ಅರಕಲಗೂಡು:ಬಡವರಿಗೆ 350 ನಿವೇಶನಗಳ ಶೀಘ್ರ ವಿಲೇವಾರಿಗೆ ಎಚ್.ಎಸ್.ಮಂಜುಶೆಟ್ಟಿಗೌಡ ಆಗ್ರಹ

ಅರಕಲಗೂಡು:ಬಡವರು ಮನೆಕಟ್ಟಿಕೊಳ್ಳಲು ನಿವೇಶನ ವಿತರಣೆ, ಕ್ರೀಡಾಂಗಣ ಅಭಿವೃದ್ಧಿ, ಅರ್ಧಕ್ಕೆ ನಿಂತಿರುವ ಯು.ಜಿ.ಡಿ ಕಾಮಗಾರಿ ಪೂರ್ಣಗೊಳಿಸುವುದು,ಪುರಾತನ ಕೋಟೆ ಕುರುಹುಗಳ ಸಂರಕ್ಷಣೆ, ಪ.ಪಂ ಗೆ ನೂತನ ಕಟ್ಟಡ ನಿರ್ಮಾಣ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕಾಮಗಾರಿಗಳ ಕುರಿತು ಬಜೆಟ್ ಪೂರ್ವ ಸಭೆಯಲ್ಲಿ ಸಾರ್ವಜನಿಕರಿಂದ ಸಲಹೆಗಳು ಹರಿದು ಬಂದವು.

ಪ.ಪಂ ಅಧ್ಯಕ್ಷ ಎಸ್.ಎಸ್. ಪ್ರದೀಪ್ ಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ಸಾರ್ವಜನಿಕರ ಮೊದಲ ಬಜೆಟ್ ಪೂರ್ವಭಾವಿ ಸಭೆ ನಡೆಯಿತು.

ಪ.ಪಂ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜುಶೆಟ್ಟಿಗೌಡ ಬಡವರಿಗೆ ಮನೆ ಕಟ್ಟಿಕೊಳ್ಳಲು 350 ನಿವೇಶನಗಳನ್ನು ನಿರ್ಮಿಸಿ ದಶಕಗಳೆ ಕಳೆದಿದ್ದರೂ ವಿತರಣೆ ನಡೆದಿಲ್ಲ. ಸಾವಿರಾರು ಮಂದಿ ನಿವೇಶನ ಕೋರಿ ಅರ್ಜಿಸಲ್ಲಿಸಿ ಕಾಯುತ್ತಿದ್ದಾರೆ. ಈಗ ನಿರ್ಮಿಸಿರುವ ನಿವೇಶನಗಳಲ್ಲಿ ಕೆಲವನ್ನು ಬಹಿರಂಗ ಹರಾಜು ಮಾಡಿ ಅದರಿಂದ ಬರುವ ಹಣದಲ್ಲಿ ಇನ್ನಷ್ಟು ನಿವೇಶನಗಳನ್ನು ಅಭಿವೃದ್ದಿ ಪಡಿಸಬೇಕು, ಯು.ಜಿ.ಡಿ ಕಾಮಗಾರಿ ಪೂರ್ಣಗೊಳಿಸುವುದು, ರಸ್ತೆ ಬದಿ ವ್ಯಾಪಾರಿಗಳಿಗೆ ನಿಗದಿತ ಜಾಗ ಗುರುತಿಸಿ ವ್ಯಾಪಾರಕ್ಕೆ ಅನುವು ಮಾಡಿಕೊಡುವುದು, ಒಳಾಂಗಣ ಕ್ರೀಡಾಂಗಣ, ಈಜುಕೊಳ ನಿರ್ಮಿಸುವಂತೆ ಸಲಹೆ ಮಾಡಿದರು.

ಜಿಲ್ಲಾ ವೀರಶೈವ ಲಿಂಗಾಯಿತ ಮಹಾಸಭಾ ಕಾರ್ಯದರ್ಶಿ ಎನ್. ರವಿಕುಮಾರ್, ಬಡವರಿಗೆ ನಿವೇಶನ ವಿತರಣೆಗೆ ಕ್ರಮ ಕೈಗೊಳ್ಳದಿದ್ದರೆ ದೊಡ್ಡಮಟ್ಟದ ಹೋರಾಟಕ್ಕೆ ಮುಂದಾಗಬೇಕಾ ಗುತ್ತದೆ ಎಂದು ಎಚ್ಚರಿಸಿದರು.

ಬಹಳಷ್ಟು ಪ.ಪಂ ಸದಸ್ಯರು ಸಭೆಗೆ ಗೈರು ಹಾಜರಾಗಿರುವ ಕುರಿತು ತೀವ್ರ ಅಸಮಧಾನ ವ್ಯಕ್ತಪಡಿಸಿ, ಪುರಾತನ ಕಾಲದ ಕೋಟೆ ಅವಶೇಷಗಳ ಸಂರಕ್ಷಣೆಗೆ ಕ್ರಮಕೈಗೊಳ್ಳಬೇಕು, ಸಾರ್ವಜನಿಕ ಗ್ರಂಥಾಲಯದ ಕಟ್ಟಡ ಶಿಥಿಲವಾಗಿದೆ, ಹೊಸಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಮಾಜಿ ಉಪಾಧ್ಯಕ್ಷ ಎ. ಪಿ.ರಮೇಶ್, ಗ್ರಂಥಾಲಯ ರಸ್ತೆ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮರ್ಪಕ ನಿರ್ವಹಣೆ ಇಲ್ಲದೆ ತೊಂದರೆಯಾಗಿದೆ ಕ್ರಮ ವಹಿಸಬೇಕು, ಪಪಂ ಗೆ ಸೇರಿದ 32 ಗೃಹ ಮಂಡಳಿ ಮನೆಗಳ ವ್ಯಾಜ್ಯ ನ್ಯಾಯಾಲಯದಲ್ಲಿ ನಡೆಯುತ್ತಿದೆ, ಇದನ್ನು ಶೀಘ್ರವಾಗಿ ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದರು.

ವಕೀಲ ಶಂಕರಯ್ಯ ಪೌರಕಾರ್ಮಿಕರ ಕಾಲೋನಿಯಲ್ಲಿ ಸ್ವಚ್ಚತೆ ಕಾಯ್ದುಕೊಳ್ಳಬೇಕು.ಪಟ್ಟಣವನ್ನು ಸ್ವಚ್ಚಗೊಳಿಸಿ ಜನರ ಆರೋಗ್ಯ ರಕ್ಷಣೆ ಮಾಡುವ ಇವರ ಬದುಕಿನ ಕುರಿತು ಪ.ಪಂ ಗಮನ ಹರಿಸಬೇಕು, ಹಳೇ ಬಸ್ ನಿಲ್ದಾಣದಲ್ಲಿ ಸ್ವಚ್ಚತೆ ಇಲ್ಲದಿರುವ ಕಾರಣಕ್ಕೆ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.ಸಂಬಂಧಿಸಿದವರಿಗೆ ನೋಟೀಸ್ ನೀಡಿ ಕ್ರಮ ಕೈಗೊಳ್ಳಬೇಕು,ತೆರಿಗೆ ಕಟ್ಟಲು ಕಚೇರಿಗೆ ಬಂದ ನಾಗರೀಕರನ್ನು ಅಲೆದಾಡಿಸಲಾಗುತ್ತಿದೆ,ಬೀದಿ ನಾಯಿಗಳ ಹಾವಳಿ ನಿಯಂತ್ರಿಸದಿದ್ದರೆ ಖಾಸಗಿ ಮೊಕದ್ದಮೆ ಹೂಡುವುದಾಗಿ ಹೇಳಿದರು.

ಪ.ಪಂ ಕೇವಲ ಸರ್ಕಾರದ ಅನುದಾನಕ್ಕಾಗಿ ಕಾಯದೆ ಸ್ಥಳೀಯ ಸಂಪನ್ಮೂಲ ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸುವಂತೆ ಕಾರೋನೇಷನ್ ಸಹಕಾರ ಸಂಘದ ಅಧ್ಯಕ್ಷ ಎ. ಆರ್. ಸುಬ್ಬರಾವ್ ಸಲಹೆ ನೀಡಿದರು.

ಪಪಂ ಮಾಜಿ ಅಧ್ಯಕ್ಷ ನಂದಕುಮಾರ್, ಮಾಜಿ ಉಪಾಧ್ಯಕ್ಷ ಅಬ್ದುಲ್ ಅಲೀಂ, ಮಾಜಿ ಸದಸ್ಯ ಸತ್ಯನಾರಾಯಣ, ಮುಖಂಡರಾದ ಮುತಾಹಿರ್ ಪಾಶ, ಸಣ್ಣಸ್ವಾಮಿ ವಿವಿಧ ಸಲಹೆ ನೀಡಿದರು.

ಅಧ್ಯಕ್ಷ ಪ್ರದೀಪ್ ಕುಮಾರ್ ಸದಸ್ಯರ ಸಲಹೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಉಪಾಧ್ಯಕ್ಷ ಸುಬಾನ್ ಷರೀಪ್, ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾಂವಿ ಉಪಸ್ಥಿತರಿದ್ದರು.

———–ಶಶಿಕುಮಾರ್ ಕೆಲ್ಲೂರು

Leave a Reply

Your email address will not be published. Required fields are marked *

× How can I help you?