ಚಿಕ್ಕಮಗಳೂರು-ಸಮುದಾಯದ ಜನರಲ್ಲಿ ಉರ್ದು ಭಾಷೆಯ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಭಾಷೆಯ ವೃದ್ದಿಗೆ ಹಾಗೂ ಉರ್ದು ಕಲಿಕಾಸಕ್ತರಿಗೆ ಸಹಾಯ ಧನ ಕಲ್ಪಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷ ಮಹಮ್ಮದ್ ಆಲಿ ಖಾಜೀ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಚಿಕ್ಕಮಗಳೂರು ಉರ್ದು ಅದಬ್ ಮತ್ತು ಕರ್ನಾಟಕ ಉರ್ದು ಅಕಾಡೆಮಿ ವತಿಯಿಂದ ಆಯೋಜಿಸಿದ್ಧ ಉರ್ದು ದಿನ ರ‍್ಯಾಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಉರ್ದು ಸಾಹಿತ್ಯಾಸಕ್ತರು, ಕವಿಗಳನ್ನು ಪ್ರೇರೇಪಿಸಲು ರಾಜ್ಯದ ಕಚೇರಿ ಹಾಗೂ ಆಯಾ ಭಾಗದಲ್ಲಿ ತರಬೇತಿ ಕಾರ್ಯಾಗಾರ ಹಮ್ಮಿಕೊಂಡು ಭಾಷಾ ಪ್ರೇಮಿಗಳಿಗೆ ಅನುಕೂಲ ಕಲ್ಪಿಸುತ್ತಿದೆ. ಅಲ್ಲದೇ ಉರ್ದು ಪತ್ರಿಕಾ ಕ್ಷೇತ್ರದಲ್ಲಿ ವ್ಯಾಸಂಗ ನಡೆಸುವ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯಧನ ಒದಗಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು.
ನಾಡಿನಾದ್ಯಂತ ಉರ್ದು ಭಾಷೆ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯಸರ್ಕಾರ 1.5 ಕೋಟಿ ರೂ.ಗಳ ಅನುದಾನವನ್ನು ಅಕಾಡೆಮಿಗೆ ಒದಗಿಸಿ ಕಾರ್ಯಪ್ರವೃತ್ತರಾಗಲು ಸೂಚಿಸಿದೆ. ಅದರಂತೆ ರಾಜ್ಯದ ಉದ್ದಗಲಕ್ಕೂ ಪ್ರವಾಸ ಕೈಗೊಂಡು ಅನುದಾನದ ಸದ್ಬಳಸಿಕೊಂಡು ಮಕ್ಕಳು,ಯುವಕರಲ್ಲಿ ಉರ್ದು ಕಲಿಕೆಗೆ ಹೆಚ್ಚಿ ನ ಶ್ರಮ ವಹಿಸುತ್ತಿದೆ ಎಂದು ತಿಳಿಸಿದರು.
ಈಗಾಗಲೇ ಅಕಾಡೆಮಿ ವತಿಯಿಂದ ಉರ್ದು ಭಾಷೆಯಡಿ ಕವಿ ಸಮ್ಮೇಳನ, ಅಂಗನವಾಡಿಗೆ ಸಹಾಯಧನ, 30 ದಿನಗಳಲ್ಲಿ ಉರ್ದು ಕಲಿಯುವ ಉಚಿತ ತರಬೇತಿ ಸೇರಿದಂತೆ ರಾಜ್ಯದಲ್ಲಿ ಉರ್ದು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿ ಮತ್ತು ಪ್ರಚಾರಕ್ಕಾಗಿ ಕೆಲಸ ಮಾಡುವುದು ಅಕಾಡೆಮಿಯ ಗುರಿ ಮತ್ತು ಉದ್ದೇಶಗಳಾಗಿವೆ ಎಂದರು.
ಚಿಕ್ಕಮಗಳೂರು ಉರ್ದು ಅದಬ್ ಅಧ್ಯಕ್ಷ ದಾವೂದ್ ಆಲಿ ಜಂಶೀದ್ ಮಾತನಾಡಿ,ಇತ್ತೀಚೆಗೆ ಉರ್ದು ಶಾಲೆಗಳಲ್ಲಿ ಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚಾಗಿ ಉರ್ದು ಭಾಷೆಗೆ ಧಕ್ಕೆಯಾಗುತ್ತಿದೆ. ಆ ನಿಟ್ಟಿನಲ್ಲಿ ಸರ್ಕಾರ ಉರ್ದು ಶಾಲೆಗಳಲ್ಲಿ ಉರ್ದುಗೆ ಮೊದಲ ಆದ್ಯತೆ ನೀಡಿ ಭಾಷೆಯ ಸಂಸ್ಕೃತಿ ಉಳಿಸಬೇಕಿದೆ ಎಂದು ಹೇಳಿದರು.
ಪ್ರಸ್ತುತ ಉರ್ದು ಭಾಷೆ ಪಸರಿಸುವ ನಿಟ್ಟಿನಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉರ್ದು ಕಲಿಕಾ ಕೇಂದ್ರಗಳಿವೆ.ಹೀಗಾಗಿ ಅಕಾಡೆಮಿ ಅಧ್ಯಕ್ಷರು ಜಿಲ್ಲೆಗೆ ಕಲಿಕಾ ಕೇಂದ್ರದ ಕೊಠಡಿ ಒದಗಿಸಿದರೆ ಉಪಯೋಗವಾಗಲಿದೆ ಎಂದ ಅವರು ಜಿಲ್ಲೆಯಲ್ಲಿ ಉರ್ದು ಲೇಖಕರು, ಕವಿಗಳು ಉರ್ದು ಭಾಷೆಯಲ್ಲೇ ಕೃತಿಗಳನ್ನು ರಚಿಸಿ ರಾಜ್ಯ ಮಟ್ಟದಲ್ಲಿ ಮನ್ನಣೆ ಗಳಿಸಿದ್ದಾರೆೆ ಎಂದು ತಿಳಿಸಿದರು.
ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ನಯಾಜ್ ಮಾತನಾಡಿ, ಉರ್ದು ಭಾಷಾ ಸಂಸ್ಕೃತಿ ಬಹಳ ವಿಶಿಷ್ಟತೆಯನ್ನು ಹೊಂದಿದ್ದು ಬೆಳವಣಿಗೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದ ಅವರು ದೈನಂದಿನ ಬದುಕಿನಲ್ಲಿ ಕನ್ನಡ ಪ್ರೇಮದಂತೆ, ತಾಯಿಭಾಷೆ ಉರ್ದುವಿಗೂ ಹೆಚ್ಚಿನ ಸ್ಥಾನಮಾನ ನೀಡುವ ಮೂಲಕ ಕನ್ನಡ ಹಾಗೂ ಉರ್ದು ಬಾಂಧವ್ಯದ ಭಾಷೆಯಾಗಿ ಮುನ್ನಡೆಯುತ್ತಿದೆ ಎಂದರು.
ಇದೇ ವೇಳೆ ಸಮಾಜಮುಖಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮೊಹಮ್ಮದ್ ನಯಾಜ್, ಮಲ್ಲಿಗೆ ಸುಧೀರ್ ಹಾಗೂ ಅಜ್ಗರ್ ಆಲಿಖಾನ್ ಅವರಿಗೆ ಚಿಕ್ಕಮಗಳೂರು ರತ್ನ ಪ್ರಶಸ್ತಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಅಂಡೆಛತ್ರದಿoದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಮ್ ಅಮಟೆ ಮಕ್ಕಳ ಜಾಥಾಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಅಕಾಡೆಮಿಯ ರಾಜ್ಯ ನಿರ್ದೇಶಕ ಸೈಯದ್ ಅಬ್ರಾರ್, ಉರ್ದು ಉಪನ್ಯಾಸ ಪ್ರೊ.ಫರೋಜ್ ಮಸೂದ್ ಸಿರಾಜ್, ನಗರಸಭಾ ಸದಸ್ಯರಾದ ಮುನೀರ್ ಅಹ್ಮದ್, ಶಾದಂ ಆಲಂಖಾನ್, ಖಲಂಧರ್, ಚಿಕ್ಕಮಗಳೂರು ಉರ್ದು ಅದಬ್ ಉಪಾಧ್ಯಕ್ಷ ಖಲೀದ್ ಅಹ್ಮದ್, ಸದಸ್ಯರುಗಳಾದ ಅನ್ಸರ್ ಆಲಿ, ನಜ್ಮಾ, ಸುಲ್ತಾನ, ಫೈರೋಜ್ ಅಹ್ಮದ್, ಜಬ್ಬೀರ್ ಅಹ್ಮದ್ ಮತ್ತಿತರರಿದ್ದರು.
—-———-ಸುರೇಶ್