ಎಚ್.ಡಿ.ಕೋಟೆ:ರೈತರನ್ನು ಕಡೆಗಣಿಸಿರುವ ಚುನಾಯಿತರು-ರೈತ ಕಲ್ಯಾಣ ಸಂಘದ ಅಧ್ಯಕ್ಷ ಭೂಮಿ ಪುತ್ರ ಚಂದನ್ ಸಿ ಗೌಡ ಬೇಸರ

ಎಚ್.ಡಿ.ಕೋಟೆ:ಸಕಲ ಜೀವ ರಾಶಿಗಳಿಗೂ ಆಹಾರ ಒದಗಿಸುವ ಏಕೈಕ ಜೀವ ಅನ್ನದಾತ.ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆವೇ ಮೇಲು ಎಂದು ಸರ್ವಜ್ಞ ತಿಳಿಸಿದ್ದಾರೆ.ಬೇರೆ ವಲಯಕ್ಕಿಂತ ಕೃಷಿ ವಲಯದಿಂದ ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಸಂಗ್ರಹವಾಗುತ್ತಿದೆ. ಆದರೂ ಸಹ ಸರ್ಕಾರಗಳು ರೈತರನ್ನು ಕಡೆಗಣಿಸಿವೆ ಎಂದು ರಾಜ್ಯ ರೈತ ಕಲ್ಯಾಣ ಸಂಘದ ಅಧ್ಯಕ್ಷ ಭೂಮಿ ಪುತ್ರ ಚಂದನ್ ಗೌಡ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ರೈತರ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿ,ರೈತರು ದುಡ್ಡಿನ ವ್ಯಾಮೋಹಕ್ಕೆ ಕಳೆದುಕೊಂಡು ಜಮೀನು ಮಾರಿಕೊಳ್ಳಬೇಡಿ. ರೈತರಿಗೆ ಅಗತ್ಯ ಮಾಹಿತಿಗಳು ಹಾಗೂ ಸೌಲಭ್ಯಗಳನ್ನು ಸರ್ಕಾರ ಕಾಲ, ಕಾಲಕ್ಕೆ ಒದಗಿಸಬೇಕು. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ನಿಗದಿಗೊಳಿಸಬೇಕು. ರೈತರು ಕೃಷಿಯನ್ನು ಉದ್ಯಮವನ್ನಾಗಿ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.

ವಿವಿಧ ಕಲಾ ತಂಡಗಳು, ಹಳ್ಳಿಕಾರ್ ಎತ್ತುಗಳು, ಗಾಡಿಗಳು, ಸತ್ತಿಗೆ, ಚಂಡೆ ಮದ್ದಳ, ನಾದಸ್ವರ, ವೀರಗಾಸೆ ಕುಣಿತ, ಸೇರಿದಂತೆ ಕಲಾ ತಂಡಗಳೊಂದಿಗೆ ನೊಗ ಹಿಡಿದ ರೈತರು ಬಾಲಗಂಗಾಧರ ನಾಥ ಸ್ವಾಮೀಜಿ ಕಲ್ಯಾಣ ಮಂಟಪದಿಂದ ಡಾ.ಬಿ.ಆರ್. ಅಂಬೇಡ್ಕರ್ ಭವನದ ವರೆಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದರು.

2023-24ನೇ ಸಾಲಿನ ಕೃಷಿ ರತ್ನ ಪ್ರಶಸ್ತಿ ಪಡೆದ ತಾಲೂಕಿನ ರೈತರುಗಳಾದ ಎಂ.ಆರ್.ಮಂಜುನಾಥ ಸ್ವಾಮಿ, ಹನುಮೇಗೌಡ, ಗೌರಮ್ಮ, ಸಾಗರೆ ಪುಟ್ಟಸಿದ್ದಯ್ಯ, ಜಕ್ಕಳ್ಳಿ ಮಾಳ ನಾಗೇಗೌಡ, ಮಾದಾಪುರದ ಕೆಂಡಗಣ್ಣಪ್ಪ ಸೇರಿದಂತೆ ಅನೇಕ ರೈತರನ್ನು ಪ್ರಶಸ್ತಿ ನೀಡಿ, ಸನ್ಮಾನಿಸಿದರು.

ಕೃಷಿ ತಜ್ಞ ಡಾ.ನಾರಾಯಣ್ ರಾವ್ ಅವರು ಮಣ್ಣಿನ ಪರಿಚಯ ಹಾಗೂ ಬೇಸಾಯ ಪದ್ಧತಿಯ ಬಗ್ಗೆ ರೈತರಿಗೆ ವಿಶೇಷ ಉಪನ್ಯಾಸ ನೀಡಿದರು.

ಕೃಷಿ ಇಲಾಖೆಯ ಎಚ್‌.ಡಿ.ಕೋಟೆ ತಾಲೂಕು ಸಹಾಯಕ ನಿರ್ದೇಶಕರಿಂದ ಸಾವಿತ್ರಿ, ಪುಟ್ಟಲಕ್ಷ್ಮಮ್ಮ, ವೆಂಕಟರಮಣೇಗೌಡ, ಪುಟ್ಟಲಕ್ಷ್ಮಮ್ಮ ರೈತರನ್ನು ಸನ್ಮಾನಿಸಲಾಯಿತು.

ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ರೈತರು ಸ್ವಾಭಿಮಾನಿಗಳು. ತಾಲೂಕಿನಲ್ಲಿ ಅಪಾರ ಸಂಪತ್ತು ಹೊಂದಿದ್ದು, ರೈತರು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ನಾನು ಶಾಲಾ ದಿನಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಿದ್ದೇನೆ. ಎಲ್ಲಾ ವರ್ಗದ ಜನರಿಗೂ ಬೇಧ, ಭಾವವಿಲ್ಲದೇ ಆಹಾರ ಒದಗಿಸುವ ನಿಷ್ಕಲ್ಮಷ ಕಾಯಕಕ್ಕೆ‌ ನನ್ನ ನಮನಗಳು. ಡಿ.23 ಅನ್ನು ರೈತರ ದಿನಾಚರಣೆಯನ್ನಾಗಿ ಸರ್ಕಾರದ ವತಿಯಿಂದ ಆಚರಿಸಲು,ಕೃಷಿ ಸಚಿವರು ಹಾಗೂ ಮನವಿ ಮಾಡಲಾಗುವುದೆಂದು ತಿಳಿಸಿದರು.

ತಾಲೂಕು ಅಧ್ಯಕ್ಷ ಉಮೇಶ್,ರಘು ಗೌಡ, ನಾರಾಯಣ್ ತಿರುಮಲ, ಡ್ರೀಂ ಡೀಲ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಸುಹೇಲ್, ಕೇರಳದ ಫಿಲಿಪ್ ಜಾರ್ಜ್, ರಜಾಕ್, ಅಜಯ್ ಕುಮಾರ್, ಜೋಸೆಫ್, ಥಾಮಸ್, ಠಾಮಿ, ಮಹಿಳಾ ಅಧ್ಯಕ್ಷೆ ಉಷಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜಯರಾಮ್, ವೀರಭದ್ರ ಸೇರಿದಂತೆ ಇತರರಿದ್ದರು.

——ಶಿವು ಕೋಟೆ

ತಾಲೂಕಿನ ಸಂಪತ್ತು ರೈತರಿಗೆ ವರದಾನವಾಗಿದೆ. ರೈತ ಈ ದೇಶದ ಆತ್ಮ. ತಾಲೂಕು ನಾಲ್ಕು ಜಲಾಶಯಗಳನ್ನು ಹೊಂದಿದ್ದು, ಅಧಿಕ ಸಂಪತ್ತನ್ನು ಹೊಂದಿದೆ. ಏಕ‌ ಕಾಲದಲ್ಲಿ‌ ಒಂದೇ ಬೆಳೆ ಬೆಳೆಯುವುದರಿಂದ ಬೆಲೆ ಕುಸಿತವಾಗಲಿದೆ. ತಾಲೂಕಿ‌ಲ್ಲಿ ಈ ಹಿಂದೆ ಹತ್ತಿ ಬೆಳೆಯನ್ನು ಅತೀ ಹೆಚ್ಚಾಗಿ ಬೆಳೆಯುತ್ತಿದ್ದರು. ಇಂದಿನ ದಿನಗಳಲ್ಲಿ ಅರಿಶಿಣ, ಶುಂಠಿ, ಗೇಲ್ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಮಿಶ್ರ ಬೆಳೆಗಳನ್ನು ಬೆಳೆಯಬೇಕು. ರೈತರು ಕೃಷಿಯ ಬಗ್ಗೆ ದೊರೆಯುವ ಸೌಲಭ್ಯಗಳನ್ನು ಉಪಯೋಗಿ ಸಿಕೊಂಡು ಆರ್ಥಿಕವಾಗಿ ಸಬಲರಾಗಲಿ.

  • ಶಾಸಕ ಅನಿಲ್ ಚಿಕ್ಕಮಾದು

Leave a Reply

Your email address will not be published. Required fields are marked *

× How can I help you?