoದ ಜಲಸಂಪನ್ಮೂಲ ಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರಿಗೆ ಮನವಿ ಮಾಡಿ ನದಿಕೊಳ್ಳದ ಅಭಿವೃದ್ದಿಗೆ ಶಾಶ್ವತವಾದ ಯೋಜನೆ ರೂಪಿಸುವಂತೆ ಮನವಿ ಮಾಡಿದ್ದಾರೆ. ಮಂಡ್ಯದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಹೇಮಾವತಿ ನದಿ ನೀರನ್ನು ಬಳಸುತ್ತಿರುವ ಹಾಸನ ಮಂಡ್ಯ ಮತ್ತು ತುಮಕೂರು ಜಿಲ್ಲೆಯ ಜನಪ್ರತಿನಿಧಿಗಳು ಹೇಮಾವತಿ ನದಿಮೂಲ ಸಂರಕ್ಷಣೆ ಮತ್ತು ನದಿಕೊಳ್ಳದ ಅಭಿವೃದಿಗೆ ನಿರ್ಣಯವೊಂದನ್ನು ಅಂಗೀಕರಿಸಲು ಒತ್ತಾಯ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ:ಮಹೇಶ್‌ಜೋಶಿ ಮತ್ತು ಚಿಕ್ಕಮಗಳೂರಿನವರೇ ಆಗಿರುವ ಸಮ್ಮೇಳನಾಧ್ಯಕ್ಷ ಗೊ.ರು.ಚನ್ನಬಸಪ್ಪ ಅವರು ಈ ಸಂಭoದ ಸಮ್ಮೇಳನದಲ್ಲಿ ನಿರ್ಣಯ ಅಂಗೀಕಾರಕ್ಕೆ ಕ್ರಮ ವಹಿಸಬೇಕೆಂದು ಮನವಿ ಮಾಡಿದ್ದಾರೆ.
————-–ಶ್ರೀನಿವಾಸ್ ಆರ್