
ಹೊಳೆನರಸೀಪುರ:ದೇಹದಲ್ಲಿನ ನಾಡಿ ಮತ್ತು ಚಕ್ರಗಳಿಗೆ ಶಕ್ತಿಯನ್ನು ನೀಡಿ ಪ್ರಾಣ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ಚಿಕಿತ್ಸಾ ಪದ್ದತಿಯನ್ನು ಚೀನಾದ ಮಾಸ್ಟರ್ ಚೋವಾ ಕೋಕ್ ಸುಯಿ ಕಂಡುಹಿಡಿದರು. ಈ ಚಿಕಿತ್ಸೆಯಲ್ಲಿ ಯಾವುದೇ ರೀತಿಯ ಔಷಧಿಯನ್ನು, ತೆಗೆದುಕೊಳ್ಳದೇ ರೋಗಗಳನ್ನು ಗುಣಪಡಿಸಲು ಸಾಧ್ಯ ಇದೆ. ಜೊತೆಗೆ ಮಾನಸಿಕ, ದೈಹಿಕ ಸ್ಥಿತಿ ಸುಧಾರಿಸಿ ಆದ್ಯಾತ್ಮಿಕ ಜ್ಞಾನವೂ ಉತ್ತಮ ಆಗುತ್ತದೆ ಎಂದು ಬೆಂಗಳೂರಿನ ಎಕ್ಸ್ ಫ್ಲೋರ್ ಪ್ರಾಣಿಕ್ ಹೀಲಿಂಗ್ ಸಂಸ್ಥೆಯ ತರಬೇತಿ ಮುಖ್ಯಸ್ಥೆ ಉಮಾ ವಿವರಿಸಿದರು.
ಶನಿವಾರ ಕೊನೋರಿ ರಾಮಶೆಟ್ಟರ ಛತ್ರದಲ್ಲಿ ಆಯೋಜಿಸಿದ್ದ ಪ್ರಾಣಿಕ್ ಹೀಲಿಂಗ್ ತರಬೇತಿ ಶಿಬಿರದಲ್ಲಿ ಮಾತನಾಡಿ ದೇಶದಲ್ಲಿ ಹಾಲೋಪತಿ, ಹೋಮಿಯೋಪತಿ, ಆಯುರ್ವೇದ ಚಿಕಿತ್ಸಾ ಪದ್ದತಿ ಹಲವಾರು ದಶಕಗಳಿಂದ ಜಾರಿಯಲ್ಲಿದೆ. ಆದರೂ ಇಂದಿಗೂ ನಮ್ಮ ಅಜ್ಜಿ ಸೋಕು ತೆಗೆಯುವ, ದೃಷ್ಟಿ ತೆಗೆಯುವ ಪದ್ದತಿಯಿಂದ ಸಮಸ್ಯೆ ಸರಿಪಡಿಸುತ್ತಿದ್ದಾರೆ.
ಅಜ್ಜಿಯ ಸೋಕು ತೆಗೆಯುವ ಪದ್ದತಿಗಾಗಲಿ, ಪ್ರಾಣಿಕ್ ಹೀಲಿಂಗ್ ಪದ್ದತಿಗಾಗಲಿ ಯಾವುದೇ ವೈಜ್ಞಾನಿಕ ಪದ್ದತಿಯಿಂದ ವಿವರಿಸಲು ಸಾಧ್ಯ ಇಲ್ಲ. ಆದರೆ ಪ್ರಾಣಿಕ್ ಚಿಕಿತ್ಸೆ ತೆಗೆದುಕೊಂಡು ತಮ್ಮ ಆರೋಗ್ಯ ಮತ್ತು ಮಾನಸಿಕ ಸಮಸ್ಯೆಗಳನ್ನು ಸರಿಪಡಿಸಿಕೊಂಡ ಲಕ್ಷಾಂತರ ಜನರಿದ್ದಾರೆ. ಔಷಧಿ, ಇಂಜೆಕ್ಸನ್ ನೀಡಿದೆ, ಶುಲ್ಕ ತೆಗೆದುಕೊಳ್ಳದೆ ನಾವು ನೀಡುತ್ತಿರುವ ಪ್ರಾಣಿಕ್ ಚಿಕಿತ್ಸೆ ಪಡೆದುಕೊಂಡರೆ ನಿಮಗೆ ಸಿಗುವ ಫಲಿತಾಂಶ ಸಕಾರಾತ್ಮಕವಾಗಿ ಇರುತ್ತದೆ ಎಂದರು.
ಪುರಸಭಾಧ್ಯಕ್ಷ ಕೆ. ಶ್ರೀಧರ್ ಮಾತನಾಡಿ, ಅನೇಕ ಉತ್ತಮ ಚಿಕಿತ್ಸಾ ಪದ್ದತಿಗಳು ಅನೇಕರಿಗೆ ಗೊತ್ತಿಲ್ಲ ಪ್ರಾಣಿಕ್ ಹೀಲಿಂಗ್ ಬಗ್ಗೆ ಜನರಿಗೆ ಉತ್ತಮ ಅಭಿಪ್ರಾಯ ಇದೆ. ಇವರು ಹೇಳುವುದನ್ನು ನೀವು ನಂಬದಿದ್ದರೆ ಒಮ್ಮೆ ಉಚಿತವಾಗಿ ಚಿಕಿತ್ಸೆ ಪಡೆದುಕೊಂಡು ನೋಡಿ ಪರೀಕ್ಷಿಸಿ ನಂತರ ನೀವು ತರಬೇತುದಾರರಾಗಿ ಎಂದು ತಿಳಿಸಿದರು.

ವಾಸವಿ ವಿದ್ಯಾಸಂಸ್ಥೆಯ ಬಾಲಾಜಿ, ಪೋದಾರ್ ಜಂಬೋಕಿಡ್ಸ್ ಸಂಸ್ಥೆಯ ಹೇಮಾ ನಾಗೇಂದ್ರ ಮಾತನಾಡಿದರು.
ವಾಸವಾಂಭ ಕೋ ಆಪರೇಟೀವ್ ಬ್ಯಾಂಕ್ ಅಧ್ಯಕ್ಷ ಗೌತಮ್ ಬಾಗವಹಿಸಿದ್ದರು.
ಕಾರ್ಯಕ್ರಮ ಸಂಘಟಕಿ ಕಾವ್ಯ ಶರತ್ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ ಭಾಗವಹಿಸಿದ್ದ 30 ಕ್ಕೂ ಹೆಚ್ಚು ಜನರು ನಾನು ಇಲ್ಲಿಗೆ ಬರುವಾಗ ಮಂಡಿನೋವು, ಸೊಂಟ ನೋವು ತುಂಬಾ ಇತ್ತು. ಈಗ ಸುಮಾರು 70 ರಷ್ಟು ಆರಾಮವಾಗಿದೆ ಎಂದರು.
————-ಸುಕುಮಾರ್