ಬೇಲೂರು;ಉರ್ದು ಶಾಲೆಗಳ ಮಕ್ಕಳ ಪ್ರತಿಭೆಯನ್ನು ಕಂಡು ನನಗೆ ಅತ್ಯಂತ ಸಂತೋಷವಾಗಿದೆ.ಶಾಲೆಗಳ ಶಿಕ್ಷಕರು ಮಕ್ಕಳ ಒಳಗಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಸಾಕಷ್ಟು ಶ್ರಮ ಪಟ್ಟಂತೆ ಕಂಡಿದ್ದು ನಿಮ್ಮ ಈ ಕಾರ್ಯಕ್ಕೆ ನನ್ನ ಕಡೆಯಿಂದ ಮೆಚ್ಚುಗೆಯನ್ನು ಸೂಚಿಸುತ್ತೇನೆ.ಹೀಗೆಯೇ ಮಕ್ಕಳ ವಿದ್ಯಾಭ್ಯಾಸದ ಕಡೆಗೂ ಒತ್ತುಕೊಟ್ಟು ಅವರನ್ನು ಪ್ರತಿಭಾನ್ವಿತರನ್ನಾಗಿ ಮಾಡುವ ಮಹತ್ತರವಾದ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಹೇಳಿದರು.
ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಉರ್ದು ಶಾಲೆಗಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾನು ಬೇಲೂರಿಗೆ ಹೊಸದಾಗಿ ಬಂದಿದ್ದು ನನ್ನ ಊರಿನ ಶಾಲೆಗಳ ಅಭಿವೃದ್ಧಿಗೆ ಶ್ರಮವಹಿಸಿ ಕೆಲಸ ಮಾಡುತ್ತೇನೆ.ನಿಮ್ಮ ಶಾಲೆಗಳ ಯಾವುದೇ ಸಮಸ್ಯೆಗಳಿದ್ದರೂ ನಾನು ಬಗೆಹರಿಸಿಕೊಡುತ್ತೇನೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಭರವಸೆ ನೀಡಿದರು.
ನಂತರ ಮಾತನಾಡಿದ ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್ , ಬೇಲೂರು ತಾಲೂಕಿನ ಉರ್ದು ಶಾಲೆಗಳಿಗೆ ಮೂಲಭೂತ ಸೌಕರ್ಯಗಳು ಒದಗಿಸಿಕೊಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವೇದಿಕೆಯಲ್ಲಿ ಮನವಿ ಮಾಡಿದರು.
ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷ ಪೂರ್ಣೇಶ್ ಮಾತನಾಡಿ ಉರ್ದು ಶಾಲೆಯ ಶಿಕ್ಷಕಿಯರು ಸಂಕೋಚಿತ ಮನೋಭಾವ ಉಳ್ಳವರು ಏನೇ ಸಮಸ್ಯೆ ಇದ್ದರೂ ತಿಳಿಸುವುದಿಲ್ಲ.ಶಿಕ್ಷಣಾಧಿಕಾರಿಗಳ ಕಚೇರಿ ಪಕ್ಕದಲ್ಲಿರುವ ಸರ್ಕಾರಿ ಉರ್ದು ಶಾಲೆ ಮಳೆ ಬಂದರೆ ಸೋರುತ್ತದೆ ಅದೊಂದು ಸಮಸ್ಯೆಯನ್ನು ಬಗೆಹರಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉರ್ದು ಶಾಲೆಯ ಸಿ ಆರ್ ಪಿ ಹೀನಾ ಕೌಸರ್,ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಗಿರೀಶ್,ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಧನಂಜಯ್,ಶಾಲಾ ಮಕ್ಕಳು ಪೋಷಕರು ಶಿಕ್ಷಕಿಯರು ಹಾಜರಿದ್ದರು.
–—————————–ನೂರ್ ಅಹಮ್ಮದ್