ಕೊರಟಗೆರೆ:-ತುಮಕೂರು ಜಿಲ್ಲೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಕೊರಟಗೆರೆ ತಾಲ್ಲೂಕಿನಲ್ಲಿರುವ ವಸತಿ ರಹಿತರಿಗೆ ಶೀಘ್ರವಾಗಿ ವಸತಿ ಮತ್ತು ಭೂಮಿ ಸಮಸ್ಯೆಗಳನ್ನು ಪರಿಹರಿಸಿ ಕೊಡುವಂತೆ ಆಗ್ರಹಿಸಿ ಪ್ರತಿಭಟನೆ ಮೂಲಕ ತಹಶೀಲ್ದಾರ್ ರವರಿಗೆ ಮನವಿಯನ್ನು ಸಲ್ಲಿಸಲಾಯಿತು.
ತುಮಕೂರು ಜಿಲ್ಲೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಜಿಲ್ಲಾ ಪದಾದಿಕಾರಿಗಳು ಕೊರಟಗೆರೆ ತಾಲ್ಲೂಕಿನ ನೂರಾರು ವಸತಿ ರಹಿತರು ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟ್ಯಾಂಡ್ ನಿಂದ ಪ್ರತಿಭಟನೆಯಲ್ಲಿ ಆಗಮಿಸಿ ತಾಲ್ಲೂಕು ಕಛೇರಿ ಮುಂದೆ ಅಧಿಕಾರಿಗಳ ವಿಳಂಬ ದೋರಣೆ ಬಗ್ಗೆ ಅಸಮಧಾನವನ್ನು ವ್ಯಕ್ತಪಡಿಸಿ ಮುಂಬರುವ ಪೆಬ್ರವರಿ ತಿಂಗಳ ಒಳಗಾಗಿ ಎಲ್ಲವನ್ನು ಸರಿಪಡಿಸುವಂತೆ ಒತ್ತಾಯಿಸಿ ತಹಸೀಲ್ದಾರರಿಗೆ ಮನವಿ ಪತ್ರ ನೀಡಿದರು.
ಮನವಿ ಪಡೆದ ನಂತರ ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ತುಮಕೂರು ಜಿಲ್ಲೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ತಾಲ್ಲೂಕು ಆಡಳಿತ ಸೇರಿದಂತೆ ವಿವಿಧ ಇಲಾಖೆಗಳಿಂದ ವಸತಿ ಮತ್ತು ಬಗರ್ ಹುಕುಂ ಭೂಮಿ ಬಗ್ಗೆ ಈ ಹಿಂದೆ ನೀಡಲಾದ ಅರ್ಜಿಗಳ ಬಗ್ಗೆ ವಿವರಗಳನ್ನು ಕೇಳಿದ್ದು ನೀಡಿದ್ದೇವೆ.
ತಾಲ್ಲೂಕಿನ ನೀಲಗೊಂಡನಹಳ್ಳಿ ಮತ್ತು ಹೊಳವನಹಳ್ಳಿ ಹೋಬಳಿಯ ದುಗ್ಗೇನಹಳ್ಳಿ ಗ್ರಾಮಗಳ ಆಶ್ರಯ ಮನೆಗಳ ವಸತಿ ಭೂಮಿಗಳ ಅಭಿವೃದ್ದಿ ಹಾಗೂ ಕಂದಾಯ, ಅರಣ್ಯ, ಇಲಾಖೆಗಳ ಸಮನ್ವಯದಲ್ಲಿ ಭೂಮಾಪನ ಇಲಾಖೆಯ ಸಹಯೋಗದಲ್ಲಿ ಚನ್ನರಾಯನದುರ್ಗ ಹೋಬಳಿಯ ಓಬನಹಳ್ಳಿಯ ಸರ್ವೆ ನಂ 22, 23, 25 ರ ಅಳತೆಗಳು ಪ್ರಗತಿಯಲ್ಲಿದ್ದು ಅದೇ ರೀತಿ ನೇಗಲಾಲ ಗ್ರಾಮದ ಕೆಲವು ಸರ್ವೆ ನಂ ಸಹ ಅಳತೆಯ ಪ್ರಗತಿಯಲ್ಲಿ ಇವೆ.
ಮುಂದಿನ ದಿನಗಳಲ್ಲಿ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಡುವ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಸೇರಿದಂತೆ ವಿವಿಧ ಇಲಾಖೆಗಳು ಅಗತ್ಯ ಕ್ರಮ ಕೈಗೊಂಡು ಕಾರ್ಯ ನಿರ್ವಹಿಸಲಿವೆ ಎಂದರು.
ಈ ಸಂದರ್ಭದಲ್ಲಿ ಕೆಲವು ತಾಲ್ಲೂಕು ಮಟ್ಟದ ಅಧಿಕಾರಿಗಳು, ಹೋರಾಟ ಸಮಿತಿಯ ಪದಾದಿಕಾರಿಗಳು ಹಾಗು ವಸತಿ ರಹಿತ ಬಡವರು ಹಾಜರಿದ್ದರು.
—–-ಶ್ರೀನಿವಾಸ ಕೊರಟಗೆರೆ