ಚಿಕ್ಕಮಗಳೂರು-ಹೃದಯಕ್ಕೆ ಸಂಬಂದಿಸಿದ ಕಾಯಿಲೆಗಳು ಸಂಭವಿಸುವ ಮೊದಲೇ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಹೆಚ್ಚಾಗಿ ಹಿರಿಯರು ದೃಷ್ಟಿದೋಷ ಸೇರಿದಂತೆ ಇನ್ನಿತರೆ ಸಮಸ್ಯೆ ಕಂಡುಬoದಲ್ಲಿ ತಪಾಸಣೆಗೆ ಒಳಗಾಗಬೇಕು ಎಂದು ನೇಚರ್ ಕನ್ಸರ್‌ವೇಷನ್ ಟ್ರಸ್ಟ್ ಅಧ್ಯಕ್ಷ ಡಾ|| ಕೆ.ಸುಂದರಗೌಡ ಹೇಳಿದರು.
ತಾಲ್ಲೂಕಿನ ಹಿರೇಗೌಜ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನೇಚರ್ ಕನ್ಸರ್‌ವೇಷನ್ ಟ್ರಸ್ಟ್, ವಿಜಯ ಡೆಂಟಲ್ ಇಂಟರ್‌ನ್ಯಾಷನಲ್,ಪ್ರಸಾದ್ ನೇತ್ರಾಲಯ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ಧ ಉಚಿತ ನೇತ್ರ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾ ಡಿದರು.
ಮಾನವನ ಶರೀರದಲ್ಲಿ ಕಣ್ಣು ಅತ್ಯಂತ ಅಮೂಲ್ಯವಾದ ಅಂಗ. ಸುರಕ್ಷತೆ, ಕಾಳಜಿಯಿಂದ ಕಾಪಾಡುವಲ್ಲಿ ನಿರ್ಲಕ್ಷ್ಯವಹಿಸಿದರೆ ಅಂಧತ್ವ ಸಂಭವಿಸಬಹುದು ಎಂದ ಎಚ್ಚರಿಸಿದ ಅವರು ಪೊರೆ ಅಥವಾ ದೃಷ್ಟಿ ದೋಷದ ಸಣ್ಣಪುಟ್ಟ ತೊಂದರೆಗೆ ಸಿಲುಕಿದರೆ ಶೀಘ್ರವೇ ಚಿಕಿತ್ಸೆ ಕೊಡಿಸುವುದು ಅನಿರ್ವಾಯ ಎಂದು ಸಲಹೆ ಮಾಡಿದರು.
ಇಂದಿನ ಆಹಾರ ಪದ್ಧತಿಯಿಂದ ಮನುಷ್ಯನ ಆರೋಗ್ಯ ಸ್ಥಿತಿ ಹಂತ ಹಂತವಾಗಿ ಹದಗೆಡುತ್ತಿದೆ. ಅಲ್ಪಾಯುಷ್ಯಕ್ಕೆ ಯುವ ಸಮೂಹ ಹೃದಯಘಾತದಂಥ ಮಾರಕ ಕಾಯಿಲೆಗೆ ತುತ್ತಾಗಿ ಅಕಾಲಿಕ ಸಾವು ಸಂಭವಿಸುತ್ತಿದೆ. ಹೀಗಾಗಿ ಆರೋಗ್ಯದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿದರೆ ಶೀಘ್ರ ವೈದ್ಯರನ್ನು ಸಂಪರ್ಕಿಸಬೇಕು ಎಂದರು.
ಮಾನವರಲ್ಲಿ ಇತ್ತೀಚಿನ ದಿನಗಳಲ್ಲಿ ಮಾನವೀಯತೆ ಮೌಲ್ಯಗಳು ಕ್ಷೀಣಿಸುತ್ತಿವೆ. ಜಾತಿ, ಜಾತಿಗಳ ನಡುವೆ ಸಂಘರ್ಷ ಏರ್ಪಡುತ್ತಿದೆ.ಅಲ್ಲದೇ ವಿಶ್ವಾದ್ಯಂತ ಯುದ್ಧೋಪಾದಿಯಲ್ಲಿ ಅಣುಬಾಂಬ್‌ಗಳ ಬೆದರಿಕೆವೊಡ್ಡುತ್ತಿರುವ ಪರಿಣಾಮ ಜೀವರಾಶಿಗಳ ಅಮೂಲ್ಯ ಭೂಮಂಡಲವನ್ನು ಕಳೆದುಕೊಳ್ಳಬಹುದಾದ ಆತಂಕ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರೇಗೌಜ ಗ್ರಾ.ಪಂ. ಅಧ್ಯಕ್ಷೆ ಮಂಜುಳಾ,ಪಟ್ಟಣಕ್ಕೆ ತೆರಳಿ ಚಿಕಿತ್ಸೆಯಿಂದ ವಂಚಿತರಾಗುವ ನಿವಾಸಿಗಳಿಗೆ ಸಂಘ-ಸoಸ್ಥೆಗಳು ಸ್ವಗೃಹಕ್ಕೆ ಸಮೀಪವೇ ನೇತ್ರಾ ತಪಾಸಣಾ ಶಿಬಿರ ಆಯೋಜಿಸಿ ವೃದ್ದರು, ಮಹಿಳೆಯರಿಗೆ ಅನುಕೂಲ ಕಲ್ಪಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಹಿರೇಗೌಜ ಪ್ರೌಢಶಾಲೆ ಶಿಕ್ಷಕ ರಾಜೇಗೌಡ ಮಾತನಾಡಿ, ಇಡೀ ಶರೀರದಲ್ಲಿ ನೇತ್ರವು ಮುಖ್ಯ ಅಂಗ ಭಾಗ ಹಾಗೂ ಅತ್ಯಂತ ಸೂಕ್ಷ್ಮವಾದುದು.ವಯಸ್ಸು ಮೀರಿದಂತೆ ಕಾಲಕ್ರಮೇಣ ನೇತ್ರ ತಪಾಸಣೆ ನಡೆಸುವುದು ಅನಿವಾರ್ಯವಾಗಿದೆ ಎಂದ ಅವರು ಕೇವಲ ದುಡಿಮೆಯಲ್ಲೇ ಜೀವನ ಕಳೆಯದೇ ವೈಯಕ್ತಿಕ ಬದುಕಿಗೆ ಸಮಯ ವ್ಯಯಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ವಿಜಯ್‌ಕುಮಾರ್, ಗ್ರಾಮಸ್ಥರಾದ ಹಾಲಪ್ಪಗೌಡ, ಓಂಕಾರೇಗೌಡ, ಪುಷ್ಪೇಗೌಡ, ಕಂಟ್ರಾಕ್ಟರ್ ಕಾಡಪ್ಪ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
———–ಸುರೇಶ್