
ಮoಡ್ಯ.- ಜಿಲ್ಲೆಯಲ್ಲಿ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಸೌಲಭ್ಯವನ್ನು ಫಲಾನುಭವಿಗಳು ಪಡೆಯುತ್ತಿದ್ದು, ಯೋಜನೆಗಳ ಬಗ್ಗೆ ಹೆಚ್ಚಿನ ಅರಿವು ಅಗತ್ಯವಾಗಿದೆ. ಅರ್ಹ ಫಲಾನುಭವಿಗಳು ಯೋಜನೆಗಳ ಸೌಲಭ್ಯದಿಂದ ವಂಚಿತರಾಗಬಾರದು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿಕ್ಕಲಿಂಗಯ್ಯ ಅವರು ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್‌ನ ಮಿನಿ ಸಭಾಂಗಣದಲ್ಲಿ ಸರ್ಕಾರದ ಗ್ಯಾರಂಟಿ ಕಾರ್ಯಕ್ರ ಮಗಳ ಅನುಷ್ಠಾನಕ್ಕಾಗಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿ ತಿಂಗಳು 15 ಹಾಗೂ 30 ರಂದು ಸರ್ಕಾರದ 5 ಮಹತ್ವಾಕಾಂಕ್ಷಿ ಯೋಜನೆಗಳಾದ ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹಜ್ಯೋತಿ ಹಾಗೂ ಯುವ ನಿಧಿ ಯೋಜನೆಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು. ಸಂಬoಧಿಸಿದ ಯೋಜನೆಗಳ ಪ್ರಗತಿ ವರದಿಯನ್ನು ಸಂಬoಧಪಟ್ಟ ಇಲಾಖೆಯು ಸಲ್ಲಿಸಬೇಕು ಎಂದರು.
ಸರ್ಕಾರದ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಸೌಲಭ್ಯ ಪಡೆಯಲು ಫಲಾನುಭವಿಗಳ ಖಾತೆಗೆ ಸಂಬoಧಪಟ್ಟ ಖಾತೆ ಸಂಖ್ಯೆ, ಆಧಾರ್ ಸೀಡಿಂಗ್, ಇಕೆವೈಸಿ ಕೆಲವು ಲೋಪದೋಷಗಳನ್ನು ಸರಿಪಡಿಸಿಕೊಳ್ಳಬೇಕು. ತದನಂತರ ನೇರವಾಗಿ ಅರ್ಹ ಫಲಾನುಭವಿ ಖಾತೆಗೆ ಹಣವನ್ನು ಜಮೆ ಮಾಡಲಾಗುವುದು ಎಂದರು.
ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 2023 ನೇ ಸಾಲಿನ ಆಗಸ್ಟ್ ಮಾಹೆಯಿಂದ 2024 ರ ಸೆಪ್ಟೆಂಬರ್ ಮಾಹೆಯವರೆಗೆ ಫಲಾನುಭವಿಗಳಿಗೆ ಒಟ್ಟು 1218.74 ಕೋಟಿ ರೂ (ಶೇ. 99.32 ರಷ್ಟು) ಮೊತ್ತವನ್ನು ಪಾವತಿಸಲಾಗಿದೆ. ಉಳಿದ ಕೆಲವು ತಾಂತ್ರಿಕ ದೋಷವಿರುವ ಫಲಾನುಭವಿಗಳಿಗೆ ಸಮಸ್ಯೆಯನ್ನು ಬಗೆಹರಿಸಿಕೊಂಡ ನಂತರ ಎಲ್ಲಾ ತಿಂಗಳ ಬಾಕಿ ಮೊತ್ತವನ್ನು ಒಟ್ಟಿಗೆ ಅವರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ 5 ಗ್ಯಾರಂಟಿ ಯೋಜನೆಗಳ ಬಗ್ಗೆ ಸಭೆ ನಡೆಸಿ ಅರಿವು ಮೂಡಿಸಬೇಕು. ಗ್ರಾಮ ಸಭೆಯಲ್ಲಿ ಯೋಜನೆಗಳ ಬಗ್ಗೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳನ್ನು ಕಡ್ಡಾಯವಾಗಿ ಒಳಗೊಂಡoತೆ ಸಭೆಯಲ್ಲಿ ಚರ್ಚಿಸಿ, ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಯಾವುದೇ ಅರ್ಹ ಫಲಾನುಭವಿಯು ಯೋಜನೆಯಿಂದ ವಂಚಿತರಾಗಬಾರದು ಎಂದು ತಿಳಿಸಿದರು.
ಅನ್ನಭಾಗ್ಯ
ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ 2023 ರ ಜುಲೈ ಮಾಹೆಯಿಂದ ಆಗಸ್ಟ್ 2024ರ ವರೆಗೆ ಅಕ್ಕಿಯ ಬದಲಾಗಿ ಒಟ್ಟು 60,13,538 ಪಡಿತರ ಚೀಟಿದಾರರಿಗೆ 3,30,04,78,751 ರೂ ಹಣ ವರ್ಗಾವಣೆ ಆಗಿದ್ದು, ಅನುದಾನದ ಕೊರತೆಯಿಂದ ಜಿಲ್ಲೆಯಲ್ಲಿ 99,000 ಪಡಿತರ ಚೀಟಿದಾರರಿಗೆ ಜುಲೈ ಹಾಗೂ ಆಗಸ್ಟ್ 2 ತಿಂಗಳ ಹಣ ಬಾಕಿ ಉಳಿಸಿಕೊಳ್ಳಲಾಗಿದೆ. ಸರ್ಕಾರದಿಂದ ಅನುದಾನ ಬಂದ ನಂತರ ಉಳಿದ ಪಡಿತರದಾರರ ಬ್ಯಾಂಕ್ ಖಾತೆಗೆ ಡಿ ಬಿ ಟಿ ಮೂಲಕ ಹಣ ಪಾವತಿಸ ಲಾಗುವುದು ಎಂದರು.
ಗೃಹ ಜ್ಯೋತಿ
ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಹೊಸದಾಗಿ ಮನೆ ನಿರ್ಮಾಣ ಮಾಡಿದ ಮಾಲೀಕರು ಇ – ಸ್ವತ್ತು ಹಾಗೂ ಸರಿಯಾದ ಭೂ ದಾಖಲೆ ಸಲ್ಲಿಸಿದ್ದಲ್ಲಿ, ಎನ್ ಒ ಸಿ ಯನ್ನು ನೀಡುವ ಅಗತ್ಯ ಇರುವುದಿಲ್ಲ ಎಂದು ತಿಳಿಸಲಾಯಿತು.
ಯುವನಿಧಿ
ಯುವನಿಧಿ ಯೋಜನೆಯಡಿ ಜನವರಿ 2024 ರಿಂದ ಅಕ್ಟೋಬರ್ ಮಾಹೆಯವರೆಗೆ ಜಿಲ್ಲೆಯ ಒಟ್ಟು 12,244 ಪದವೀಧರ ಅಭ್ಯರ್ಥಿಗಳಿಗೆ 3,67,32,000 ರೂ ಹಾಗೂ 110 ಡಿಪ್ಲೋಮೊ ಅಭ್ಯರ್ಥಿಗಳಿಗೆ 1,65,000 ರೂ ಹಣವನ್ನು ಅವರ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದರು.
ಜಿಲ್ಲೆಯಾದ್ಯಾಂತ ಯುವನಿಧಿ ಯೋಜನೆಯ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ. ಎಲ್ಲಾ ಕಾಲೇಜು ಪ್ರಾಂಶುಪಾಲರಿಗೂ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆಯ ಬಗ್ಗೆ ತಿಳಿಸುವಂತೆ ಈಗಾಗಲೇ ಸೂಚಿಸಲಾಗಿದೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಕಾಲೇಜು, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ವಿದ್ಯಾರ್ಥಿಗಳು ಹೆಚ್ಚಾಗಿ ಸಂಚರಿಸುವ ಕಡೆ ಹೆಚ್ಚಿನ ಪ್ರಚಾರವನ್ನು ಕೈಗೊಳ್ಳಬೇಕು ಎಂದರು.
ಶಕ್ತಿ ಯೋಜನೆ ಅಡಿಯಲ್ಲಿ ಜಿಲ್ಲೆಯ ಎಲ್ಲಾ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದೂ, ವಿದ್ಯಾರ್ಥಿ ಹಾಗೂ ಸಾರ್ವಜನಿಕರಿಗೆ ಪ್ರಯಾಣದಲ್ಲಿ ತೊಂದರೆಯಾಗದoತೆ 12 ಬಸ್ ರೂಟ್ ಗಳಿಗೆ ಹೊಸ ಬಸ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿವೆ ಎಂದು ಮಾಹಿತಿ ನೀಡಿದರು.

ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಸೌಲಭ್ಯ ಪಡೆಯದೆ ಬಾಕಿ ಉಳಿದಿರುವ ಪ್ರತಿಯೊಬ್ಬ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಪ್ರತಿ ಗ್ರಾಮಗಳ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ, ಸರ್ವೇ ನಡೆಸಿ ಸೌಲಭ್ಯಗಳು ಅವರಿಗೆ ತಲುಪುವಂತೆ ಮಾಡಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಯುವನಿಧಿ ಯೋಜನೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ಸಂಬoಧಪಟ್ಟ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷರುಗಳಾದ ಪ್ರಶಾಂತ್ ಬಾಬು ಕೆ ಸಿ, ರಾಜೇಂದ್ರ ಎಸ್.ಹೆಚ್, ಶಿವಣ್ಣ, ಕೆ ಹನುಮಂತಯ್ಯ, ಸದಸ್ಯರುಗಳು, ಜಿಲ್ಲಾ ಪಂಚಾಯತ್ ನ ಮುಖ್ಯ ಯೋಜನಾಧಿಕಾರಿ ಧನುಷ್ ಎಸ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜಮೂರ್ತಿ, ಚೆಸ್ಕಾಂ ನ ಸೋಮಶೇಖರ್, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ನವೀನ್ ಕುಮಾರ್, ಕೆ ಎಸ್ ಆರ್ ಟಿ ಸಿ ವಿಭಾಗದ ಪರಮೇಶ್ವರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.