ತುಮಕೂರು:ವಿದ್ಯಾರ್ಥಿಗಳ ಜೀವನದಲ್ಲಿ ಪಾಠದ ಜೊತೆಗೆ ಆಟೋಟವು ಸಹ ಉತ್ತಮವಾದ ಪಾತ್ರವನ್ನು ವಹಿಸುತ್ತದೆ ಎಂದು ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಕೆ.ಬಿ ಲಿಂಗೇಗೌಡ ತಿಳಿಸಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಸಾಹೇ ವಿಶ್ವವಿದ್ಯಾಲಯ ಹಾಗೂ ಎಸ್‌ಎಸ್‌ಐಟಿ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನಗಳ ರಾಜ್ಯಮಟ್ಟದ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾವಳಿಗೆ ಚಾಲನೆಯನ್ನು ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಾಲೇಜಿನಲ್ಲಿ ನಡೆಯುವಂತಹ ಕ್ರೀಡಾಕೂಟದಂತಹ ಹಲವು ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ಸ್ಪರ್ಧಾತ್ಮಕ ಜಗತ್ತಿಗೆ ತಮ್ಮನ್ನು ತಾವು ತೆರೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಾಹೇ ವಿವಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಫ್ಲೋರಿಡಾ ಯೂನಿವರ್ಸಿಟಿಯ ಪ್ರೊ. ಎಸ್. ಎಸ್. ಅಯ್ಯಂಗಾರ್ ಮಾತನಾಡಿ, ಕ್ರೀಡೆ ಎನ್ನುವುದು ಜೀವನದಲ್ಲಿ ಪ್ರಮುಖವಾದ ಒಂದು ಅಂಶ. ಕ್ರೀಡೆ ಮನುಷ್ಯನಿಗೆ ಉತ್ತಮ ಯೋಚನೆ, ಕ್ರಿಯಾ ಶೀಲತೆ, ಧನಾತ್ಮಕ ಚಿಂತನೆಯನ್ನು ನೀಡುತ್ತದೆ ಅಲ್ಲದೆ ಮನುಷ್ಯ ದೈಹಿಕವಾಗಿ, ಆರೋಗ್ಯವಾಗಿ ಉತ್ತಮ ಜೀವನ ನಡೆಸಲು ಸಹಕಾರಿ ಎಂದು ಹೇಳಿದರು.
ಸಾಹೇ ವಿವಿಯ ಕುಲಸಚಿವರಾದ ಡಾ. ಎಂ. ಝಡ್. ಕುರಿಯನ್ ಅವರು ಮಾತನಾಡಿ, ಕ್ರೀಡಾ ಚಟುವಟಿಕೆಗಳಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಹೆಚ್ಚಾಗುತ್ತದೆ, ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ನಾಯಕತ್ವದ ಗುಣ ಹೆಚ್ಚಾಗುತ್ತದೆ ಹಾಗೂ ತಮ್ಮ ತಂಡಕ್ಕಾಗಿ ಹೋರಾಡುವ ಮನಸ್ಥಿತಿಯನ್ನ ಕ್ರೀಡಾಪಟುಗಳು ಬೆಳೆಸಿಕೊಳ್ಳುತ್ತಾರೆ ಎಂದು ತಿಳಿಸಿದರು.
ಎಸ್‌ಎಸ್‌ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಸ್ ರವಿಪ್ರಕಾಶ ಮಾತನಾಡಿ ವಾಲಿಬಾಲ್ ಪಂದ್ಯಾವಳಿಯಲ್ಲಿ ಹಲವು ಕಾಲೇಜಿನ ತಂಡಗಳು ಭಾಗವಹಿಸಿವೆ. ಆಟದಲ್ಲಿ ಸೋಲು ಗೆಲುವು ಅನ್ನುವುದಕ್ಕಿಂತ ಸ್ಪಧೆಯಲ್ಲಿ ಭಾಗವಹಿ ಸುವುದು ಪ್ರಮುಖವಾಗಿದೆ. ಹಾಗಾಗಿ ಎಲ್ಲರೂ ಉತ್ತಮವಾಗಿ ಪಂದ್ಯದಲ್ಲಿ ಪಾಲ್ಗೊಳಿ ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಿದರು.
ಈ ವಾಲೀಬಾಲ್ ಪಂದ್ಯದಲ್ಲಿ ಹಾಸನ, ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವು ಕಾಲೇಜಿನ ತಂಡಗಳ 16 ಪುರುಷರ ತಂಡ ಹಾಗೂ 8 ಮಹಿಳಾ ತಂಡಗಳು ಭಾಗವಹಿಸಿದ್ದು ಈ ಪೈಕಿ ಒಟ್ಟು 12 ಪಂದ್ಯಗಳು ನಡೆದಿದ್ದು ನಾಲ್ಕು ತಂಡಗಳಾದ ಎಸ್‌ಎಸ್‌ಐಟಿ, ಎಸ್‌ಐಟಿ, ಎನ್‌ಎಂಎಐಟಿ ಮತ್ತು ಬಿಜಿಎಸ್‌ಸಿಇ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ. ಇಂದು ಮಹಿಳಾ ವಿಭಾಗಕ್ಕೆ ಸೆಣಸಾಟ ನಡೆಯಲಿದೆ.
ಈ ವೇಳೆ ರೆಫರಿಗಳಾಗಿ ಸುರೇಶ್, ಗಿರೀಶ್, ಚನ್ನೆಗೌಡ, ಪ್ರದೀಪ್,ನಿಖಿಲ್ ಗೌಡ ಹಾಗೂ ನಂದೀಶ್ ಪಾಲ್ಗೊಂಡು ಪಂದ್ಯಗಳನ್ನು ನಡೆಸಿಕೊಟ್ಟರು.
ಇನ್ನು ಈ ವಾಲಿಬಾಲ್ ಪಂದ್ಯದ ಉದ್ಘಾಟನ ಕಾರ್ಯಕ್ರಮದಲ್ಲಿ ಸಾಹೇ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಾದ ಡಾ.ಜಿ ಗುರುಶಂಕರ್, ಹಾಗೂ ಎಸ್‌ಎಸ್‌ಐಟಿ ಕಾಲೇಜಿನ ಅಕಾಡೆಮಿಕ್ ಡೀನ್ ಡಾ. ರೇಣುಕಲತಾ ಎಸ್, ಎಸ್‌ಎಸ್‌ಎಸ್‌ಇ ಪ್ರಾಂಶುಪಾಲರಾದ ಡಾ. ಸಂಜೀವ್ ಕುಮಾರ್, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ರುದ್ರೇಶ್ ಕೆ.ಆರ್ ಮತ್ತು ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ಕ್ರೀಡಾಪಟುಗಳು, ವಿದ್ಯಾರ್ಥಿಗಳು ಹಾಜರಿದ್ದರು.