ಕೊಟ್ಟಿಗೆಹಾರ:ಯೇಸು ಕ್ರಿಸ್ತರು ಲೋಕಕ್ಕೆ ಶಾಂತಿ,ಭರವಸೆಯ ದೇವರಾಗಿದ್ದಾರೆ’ ಎಂದು ಬೀದರ್ ಚರ್ಚಿನ ಧರ್ಮಗುರು ಫಾ.ಜೇಸನ್ ರಾಯ್ ಹೇಳಿದರು.
ಅವರು ಬಣಕಲ್ ಬಾಲಿಕಾ ಮರಿಯ ಚರ್ಚಿನ ಕ್ರಿಸ್ ಮಸ್ ಹಬ್ಬದ ಸಂಭ್ರಮಿಕ ಪೂಜೆ ನೆರವೇರಿಸಿ ಮಾತನಾಡಿದರು.
‘ಯೇಸು ಕ್ರಿಸ್ತರು ದೀನರನ್ನು,ಬಲಹೀನರನ್ನು ಅತ್ಯಂತ ಕಿರಿಯರನ್ನು ಆಲಿಸುವ ದೇವರಾಗಿದ್ದಾರೆ.ಸಮಾಜದಲ್ಲಿ ದುರ್ಬಲರು,ಬಹಿಷ್ಕಾರ ಹೊಂದಿದವರಿಗೂ ಕ್ರಿಸ್ತರು ಶಾಂತಿಯ ಸಂದೇಶ ನೀಡಿದರು’ನಾವು ಜೀವನದಲ್ಲಿ ಎಲ್ಲರೊಂದಿಗೆ ಶಾಂತಿ, ಪ್ರೀತಿ,ತ್ಯಾಗದಿಂದ ಬದುಕಬೇಕು’ಎಂದರು.
ಧರ್ಮಗುರು ಫಾ.ಪ್ರೇಮ್ ಲಾರೆನ್ಸ್ ಡಿಸೋಜ ಮಾತನಾಡಿ’ ಕ್ರಿಸ್ತರು ಶಾಂತಿ, ಪ್ರೀತಿ ಕ್ಷಮೆಯ ಮೂಲಕ ಜಗತ್ತಿಗೆ ಬಂದು ಸಾಮಾನ್ಯ ಮನುಷ್ಯರಂತೆ ಜೀವಿಸಿ ನಮಗೆ ಉತ್ತಮ ಸಂದೇಶ ನೀಡಿದ್ದಾರೆ’ಎಂದರು.
ಪೂಜೆಯ ಬಳಿಕ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.ಈ ಸಂದರ್ಭದಲ್ಲಿ ಫಾ.ಆನಂದ್ ಕ್ಯಾಸ್ತಲಿನೊ,ಫಾ.ಥಾಮಸ್ ಕಲಘಟಗಿ ಇದ್ದರು.
ಕೆಳಗೂರು ಸಂತ ಸತುರ್ನಿನ್ ಚರ್ಚಿನಲ್ಲಿ ಹಾಸನ ಸಂತ ಜೋಸೆಫರ ಕಾಲೇಜಿನ ಧರ್ಮಗುರು ಫಾ.ರಾಯನ್ ಪಿರೇರಾ ಮಾತನಾಡಿ’ ‘ಮಾತೆ ಮರಿಯಮ್ಮನವರ ತ್ಯಾಗದಿಂದ ಯೇಸು ಕ್ರಿಸ್ತರು ಜಗತ್ತಿಗೆ ಮಾನವ ರೂಪದಲ್ಲಿ ಬಂದು ಮಾನವತಾವಾದಿಯಾಗಿದ್ದಾರೆ.ಅವರ ಆದರ್ಶ ಗುಣಗಳು ನಮಗೆ ಪ್ರೇರಣೆ’ ಎಂದು ಹೇಳಿದರು.
ಜಾವಳಿ, ಬಾಳೂರು ಚರ್ಚಿನಲ್ಲಿ ಫಾ.ಸ್ಟ್ಯಾನಿ ಲೋಫೆಜ್ ಕ್ರಿಸ್ ಮಸ್ ಹಬ್ಬದ ಬಲಿಪೂಜೆ ಅರ್ಪಿಸಿದರು. ಕೊಟ್ಟಿಗೆಹಾರ ಸೆಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಫಾ.ಜೇಸನ್ ರಾಯ್ ಬಲಿ ಪೂಜೆ ಅರ್ಪಿಸಿದರು. ಕೂವೆ ಹೋಲಿ ಕ್ರಾಸ್ ಚರ್ಚಿನಲ್ಲಿ ಫಾ.ಲ್ಯಾನ್ಸಿ ಪಿಂಟೊ ಹಬ್ಬದ ಸಂದೇಶ ನೀಡಿ’ವಸಂತಕಾಲದಲ್ಲಿ ಪ್ರಕೃತಿಯಲ್ಲಿ ಹೊಸ ಚಿಗುರು ಬರುವಂತೆ ಕ್ರಿಸ್ತರು ತಮ್ಮ ಜನನದ ಮೂಲಕ ಆಧ್ಯಾತ್ಮಿಕತೆಯ ಮರು ಜನನವಾಗಿ ಭರವಸೆಯ ಕಿರಣವಾಗಿದ್ದಾರೆ.ಕ್ರಿಸ್ಮಸ್ ಬದುಕು, ಪ್ರೀತಿ, ಬೆಳಕಿನ ಹಬ್ಬವಾಗಿದೆ’ ಜೀವನದಲ್ಲಿ ಪರೋಪಕಾರ ಬೆಳೆಸಿಕೊಳ್ಳಬೇಕು.ಸಾಮರಸ್ಯ, ಅನ್ಯೋನ್ಯತೆಯಿಂದ ಬದುಕುವ ಸಂದೇಶವನ್ನು ಯೇಸು ನೀಡಿದ್ದಾರೆ’ಎಂದು ತಿಳಿಸಿದರು.
ಎಲ್ಲಾ ಚರ್ಚುಗಳು ವಿದ್ಯುತ್ ದೀಪ ಅಲಂಕಾರಗಳಿಂದ ಕಂಗೊಳಿಸುತ್ತಿದ್ದವು.ಕ್ರಿಸ್ತರ ಜನನದ ಗೋದಲಿಗಳು ಆಕರ್ಷಕವಾಗಿ ಗಮನ ಸೆಳೆದವು.ಪೂಜೆಯ ಬಳಿಕ ಕೇಕ್,ಕಾಫಿಯನ್ನು ನೆರೆದ ಭಕ್ತರಿಗೆ ವಿತರಿಸಲಾಯಿತು.
——––ಆಶಾ ಸಂತೋಷ್ ಅತ್ತಿಗೆರೆ