ಕೊರಟಗೆರೆ;-ಗೊಂದಿಹಳ್ಳಿ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ,ರಸ್ತೆಯ ಮಧ್ಯ ಭಾಗದಲ್ಲಿ ಗ್ರಾಮದ ಮಲೀನವಾದ ನೀರು ಹರಿಯುತ್ತಿದೆ.ನಿವಾಸಿಗಳು ವಿಧಿ ಇಲ್ಲದೆ ಇದೇ ನೀರನ್ನು ತುಳಿದುಕೊಂಡು ಓಡಾಡುತ್ತಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ಅಳಲನ್ನು ತೋಡಿಕೊಂಡರು.
ಕೊರಟಗೆರೆ ತಾಲೂಕಿನ ಸಿ.ಎನ್.ದುರ್ಗಾ ಹೋಬಳಿಯ ಬುಕ್ಕಾಪಟ್ಟಣ ಗ್ರಾ.ಪಂ ವ್ಯಾಪ್ತಿಗೆ ಬರುವ ಗೊಂದಿಹಳ್ಳಿ ಗ್ರಾಮದಲ್ಲಿ 120 ಕ್ಕೂ ಹೆಚ್ಚು ಮನೆಗಳಿದ್ದು ಸುಮಾರು1500 ಕ್ಕೂ ಹೆಚ್ಚು ಜನ ಸಂಖ್ಯೆ ಇದೆ.ಗ್ರಾ.ಪಂಯಲ್ಲಿ ಸಾಕಷ್ಟು ಅನುದಾನ ಬರುತ್ತಿದ್ದರೂ ಗ್ರಾ.ಪಂ ಸದಸ್ಯರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮದಲ್ಲಿ ಅಭಿವೃದ್ದಿ ಮರೀಚಿಕೆಯಾಗಿದೆ.
ಗ್ರಾಮದ ಗ್ರಾಮ ದೇವತೆ ಮಾರಮ್ಮ ದೇವಿಯ ದೇವಸ್ಥಾನ ಮುಂದೆ ಸುಮಾರು ವರ್ಷಗಳ ಹಿಂದೆ ಸಿ.ಸಿ ರಸ್ತೆ ಮಾಡಲಾಗಿದ್ದು, ಚರಂಡಿ ಮಾಡದೆ ರಸ್ತೆ ನಿರ್ಮಾಣ ಮಾಡಿದ ಪರಿಣಾಮ ಕೊಚ್ಚೆ ನೀರು ಅದೇ ರಸ್ತೆಯಲ್ಲಿ ನಿರಂತರವಾಗಿ ಹರಿಯುತ್ತಲೇ ಇರುತ್ತದೆ.
ಅನೇಕ ಬಾರಿ ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಈ ಕಾರಣಕ್ಕೆ ಗ್ರಾಮದಲ್ಲಿ ಸೊಳ್ಳೆಗಳ ಕಾಟ ವಿಪರೀತವಾಗಿದ್ದು,ಮಲೀನ ನೀರಿನಿಂದ ಊರಿನಲ್ಲಿ ಸಾಂಕ್ರಾಮಿಕ ರೋಗಗಳು ಜಾಸ್ತಿಯಾಗಿ ಸಾರ್ವಜನಿಕರು ಆಸ್ಪತ್ರೆ ಸೇರುತ್ತಿದ್ದಾರೆ.
ಆದಷ್ಟು ಶೀಘ್ರ ಈ ಸಮಸ್ಯೆಗೊಂದು ಪರಿಹಾರ ದೊರಕಿಸಿಕೊಡುವಂತೆ ಗ್ರಾಮಸ್ಥರು ಸಂಬಂಧಪಟ್ಟವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಪತ್ರಿಕೆ ಪಿ.ಡಿ.ಒ ವೀರಭದ್ರ ಆರಾಧ್ಯ ರವರ ಗಮನ ಸೆಳೆದಾಗ,ಗೊಂದಿಹಳ್ಳಿ ಗ್ರಾಮದಲ್ಲಿ ರಸ್ತೆಗೆ ನೀರನ್ನ ಬಿಡಬಾರದು ಎಂದು ಸಾರ್ವಜನಿಕರಿಗೆ ಅನೇಕ ಬಾರಿ ತಿಳಿಸಿದರೂ ಯಾರು ನಮ್ಮ ಮಾತು ಕೇಳುತ್ತಿಲ್ಲ. ಮುಂದಿನ ದಿನಗಳಲ್ಲಿ ನರೇಗಾ ಯೋಜನೆಯಲ್ಲಿ ಚರಂಡಿ ಕಾಮಗಾರಿ ಮಾಡಲಾಗುವುದು ಎಂದು ತಿಳಿಸಿದರು.
—-—ಶ್ರೀನಿವಾಸ್ ಕೊರಟಗೆರೆ