ಚಿಕ್ಕಮಗಳೂರು-ಅದ್ಧೂರಿಯಾಗಿ ನೆರವೇರಿದ ದ್ರಾವಿಡ ಸಂಸ್ಕೃತಿ ಸಮ್ಮಿಲನೋತ್ಸವ-ತಮಿಳು ಜನಾಂಗಕ್ಕೆ ಸಮುದಾಯ ಭವನ ನಿರ್ಮಿಸಿಕೊಡುವ ಭರವಸೆ ನೀಡಿದ ಹೆಚ್.ಡಿ.ತಮ್ಮಯ್ಯ

ಚಿಕ್ಕಮಗಳೂರು-ಬಹುಭಾಷಿಗರನ್ನು ಹೊಂದಿರುವ ಸದೃಢ ದೇಶ ಭಾರತ.ವಿವಿಧತೆಯಲ್ಲಿ ಏಕತೆ ಮೆರೆದಿರುವ ಪ್ರತಿ ರಾಜ್ಯಗಳು ಭಾರತಾಂಬೆಯ ಕೂಸುಗಳು.ಆಯಾ ಭಾಷಿಗರು ಮಾತೃಭಾಷೆಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಸೊಗಡನ್ನು ಎಲ್ಲೆಡೆ ಪಸರಿಸಲು ಮುಂದಾಗಬೇಕು ಎಂದು ಶಾಸಕ ಹೆಚ್. ಡಿ.ತಮ್ಮಯ್ಯ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಶ್ರೀ ಸುಬ್ರಮಣ್ಯ ಭಾರತಿ ಮಹಾಸಭಾದ ತಮಿಳು ಸಂಘದಿoದ ಆಯೋಜಿಸಿದ್ಧ ದ್ರಾವಿಡ ಸಂಸ್ಕೃತಿ ಸಮ್ಮಿಲನೋತ್ಸವ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಹಲವಾರು ದಶಕಗಳ ಹಿಂದೆಯೇ ತಮಿಳುನಾಡಿನ ನಿವಾಸಿಗಳು ಕರ್ನಾಟಕದಲ್ಲಿ ಬದುಕು ಕಂಡುಕೊoಡು ಭಾಷಾಭಿಮಾನ ತೋರಿದ್ದಾರೆ. ಅಲ್ಲದೇ ತಾಯ್ನಡಿಗೆ ಅತ್ಯಂತ ಪ್ರಾಮುಖ್ಯತೆ ನೀಡಿದ್ದಾರೆ. ಹೀಗಾಗಿ ಎರಡು ರಾಜ್ಯಗಳಲ್ಲಿ ಸಾಮರಸ್ಯ ಮೂಡಿಸುವ ಸಲುವಾಗಿ ಸರ್ಕಾರ ರಾಜ್ಯದಲ್ಲಿ ತಿರುವಳ್ಳವರ್ ಹಾಗೂ ತಮಿಳು ನಾಡಿನಲ್ಲಿ ಸರ್ವಜ್ಞ ಪುತ್ಥಳಿ ಸ್ಥಾಪಿಸಿ ಬಾಂಧವ್ಯ ವೃದ್ದಿಸಿದೆ ಎಂದರು.

ತಮಿಳು ಭಾಷೆ ವಿವಿಧ ದೇಶಗಳಲ್ಲಿ ಪ್ರಖ್ಯಾತಿ ಹೊಂದಿದೆ. ಮಲೇಶಿಯಾ, ಸಿಂಗಾಪುರ ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಮಿಳರು ಬದುಕು ಕಟ್ಟಿಕೊಂಡಿದ್ದಾರೆ ಎಂದ ಅವರು ಯಾವುದೇ ಸಮಾಜವು ಏಕಾಂಗಿ ಹೋರಾಟದ ಬದಲಾಗಿ ಸಂಘಟನಾತ್ಮಕವಾಗಿ ಪ್ರಯತ್ನಿಸಿದರೆ ಮಾತ್ರ ಬೇಡಿಕೆಗಳನ್ನು ಸಮಗ್ರವಾಗಿ ಈ ಡೇರಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಕಾಫಿ ತೋಟದ ಮರಗಸಿ, ಕೂಲಿಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಸ್ಥ ವೃತ್ತಿಯಲ್ಲಿ ತಮಿಳು ಜನಾಂಗ ಶ್ರಮಿಕರಾಗಿ ದುಡಿಯುತ್ತಿದೆ. ನಾಡಿನಲ್ಲಿ ಅಲ್ಪಭಾಷೆ ಇರಬಹುದು. ಆದರೆ ರಾಜ್ಯದಲ್ಲಿ ತಮಿಳರಿಗೆ ಕೊರತೆ ಉಂಟಾಗಿಲ್ಲ. ಹೀಗಾಗಿ ಸರ್ಕಾರ ರಾಜ್ಯಾದ್ಯಂತ ತಮಿಳು ಶಾಲೆಗಳನ್ನು ತೆರೆದು ಸಮುದಾಯಕ್ಕೆ ಪ್ರೋತ್ಸಾಹಿಸುತ್ತಿದೆ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ತಮಿಳು ಜನಾಂಗಕ್ಕೆ ಸ್ವಂತ ಸಮುದಾಯ ಭವನದ ಕೊರತೆ ಅನೇಕ ವರ್ಷಗಳಿಂದ ಇದೆ. ಹಿಂದಿನ ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ವಹಿಸದಿರುವುದು ಬೇಸರದ ಸಂಗತಿ. ಈ ಬಾರಿ ಕ್ಷೇತ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಸದ್ಯದಲ್ಲೇ ತಮಿಳರಿಗೆ ಭವನ ನಿರ್ಮಿಸಲು ಜಾಗದ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ತಮಿಳು ಭಾಷೆ ಕೇವಲ ಭಾರತದ್ದಲ್ಲ, ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಒಂದು. ಭಾಷೆಗಳು ಬೇರೆಯಾದರೂ ಸಂಸ್ಕೃತಿ ಹಾಗೂ ಭಾವನೆಗಳಲ್ಲಿ ನಾವುಗಳು ಒಂದೇ. ಕೆಲವರು ಭಾಷೆಯ ಆಧಾರವಾಗಿಟ್ಟುಕೊಂಡು ಬೇರೆ ಮಾಡುವ ಪ್ರಯತ್ನಗಳು ಇಂದಿಗೂ ನಡೆಯುತ್ತಿರುವುದು ವಿಷಾಧನೀಯ ಎಂದರು.

ಭಾರತದಲ್ಲಿ ಸಾಮ್ರಾಜ್ಯ ವಿಸ್ತರಣೆ, ಪ್ರತಿಷ್ಟೆ, ಹೆಣ್ಣು ಹಾಗೂ ದ್ವೇಷಕ್ಕಾಗಿ ಸಾಲು ಸಾಲು ಯುದ್ಧಗಳು ನಡೆದಿವೆ. ಆದರೆ ಭಾಷೆಗಾಗಿ ಎಂದಿಗೂ ಯುದ್ಧ ನಡೆದಿಲ್ಲ.ಭಾರತದ ಒಂದು ಭಾಷೆ, ಇನ್ನೊಂದು ಭಾಷೆಯನ್ನು ಒಪ್ಪಿ-ಅಪ್ಪಿಕೊಂಡು ನಡೆದಿರುವ ಕಾರಣ ಸಮೃದ್ಧವಾಗಿ ರಾಷ್ಟಾದ್ಯಂತ ಬೆಳವಣಿಗೆಗೆ ಪೂರಕವಾಗಿದೆ ಎಂದು ಹೇಳಿದರು.

ಅನಾದಿ ಕಾಲದಲ್ಲಿ ಜೋಳರು ದಕ್ಷಿಣ ಭಾರತದ ಬಹುಭಾಗ ಆಳ್ವಿಕೆ ನಡೆಸಿದರೂ ಕನ್ನಡವನ್ನು ಕೊಲ್ಲಲಿಲ್ಲ. ಹೊಯ್ಸಳರು ತಮಿಳುನಾಡಿನ ಅರ್ಧಭಾಗ ಆಳ್ವಿಕೆ ನಡೆಸಿದರೂ ತಮಿಳು ಭಾಷೆ ಕೊಲ್ಲದೇ ಬೆಳೆಸಿದರು. ಭಾಷೆಗಳು ಒಂದುಗೂಡಿಸಲಿದೆ ಹೊರತು ಬೇರೆ ಮಾಡುವುದಿಲ್ಲ. ಹೀಗಾಗಿ ಕನ್ನಡ-ತಮಿಳು ಅಕ್ಕ ತಂಗಿ ಭಾಷೆಗಳಿದ್ದಂತೆ ಎಂದರು.

ಒಣಗುವ ಸ್ಥಿತಿಯಲ್ಲಿರುವ ಭಾಷೆಯ ಬೇರು ಗಟ್ಟಿಗೊಂಡರೆ ಮಾತ್ರ ಬೆಳವಣಿಗೆ ಹೊಂದಲು ಸಾಧ್ಯ ಎಂದ ಅವರು ಎಲ್ಲರೂ ಒಂದಾಗಿ ಭಾಷೆಯ ಬೇರಿಗೆ ಅಭಿಮಾನ ಎಂಬ ನೀರನ್ನು ಚಿಮ್ಮಿಸಿದಾಗ ಬಲಿಷ್ಟ ಗೊಂಡು ಹೆಮ್ಮರವಾಗಿ ಬೆಳೆಯಲು ಸಾಧ್ಯ ಎಂಬುದನ್ನು ಮನಗಾಣಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಸೇರಿದಂತೆ ತಮಿಳುನಾಡಿನಲ್ಲಿ ಮಾತೃಭಾಷೆಯ ಶಾಲೆಗಳು ಮುಚ್ಚಿ ಅಪಾಯದ ಸ್ಥಿತಿಯಲ್ಲಿದೆ. ಈ ಬಗ್ಗೆ ಆಲೋಚಿಸದೇ ವಿಳಂಭ ತೋರಿದರೆ ಆಡುಭಾಷೆ ನಶಿಸುವ ಜೊತೆಗೆ ಸಾವಿರಾರು ವರ್ಷಗಳ ಸಂಸ್ಕೃತಿ, ಪರಂಪರೆ ಶಾಶ್ವತವಾಗಿ ಕಣ್ಮರೆಯಾಗುವುದರಲ್ಲಿ ಸಂಶಯವಿಲ್ಲ ಎಂದು ಸಿ.ಟಿ ರವಿ ಎಚ್ಚರಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ದೇಶದಲ್ಲೇ ಮೊಟ್ಟ ಮೊದಲು ತಮಿಳು ಭಾಷೆಗೆ ರಾಷ್ಟ್ರೀಯ ಸ್ಥಾನಮಾನ ದೊರೆತಿದೆ. ತಮಿಳಿನಲ್ಲಿ ಕವಿದಾರ್ಶನಿಕರು, ಲೇಖಕರು ಸಾಹಿತ್ಯಲೋಕಕ್ಕೆ ಅಪಾರ ಕೊಡುಗೆ ನೀಡಿ ಭಾಷೆಯ ಸೊಗಡನ್ನು ಎತ್ತಿಹಿಡಿಯುವ ಕೆಲಸ ಮಾಡಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಮಾಜಿ ವಿಧಾನ ಪರಿಷತ್ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಮಾತನಾಡಿ, ತಮಿಳರು ಅತ್ಯಂತ ಶ್ರಮ ಜೀವಿಗಳು ಹಾಗೂ ಮೋಸ, ವಂಚನೆ ಅರಿವಿಲ್ಲ. ಶ್ರಮಿಕರಾಗಿ ದುಡಿಯುವ ಜನಾಂಗಕ್ಕೆ ಸಮುದಾಯ ಭವನ ಕೊರತೆ ಎದ್ದು ಕಾಣುತ್ತಿರುವುದು ಶೋಚನೀಯ. ಮುಂದಿನ ದಿನಗಳಲ್ಲಿ ಶಾಸಕರ ನೇತೃತ್ವದಲ್ಲಿ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ಕೊಟ್ಟರು.

ರೈತಪರ ಹೋರಾಟಗಾರ ಎಸ್.ವಿಜಯ್‌ಕುಮಾರ್ ಮಾತನಾಡಿ, ಕ್ಷೇತ್ರದಲ್ಲಿ ಹದಿಮೂರು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ತಮಿಳಿರಿಗೆ ಯಾವುದೇ ಪಕ್ಷಗಳು ರಾಜಕೀಯ,ಸಾಮಾಜಿಕವಾಗಿ ಸ್ಪಂದಿಸುತ್ತಿಲ್ಲ. ಹಾಗಾಗಿ ಯಾವುದೇ ಪ್ರಾಧಿಕಾರ ಅಥವಾ ನಿಗಮಗಳಲ್ಲಿ ತಮಿಳರಿಗೆ ನಾಮಿನಿ ಸ್ಥಾನ ಕಲ್ಪಿಸಿಕೊಟ್ಟರೆ ಜನಾಂಗಕ್ಕೆ ಒಳಿತಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸುಬ್ರಮಣ್ಯ ಭಾರತಿ ಮಹಾಸಭಾ ಅಧ್ಯಕ್ಷ ಜಿ.ರಘು ವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ವಿವಿಧ ಕಲಾತಂಡಗಳೊoದಿಗೆ ನಗರದ ತಾಲ್ಲೂಕು ಕಚೇರಿಯಿಂದ ಅಂಬೇಡ್ಕರ್ ಭವನದವರೆಗೆ ನೂರಾರು ಸಂಖ್ಯೆಯಲ್ಲಿ ತಮಿಳರು ಮೆರವಣಿಗೆ ಜಾಥಾ ನಡೆಸಿದರು.

ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್, ಸಿಪಿಐ ರಾಜ್ಯ ಮಂಡಳಿ ಸದಸ್ಯ ಹೆಚ್. ಎಂ.ರೇಣುಕಾರಾಧ್ಯ, ತಿರುವಳ್ಳವರ್ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಂಕರ್‌ಕುಮಾರ್, ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಗುಣಶೇಖರ್, ಮಾಜಿ ನಗರಸಭಾ ಅಧ್ಯಕ್ಷ ಮುತ್ತಯ್ಯ, ಮಹಾಸಭಾ ಕಾರ್ಯದರ್ಶಿ ಎಸ್.ಅಣ್ಣವೇಲು, ಖಜಾಂಚಿ ಎ.ಲಕ್ಷ್ಮಿ ನಾರಾಯಣ, ಉಪಾಧ್ಯಕ್ಷರಾದ ಸಿ.ಎನ್.ರಾಮ ಸ್ವಾಮಿ, ಕೃಷ್ಣರಾಜ್, ಸಹ ಕಾರ್ಯದರ್ಶಿಗಳಾದ ಸಿ.ಕೆ.ಮೂರ್ತಿ, ಕೆ.ಕುಮಾರ್, ಯುವಘಟಕದ ಜಿ.ಕೆ. ಕಾರ್ತೀಕ್, ಮಹಿಳಾ ಮುಖಂಡರಾದ ಸತ್ಯವತಿ, ಲಕ್ಷ್ಮಿ, ಮುಖಂಡರುಗಳಾದ ರಾಮಣ್ಣ, ಕೃಷ್ಣರಾಜ್ ಇದ್ದರು.

—————-—ಸುರೇಶ್

Leave a Reply

Your email address will not be published. Required fields are marked *

× How can I help you?