ಬೇಲೂರು-ಕೃಷಿ ಭಾಗ್ಯ ಯೋಜನೆಗೆ ತಾಲೂಕಿನ ಅರ್ಹ ಫಲಾನುಭವಿಗಳಿಂದ ಅರ್ಜಿ ಕರೆಯಲಾಗಿದೆ ಎಂದು ಸಹಾಯಕ ನಿದೇರ್ಶಕರಾದ ತೇಜಸ್ವಿ ಎಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ರೈತರು ಕೃಷಿ ಹೊಂಡ ನಿರ್ಮಿಸಿಕೊಳ್ಳಬಹುದಾಗಿದ್ದು ಹೊಂಡದ ನೀರು ಸಂಗ್ರಹಣೆಗೆ ಟಾರ್ಪಲ್,ಹೊಂಡದ ಸುತ್ತ ಸುರಕ್ಷತೆಗಾಗಿ ಬೇಲಿ ನಿರ್ಮಾಣ ಹಾಗೂ 10 ಹೆಚ್ ಪಿ ವರೆಗಿನ ನೀರು ಎತ್ತುವ ಮೋಟಾರನ್ನು ಸಹ ಯೋಜನೆಯಡಿ ಸರ್ಕಾರದ ಸಹಾಯಧನದಡಿಯಲ್ಲಿ ಕೊಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಇಲಾಖೆಯ ಮಾನದಂಡವಾಗಿ ಆಯ್ಕೆಯಾಗುವ ಎಲ್ಲಾ ವರ್ಗದ ರೈತರಿಗೆ ತುಂತುರು ನೀರಾವರಿ ಘಟಕಕ್ಕೆ ಶೇಕಡ 90ರ ಸಹಾಯಧನ ಹಾಗೂ ಕೃಷಿ ಹೊಂಡ ನಿರ್ಮಾಣ ಸೇರಿದಂತೆ ಇತರೆ ಘಟಕಗಳಿಗೆ ಒಟ್ಟು ವೆಚ್ಚದ ಶೇಕಡಾ 80 ರಷ್ಟು ಸಾಮಾನ್ಯ ವರ್ಗಕ್ಕೆ ಸಹಾಯಧನ ಹಾಗೂ ಪರಿಶಿಷ್ಟ-ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶೇಕಡ 90ರಷ್ಟು ಸಹಾಯಧನ ಸಿಗಲಿದೆ ಎಂದು ತಿಳಿಸಿದ್ದಾರೆ.ಮಳೆಯಾಶ್ರಿತ ಕೃಷಿ ಚಟುವಟಿಕೆಗಳಿಗೆ ಅನುಕೂಲ ದೊರಕಿಸುವ ನಿಟ್ಟಿನಲ್ಲಿ ಕೃಷಿ ಭಾಗ್ಯ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ.
ಇದರಿಂದ ನೀರಿನ ಕೊರತೆ ನೀಗಿ ರೈತರು ಬೆಳೆ ತೆಗೆಯಲು ಅನೂಕೂಲವಾಗುತ್ತದೆ.ಆದ್ದರಿಂದ ಆಸಕ್ತರು ಹೋಬಳಿಯ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುವುದರ ಜೊತೆಗೆ ಅಲ್ಲಿಯೇ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯ ಮೂಲಕ ಮನವಿ ಮಾಡಿಕೊಂಡಿದ್ದಾರೆ.
——————–ನೂರ್ ಅಹಮ್ಮದ್