ಚಿಕ್ಕಮಗಳೂರು-ವೀರಶೈವರ ಗೋತ್ರಪುರುಷ ಶ್ರೀವೀರಭದ್ರಸ್ವಾಮಿ ದುಷ್ಟಶಿಕ್ಷಕ ಶಿಷ್ಟರಕ್ಷಕ ಎಂದು ಬೆಂಗಳೂರಿನ ಗಾನಸುಧೆ ಸಂಸ್ಥಾಪಕ ನಾದಭಾಸ್ಕರ ವೇ.ಬ್ರ.ಶಿವಶಂಕರಶಾಸ್ತ್ರೀ ನುಡಿದರು.
ಕಲ್ಲತ್ತಗಿರಿ ಸನ್ನಿಧಿಯಲ್ಲಿ ಶ್ರೀಭದ್ರಕಾಳಿಸಹಿತ ಶ್ರೀವೀರಭದ್ರಸ್ವಾಮಿಯ ಎರಡೂವರಿ ಅಡಿ ಪಂಚಲೋಹ ಉತ್ಸವಮೂರ್ತಿಯ ಪ್ರಾಣಪ್ರತಿಷ್ಠಾಪನೆ ಹಾಗೂ ದೃಷ್ಟಿಪೂಜೆಯ ಸಮಾರಂಭದಲ್ಲಿ ಅವರು ಮಾತನಾಡಿದರು.
ವೀರಭದ್ರ ಶಿವನ ಉಗ್ರರೂಪದ ಅಂಶವೂ ಹೌದು. ಶ್ರೀವೀರಭದ್ರ ಸನಾತನ ಹಿಂದೂ ಸಂಸ್ಕೃತಿ ಪರಂಪರೆಯಲ್ಲಿ ಅಪಾರಹಿರಿಮೆ, ತಾತ್ವಿಕಸತ್ವ, ವೈಚಾರಿಕ ಪ್ರಜ್ಞೆಗಳು ಸಮನ್ವಯಗೊಂಡ ನಾಮ. ಸದಾ ಚೈತನ್ಯ ಪ್ರೇರಿತ.ಮಾನವನಲ್ಲಿ ನಿರಹಂಕಾರ, ಸಹಕಾರ, ಸೌಹಾರ್ದತೆ, ಪ್ರೇಮ, ಬಾಂಧವ್ಯ, ತತ್ವ ನಿಷ್ಠ ವಿವೇಚನೆಗಳು ಮೂಡಿಬಂದಾಗ ಸಾಮರಸ್ಯಭರಿತ ಸುಂದರಸಮಾಜ ಆರೋಗ್ಯಪೂರ್ಣವಾಗಿ ನಿರ್ಮಾಣವಾಗುತ್ತದೆ ಎಂಬ ಸಂದೇಶ ವೀರಭದ್ರಸ್ವಾಮಿ ನೀಡುತ್ತಾನೆ ಎಂದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಪುರಾಣಪ್ರಸಿದ್ಧ ಬೆಣ್ಣೆಮುದ್ದೇನಹಳ್ಳಿ ಶ್ರೇಷ್ಠಶರಣೆ ಮುದ್ದಮ್ಮ ಹೆಸರಿನಿಂದ ನಾಮಕರಣಗೊಂಡಿದೆ. ಸುಮಾರು500 ವರ್ಷಗಳ ಹಿಂದೆ ಕೋಟೆ ನಿರ್ಮಿಸುತ್ತಿದ್ದ ಸಂದರ್ಭದಲ್ಲಿ ಪದೇ ಪದೇ ಪತನಗೊಳ್ಳುತ್ತಿದ್ದು ಮುದ್ದಮ್ಮ ಕಲ್ಲಿನ ಮಂತಿನಿoದ ಮಜ್ಜಿಗೆ ಕಡೆದು ಬಂದ ಬೆಣ್ಣೆಯನ್ನು ಕೋಟೆಕಲ್ಲಿಗೆ ಮೆತ್ತಿದನಂತರ ಸರಿಯಾಗಿ ನಿಂತಿತು ಎಂಬ ಪ್ರತೀತಿ ಇದೆ ಎಂದ ಶಿವಶಂಕರಶಾಸ್ತ್ರೀ ,ಈ ಗ್ರಾಮದಲ್ಲಿ ಆಗಲೇ ಆರಾಧ್ಯದೈವ ಶ್ರೀ ವೀರಭದ್ರಸ್ವಾಮಿ ದೇವಾಲಯ ನಿರ್ಮಾಣಗೊಂಡಿತ್ತು. ಈ ದೇವಸ್ಥಾನಕ್ಕೆ ಹೊಸದಾಗಿ ಪಂಚಲೋಹದ ಉತ್ಸವ ಮೂರ್ತಿಯನ್ನು ಪಾರ್ವತಿಪ್ರಕಾಶ್ ಹಾಗೂ ತಾವೂ ಸೇರಿ ಹೊಸದಾಗಿ ಮಾಡಿಸಿದ್ದು, ಮೂರ್ತಿಗೆ ಜೀವಕಳೆ, ದೈವಕಳೆ ತುಂಬುವ ಹಿನ್ನಲೆಯಲ್ಲಿ ಇಂದು ಬೀರೂರುಶ್ರೀಗಳ ನೇತೃತ್ವದಲ್ಲಿ ಹೋಮ-ಹವನ ವಿಶೇಷ ಪೂಜಾದಿಗಳು ನಡೆದಿವೆ ಎಂದು ವಿವರಿಸಿದರು.
ಚಿಕ್ಕಮಗಳೂರಿನ ಶ್ರೀ ದೇವಿ ಗುರುಕುಲದ ಸಂಸ್ಥಾಪಕ ಅಧ್ಯಕ್ಷ ವೇ.ಬ್ರ.ಡಾ.ದಯಾನಂದ ಮೂರ್ತಿಶಾಸ್ತ್ರೀ ಮಾತನಾಡಿ, ಪರಶಿವನ ಧರ್ಮಪತ್ನಿ ದಾಕ್ಷಾಯಣಿ ಅಗ್ನಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದ ಶಿವ ತನ್ನ ಜಟೆಯನ್ನು ನೆಲಕ್ಕೆ ಹೊಡೆದಾಗ ಶ್ರೀ ವೀರಭದ್ರಸ್ವಾಮಿ ಜನಿಸುತ್ತಾನೆ. ಆತ ಸೇನಾಧಿಪತಿಯಾಗಿ ಯಜ್ಞವನ್ನು ನಾಶಮಾಡಿ ಆ ಯಜ್ಞ ಆಯೋಜಿಸಿದ್ದ ದಕ್ಷಬ್ರಹ್ಮನನ್ನು ಸಂಹರಿಸುತ್ತಾನೆ. ತದನಂತರ ಶಿವನ ಆಜ್ಞೆಯಂತೆ ಕರ್ನಾಟಕ ಕದಳಿಯಲ್ಲಿ ನೆಲೆಸುತ್ತಾನೆಂಬುದು ಪೌರಾಣಿಕ ಹಿನ್ನಲೆ ವಿವರಿಸಿದರು.
ಬಾಳೆಹೊನ್ನೂರು ಖಾಸಾಶಾಖಾ ಬೀರೂರುಮಠಾಧ್ಯಕ್ಷ ಶ್ರೀಶ್ರೀರುದ್ರಮುನಿ ಶಿವಾಚಾರ್ಯ ಸ್ವಾಮಿಜೀ ಸಾನಿಧ್ಯವಹಿಸಿ ಆಶೀರ್ವಚನ ನೀಡಿ, ಶ್ರೀವೀರಭದ್ರಸ್ವಾಮಿ ವೀರಶೈವರ ಗೋತ್ರಪುರುಷ. ಸರ್ವಜನಾಂಗಗಳ ಆರಾಧ್ಯದೈವ. ಬಾಳೆಹೊನ್ನೂರು ಶ್ರೀಮದ್ರಂಭಾಪುರಿ ಮಹಾಪೀಠದ ಕ್ಷೇತ್ರ ಪುರುಷ. ಅತ್ಯಂತ ಶಕ್ತಿಶಾಲಿಯಾದ ದೈವವೆಂದು ಪೂಜಿಸಲ್ಪಡುತ್ತಾನೆ ಎಂದು ನುಡಿದರು.
ವೀರಭದ್ರಸ್ವಾಮಿ ಕಥೆ, ವಚನ, ಒಡಪು-ಒನಪುಗಳು, ವೀರಗಾಸೆ ನೃತ್ಯ, ಪುರವಂತರ ಕಥನಗಳ ಮೂಲಕ ಮಹಿಮೆಯನ್ನು ಸಾರಲಾಗುತ್ತಿದೆ ಎಂದ ಜಂಗಮಬಳಗದ ಸಂಚಾಲಕ ಪ್ರಭುಲಿಂಗ ಶಾಸ್ತ್ರೀ ವೀರಭದ್ರ ಕನ್ನಡ ನಾಡಿನ ಸಾಂಸ್ಕೃತಿಕ ನಾಯಕನೂ ಹೌದು ಎಂದರು.
ಮುದ್ದೇನಹಳ್ಳಿಯ ಗುಡಿಗೌಡರಾದ ಮೋಹನ, ಪಟೇಲರಾದ ಗಂಗಣ್ಣ, ಈಶ್ವರಯ್ಯ, ಬಸವರಾಜ್ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.
ವಿಗ್ರಹಶಿಲ್ಪಿ ಬೀರೂರಿನ ಪ್ರಕಾಶ್ ಆಚಾರ್, ವೈದಿಕರಾದ ಚೇತನಶರ್ಮ, ಹೊನ್ನಾಳಿ ವೀರಭದ್ರಶಾಸ್ತ್ರೀ, ದರ್ಶನಶಾಸ್ತ್ರೀ ಮತ್ತಿತರರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಮುದ್ದೇನಹಳ್ಳಿಯ ಸುಮಾರು ನೂರುಭಕ್ತರು ಊರದೈವಗಳನ್ನು ಕಲ್ಲತ್ತಿಗಿರಿಗೆ ಕರೆತಂದು ಭೋರ್ಗರೆದು ಧುಮುಕುವ ಜಲಪಾತದಲ್ಲಿ ಮಿಂದೆದ್ದು ಅಭಿಷೇಕ, ಪೂಜಾದಿಗಳನ್ನು ನೆರವೇರಿಸಿದರು.
ನಗರದಲ್ಲಿಂದು:
ಇಂದು ಶುಕ್ರವಾರ ಸಂಜೆ 4ಗಂಟೆಗೆ ಎಂ.ಎಲ್.ವಿ.ರೋಟರಿ ಸಭಾಂಗಣದಲ್ಲಿ ಮಹಿಳಾ ಜಾಗೃತಿ ಸಂಘದ ವಾರ್ಷಿಕೋತ್ಸವ ಮತ್ತು ಸರ್ವಸದಸ್ಯರ ಸಭೆ.
ಅಧ್ಯಕ್ಷತೆ: ಸಂಘದ ಅಧ್ಯಕ್ಷೆ ಸುಲೋಚನಾಶೇಖರ್, ಉದ್ಘಾಟಕರು: ಜಿಲ್ಲಾಧಿಕಾರಿ ಮೀನಾನಾಗರಾಜ್.