ಚಿಕ್ಕಮಗಳೂರು-ಖಾಸಗಿ ಕ್ಲಿನಿಕ್ ತೆರೆದಿರುವ ಜಿಲ್ಲಾಸ್ಪತ್ರೆ ವೈದ್ಯರು-ಬಡ ರೋಗಿಗಳಿಗಿಲ್ಲ ಸಮರ್ಪಕ ಚಿಕಿತ್ಸೆ-ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಕೆಂಪನಹಳ್ಳಿ ಅಶೋಕ್

ಚಿಕ್ಕಮಗಳೂರು-ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಮೂಲಭೂತ ಸೌಲಭ್ಯ ಹಾಗೂ ರಶೀದಿಗೆ ಮುನ್ನ ತುರ್ತು ಚಿಕಿತ್ಸೆಗೆ ಮೊದಲು ಆದ್ಯತೆ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪದಾ ಧಿಕಾರಿಗಳು ಗುರುವಾರ ಜಿಲ್ಲಾ ಸರ್ಜನ್ ಸಿ.ಮೋಹನ್‌ಕುಮಾರ್‌ಗೆ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಕೆಂಪನಹಳ್ಳಿ ಅಶೋಕ್,ಜಿಲ್ಲಾಸ್ಪತ್ರೆಯ ಶೌಚಾಲಯ ಸೇರಿದಂತೆ ಇನ್ನಿತರೆಡೆ ಶುಚಿತ್ವ ಹೆಚ್ಚು ಆದ್ಯತೆ ನೀಡಿಲ್ಲ.ಇದರಿಂದ ರೋಗಿಗಳು ಪರದಾಡುವಂಥ ಸ್ಥಿತಿ ನಿರ್ಮಾಣ ವಾಗಿದ್ದು ಈ ಬಗ್ಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ದೂರಿದರು.

ಪ್ರಸ್ತುತ ಆಸ್ಪತ್ರೆಯಲ್ಲಿ ನೀರು ಹಾಗೂ ಶೌಚಾಲಯದ ಸಮಸ್ಯೆ ಎದ್ದುಕಾಣುತ್ತಿದೆ. ಅಲ್ಲದೇ ಹೊರಾಂಗಣದಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆಯಿಂದ ಇನ್ನಷ್ಟು ಸಮಸ್ಯೆಗಳು ಉದ್ಬವಿಸುತ್ತಿವೆ. ಜಿಲ್ಲೆಯ ವಿವಿದೆಡೆಯಿಂದ ಆಗಮಿಸುವ ಬಡ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯುತ್ತಿಲ್ಲವೆಂಬ ಆರೋಪಗಳು ಕೇಳಿ ಬರುತ್ತಿವೆ ಎಂದು ಹೇಳಿದರು.

ಕಳೆದ ಕೆಲ ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ವೇಳೆ ರೋಗಿಗಳ ಪರದಾಟ ಹೇಳತೀರದಾಗಿತ್ತು.ಅಲ್ಲದೇ ಆಸ್ಪತ್ರೆಯ ಕೆಲವು ವೈದ್ಯರು ಖಾಸಗೀ ಕ್ಲೀನಿಕ್‌ಗಳನ್ನು ತೆರೆದಿದ್ದಾರೆ. ಆದರೆ ಕ್ಲೀನಿಕ್‌ನಲ್ಲಿ ರೋಗಿಗಳಿಗೆ ತೋರುವ ವಿಶೇಷ ಕಾಳಜಿಯನ್ನು, ಜಿಲ್ಲಾಸ್ಪತ್ರೆಯ ಕರ್ತವ್ಯದಲ್ಲಿ ತೋರದೇ ತಾರತಮ್ಯ ಮಾಡುತ್ತಿವೆ ಎಂದು ಆರೋಪಿಸಿದರು.

ಜಿಲ್ಲಾಸ್ಪತ್ರೆಯ ಮೂಲಸೌಕರ್ಯದಿಂದ ಕೆಲವು ರೋಗಿಗಳು ಜೀವ ಉಳಿದರೆ ಸಾಕೆಂಬ ನಿಟ್ಟಿನಲ್ಲಿ ಅಧಿಕ ಬಡ್ಡಿಯಲ್ಲಿ ಸಾಲ ಮಾಡಿಕೊಂಡು ಖಾಸಗೀ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡು ಮುಕ್ತರಾಗುತ್ತಾರೆ. ಆದರೆ ಇನ್ನೊಂದೆಡೆ ದೊಡ್ಟಮಟ್ಟಿನ ಸಾಲದ ಸುಳಿಯಲ್ಲಿ ಸಿಲುಕಿಕೊಂಡು ಜೀವನಪೂರ್ತಿ ಸಂಕಷ್ಟವನ್ನು ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಆ ನಿಟ್ಟಿನಲ್ಲಿ ಕೂಡಲೇ ಜಿಲ್ಲಾ ಸರ್ಜನ್‌ಗಳು ಜಿಲ್ಲಾಸ್ಪತ್ರೆಯ ಅಗತ್ಯವಿರುವ ಮೂಲಸೌಲಭ್ಯ, ವೈದ್ಯರ ಕೊರತೆ ನೀಗಿಸುವುದು, ತುರ್ತು ರೋಗಿಗಳಿಗೆ ಮೊದಲ ಆದ್ಯತೆ ನೀಡಲು ಮುಂದಾಗದಿದ್ದಲ್ಲಿ ಸಂಬoಧಪಟ್ಟ ಅಧಿಕಾರಿಗಳ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ಮನೋಜ್, ಜಿಲ್ಲಾ ಗೌರವಾಧ್ಯಕ್ಷ ಷಡಕ್ಷರಿ, ಪ್ರಧಾನ ಕಾರ್ಯದರ್ಶಿ ಕುಮಾರ್ ಆರ್. ಶೆಟ್ಟಿ, ಕಾರ್ಯದರ್ಶಿ ಮಧು, ಸಂಘಟನಾ ಕಾರ್ಯದರ್ಶಿ ರುದ್ರೇಶ್, ಆಟೋಘಟಕದ ಅಧ್ಯಕ್ಷ ಇರ್ಷಾದ್, ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಪೂರ್ಣಿಮಾ, ಮುಖಂಡರು ಗಳಾದ ನಾಗಲತ, ಚಂದನ, ಲತಾ, ಅನ್ನಪೂರ್ಣ, ರಂಜಿತ್, ಮನುಬಾಯಿ, ಭರತ್ ಮತ್ತಿತರರಿದ್ದರು.

—–———–ಸುರೇಶ್

Leave a Reply

Your email address will not be published. Required fields are marked *

× How can I help you?