ಮೂಡಿಗೆರೆ:ಮಹಿಳೆಯರ ಮೇಲೆ ದೌರ್ಜನ್ಯ ನಡೆದರೆ ಮುಲಾಜಿಲ್ಲದೆ ಪೋಲೀಸರಿಗೆ ದೂರು ನೀಡಬೇಕು ಎಂದು ಹಂಗರ್ ಪ್ರಾಜೆಕ್ಟ್ ಸಂಪನ್ಮೂಲ ವ್ಯಕ್ತಿ ನವೀನ್ ಆನೆದಿಬ್ಬ ಹೇಳಿದರು.
ಅವರು ಗುರುವಾರ ಬಿದರಹಳ್ಳಿಯಲ್ಲಿನ ಮೊರಾರ್ಜಿ ವಸತಿಶಾಲೆಯಲ್ಲಿ ಕಪೂಚಿನ್ ಸೇವಾ ಕೇಂದ್ರ ಮತ್ತು ವಿಮುಕ್ತಿ ಸ್ವಸಹಾಯ ಸಂಘಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಲಸಾದ ಫೋಕ್ಸೋಕಾಯ್ದೆ ಹಾಗೂ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಹೆಣ್ಣು ಮಕ್ಕಳು, ಮಹಿಳೆಯರು ತಮ್ಮ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಅರಿವು ಹೊಂದಿರಬೇಕು.
ದೌರ್ಜನ್ಯ ನಡೆದಾಗ ಅದರ ವಿರುದ್ದ ಸಮೀಪದ ಪೋಲೀಸ್ ಸ್ಟೇಷನ್‌ಗೆ ತೆರಳಿ ದೂರು ನೀಡದಿದ್ದರೆ ಅಂತಹ ದೌಜ್ಯನ್ಯಗಳು ಮತ್ತೆ ಮರುಕಳಿಸಲು ಅವಕಾಶ ಮಾಡಿ ಕೊಟ್ಟಂತಾಗುತ್ತದೆ. ದೌರ್ಜನ್ಯದ ವಿರುದ್ದ ಅಂಜದೆ ಅಳುಕದೆ ಧೈರ್ಯದಿಂದ ದೂರು ನೀಡಬೇಕು.ಮಹಿಳೆಯರು ದೌರ್ಜನ್ಯದ ವಿರುದ್ದ ಕಠಿಣವಾಗಿ ಪ್ರತಿಕ್ರಯಿಸಿದರೆ ಮಾತ್ರಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.
ಕಾನೂನಿನಲ್ಲಿ ಮಹಿಳೆಯರಿಗೆ ಹೆಚ್ಚಿನ ಭದ್ರತೆಯಿದೆ. ಹಾಗಾಗಿ ಪ್ರತಿಯೊಬ್ಬ ಹೆಣ್ಣು ಮಕ್ಕಳು ಧೌರ್ಜನ್ಯದ ವಿರುದ್ದ ಹೋರಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಮೂಡಿಗೆರೆ ಪೋಲೀಸ್ ತನಿಖಾ ವಿಭಾಗದ ಪಿಎಸ್‌ಐ ಚಂದ್ರಶೇಖರ್ ಮಾತನಾಡಿ,ದೌರ್ಜನ್ಯ ನಡೆಯುವ ಸಂಭವಗಳು ಎದುರಾದಾಗ ಉಚಿತ ದೂರವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿ ಪೋಲೀಸರ ನೆರೆವು ಪಡೆದುಕೊಳ್ಳಬಹುದು. ದುರ್ಬಲ ವರ್ಗಗಳಿಗೆ ಕಾನೂನಿನ ನೆರವು ನೀಡುವ ಸಲುವಾಗಿ ಉಚಿತ ಕಾನೂನು ಸೇವಾ ಪ್ರಾಧಿಕಾರವಿದೆ. ನೊಂದವರು ಅದರ ನೆರವು ಪಡೆದುಕೊಂಡು ದೌರ್ಜನ್ಯ ನಡೆಸುವ ಕ್ರೂರಿಗಳನ್ನು ಕಾನೂನಿನ ಕುಣಿಕೆಗೆ ಸಿಲುಕಿಸಬಹುದು ಎಂದು ತಿಳಿಸಿದರು.
ಈ ವೇಳೆ ಕಾಫಿನಾಡು ಸಮಾಜಸೇವಕ ಸಂಘದ ಅಧ್ಯಕ್ಷ ಹಸೈನಾರ್, ಪ್ರಾಂಶುಪಾಲ ಬಿ.ಟಿ.ವೆಂಕಟೇಶ್,ಗ್ರಾ.ಪo.ಉಪಾಧ್ಯಕ್ಷೆ ಕೆ.ಆರ್.ಗೀತಾ,ವಿಮುಕ್ತಿ ಕಾರ್ಯಕರ್ತೆ ವಿಂದ್ಯಾ ಮತ್ತಿತರರಿದ್ದರು.
——-——ವಿಜಯಕುಮಾರ್.ಟಿ.ಮೂಡಿಗೆರೆ