ಕೆ.ಆರ್.ಪೇಟೆ-ರೈತರಿಗೆ ಸೂಕ್ತ ಪರಿಹಾರ ನೀಡುವವರೆಗೂ ಕೆಶಿಪ್ ಕಾಮಗಾರಿ ತಡೆಗೆ ಶಾಸಕ ಹೆಚ್.ಟಿ ಮಂಜು ಸೂಚನೆ-ಸಭೆಗೆ ಬಾರದ ಪೊಲೀಸ್ ಅಧಿಕಾರಿಗಳ ವಿರುದ್ಧ ಗರಂ

ಕೆ.ಆರ್.ಪೇಟೆ:ರೈತರಿಗೆ ಸೂಕ್ತ ವೈಜ್ಞಾನಿಕ ಪರಿಹಾರ ನೀಡದೇ ಪೋಲೀಸರನ್ನು ಬಳಕೆ ಮಾಡಿಕೊಂಡು ರೈತರನ್ನು ಬೆದರಿಸಿ ಕೆಶಿಫ್ ಅಧಿಕಾರಿಗಳು ಕಾಮಗಾರಿ ಮಾಡುತ್ತಿದ್ದು,ಅವೈಜ್ಞಾನಿಕ ಕಾಮಗಾರಿ ನಡೆಸಿ ಅಪಘಾತಗಳಿಗೆ ಕಾರಣವಾಗಿರುವ ಸಂಬಂಧಪಟ್ಟ ಕೆಶಿಫ್ ಅಧಿಕಾರಿಗಳ ವಿರುದ್ದ ಎಫ್.ಐ.ಆರ್. ದಾಖಲಿಸುವಂತೆ ತಹಸೀಲ್ದಾರ್ ಅವರಿಗೆ ಶಾಸಕರಾದ ಹೆಚ್.ಟಿ.ಮಂಜು ಸೂಚನೆ ನೀಡಿದರು.

ತಾಲ್ಲೂಕಿನ ಚಿಕ್ಕೋನಹಳ್ಳಿ ರೇಷ್ಮೆ ತರಬೇತಿ ಕೇಂದ್ರದ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ಕೆಶಿಫ್ ಮೇಲಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ರೈತರ ಸಮಸ್ಯೆ ಬಗೆಹರಿಸುವವರೆಗೆ ಕಾಮಗಾರಿ ಸ್ಥಗಿತಗೊಳಿಸುವಂತೆ ಶಾಸಕರು ತಿಳಿಸಿದರು.

ನಿರ್ಮಿತಿ ಕೇಂದ್ರದ ಅಧಿಕಾರಿಗಳು ಟೆಂಡರ್ ಪಡೆದು ಹಲವಾರು ಕಾಮಗಾರಿಗಳನ್ನು ಆರಂಭಿಸಿಲ್ಲ. ಮತ್ತೆ ಹಲವು ಕಾಮಗಾರಿಗಳನ್ನು ಅರ್ಧಕ್ಕೆ ನಿಲ್ಲಿಸಿ ನಾಲ್ಕಾರು ವರ್ಷಗಳೇ ಕಳೆದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಕೂಡಲೇ ಎಲ್ಲಾ ಕಾಮಗಾರಿಗಳನ್ನು ಗುಣಮಟ್ಟ ಕಾಯ್ದುಕೊಂಡು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ನಿಮ್ಮ ನಿರ್ಮಿತಿ ಕೇಂದ್ರವು ತಾಲ್ಲೂಕಿನಲ್ಲಿ ಯಾವುದೇ ಕಾಮಗಾರಿ ಮಾಡದಂತೆ ಕಪ್ಪು ಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಶಿಪಾರಸ್ಸು ಮಾಡಬೇಕಾಗುತ್ತದೆ ಎಂದು ನಿರ್ಮಿತಿ ಕೇಂದ್ರದ ಇಂಜಿನಿಯರ್ ಹೇಮಂತ್ ಅವರಿಗೆ ಎಚ್ಚರಿಕೆ ನೀಡಿದರು.

ಕೆ.ಆರ್.ಪೇಟೆ ಪಟ್ಟಣದಲ್ಲಿ ಕಳೆದ ಐದಾರು ದಿನಗಳಿಂದ ನೀರುಗಂಟಿಗಳು ಕೆಲಸ ನಿರ್ವಹಿಸದೇ ಕುಡಿಯುವ ನೀರಿಗೆ ತೊಂದರೆಯಾಗಿದ್ದು, ಕೂಡಲೇ ಬಗೆಹರಿಸುವಂತೆ ಪುರಸಭೆ ಇಂಜಿನಿಯರ್ ಬಸವೇಗೌಡ ಅವರಿಗೆ ಸೂಚನೆ ನೀಡಿದದರು.

ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಸಬ್ಸಿಡಿ ರೂಪದಲ್ಲಿ ರೈತರಿಗೆ ಸಿಗುವ ಸೌಲಭ್ಯಗಳನ್ನು ಅರ್ಹ ರೈತರಿಗೆ ನೀಡಲು ಕ್ರಮ ವಹಿಸಬೇಕು. ಕೊಟ್ಟವರಿಗೆ ಮತ್ತೆ ಕೊಡಬಾರದು. ಎಲ್ಲಾ ಇಲಾಖೆಯವರು ತಲಾ ಐವರು ಉತ್ತಮ ರೈತರನ್ನು ಗುರುತಿಸಿ ಅವರನ್ನು ಗೌರವಿಸುವ ಮೂಲಕ ರೈತರನ್ನು ಪ್ರೋತ್ಸಾಹಿಸಬೇಕು ಎಂದು ಶಾಸಕರು ಸಲಹೆ ನೀಡಿದರು.

ಕೆರೆ ಕಟ್ಟೆ ಅಭಿವೃದ್ದಿಗೆ ನರೇಗಾ ಬಳಕೆ ಮಾಡಿಕೊಳ್ಳಬೇಕು. ನೀರಾವರಿ ಇಲಾಖೆಯ ಅಧಿಕಾರಿಗಳು ಬಾಕಿ ಇರುವ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಯಾವುದೇ ಕಾಮಗಾರಿ ಆಗಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು.ಗುಣಮಟ್ಟ ಕಾಪಾಡಿಕೊಳ್ಳದ ಅಧಿಕಾರಿಗಳನ್ನೂ ಯಾವುದೇ ಕಾರಣಕ್ಕೂ ನಾನು ಕ್ಷಮಿಸುವುದಿಲ್ಲ ಎಂದು ಶಾಸಕರು ಗುಡುಗಿದರು.

ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸರ್ವೆ ನಡೆಸಿ ಅರಣ್ಯ ಇಲಾಖೆಯ ಭೂಮಿಯ ಸರ್ವೆ ನಂಬರ್ ನೊಳಗೆ ಯಾವುದಾದರೊಂದು ಕಡೆ ಬಿಟ್ಟು ಉಳಿಕೆ ಭೂಮಿಯನ್ನು ರೈತರು ಬೇಸಾಯ ಮಾಡುತ್ತಿದ್ದರೆ ಅವರಿಗೆ ತೊಂದರೆ ಕೊಡಬಾರದು ಎಂದು ಅರಣ್ಯ ಇಲಾಖೆಗೆ ಸೂಚನೆ ನೀಡಿದರು.

ಬೇಸಿಗೆ ಸಮೀಪಿಸುತ್ತಿದೆ. ಹೇಮಾವತಿ ಕಾಲುವೆಗಳಲ್ಲಿ ನೀರು ಹರಿಯುತ್ತಿದೆ ಇಂಥಹ ಪರಿಸ್ಥಿತಿಯಲ್ಲಿಯೂ ಕೆರೆಕಟ್ಟೆಗಳಿಗೆ ನೀರು ತುಂಬಿಸದಿದ್ದರೆ ಇಂಜಿನಿಯರ್‌ಗಳಾಗಿ ಏನು ಕೆಲಸ ಮಾಡುತ್ತೀರಿ ಎಂದು ನೀರಾವರಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಪುರಸಭೆ ಯುಜಿಡಿ ಕೆಲಸ ಸಂಪೂರ್ಣ ಆಗಿದೆ ಎಂದು ಮಾಹಿತಿ ನೀಡಿದ್ದೀರಿ. ಪುರಸಭೆಯ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ಅರ್ಧ ಕಾಮಗಾರಿ ಮುಗಿಸಿ ಹಸ್ತಾಂತರ ಮಾಡಿದ್ದೇವೆ ಎಂದು ತಿಳಿಸಿದ ಬಾಬುಸಾಬ್ ಪ್ರತಾಪ್, ಎಇಇ ಇವರುಗಳ ಕೆಲಸ ಸಮರ್ಪಕವಾಗಿಲ್ಲ. ಮಾಡುವ ಕೆಲಸಗಳ ಬಗ್ಗೆ ನೀಲನಕ್ಷೆ ಹಾಕಿಕೊಂಡು ನಿಗಧಿತ ಸಮಯದಲ್ಲಿ ಕೆಲಸ ಮುಗಿಸಲು ಶ್ರಮಿಸಬೇಕು. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ ಶಾಸಕರು ನಿಮ್ಮ ಮನೆಗೆ ಕೊಳಚೆ ನೀರು ಬಿಟ್ಟರೆ ಸುಮ್ಮನಿರತ್ತೀರಾ. ಬೋರವೆಲ್ ಪಂಪ್ ರಿಪೇರಿ ಮುಂತಾದ ಕುಡಿಯುವ ನೀರಿನ ಸೌಲಭ್ಯಗಳಿಗೆ ಮೊದಲ ಆದ್ಯತೆಯಾಗಿ ಮಾನವೀಯ ದೃಷ್ಠಿಯಿಂದ ಅವಕಾಶ ಮಾಡಕೊಡಿ ಎಂದರು.

ಸೋಮನಹಳ್ಳಿ ಗ್ರಾಮದ ಜನವಸತಿ ಪ್ರದೇಶದಲ್ಲಿ ಮದ್ಯದಂಗಡಿ ತೆರವುಗೊಳಿಸುವಂತೆ ಈಗಾಗಲೇ ಸೂಚನೆ ನೀಡಿದ್ದು ಇದುವರೆವಿಗೂ ತೆರವುಗೊಳಿಸಿಲ್ಲ. ಪ್ರಭಾವಿಗಳಿಗೆ ಒಂದು ಕಾನೂನು ಜನಸಾಮಾನ್ಯರಿಗೆ ಒಂದು ಕಾನೂನು ಇದೆಯಾ ಎಂದು ಅಬಕಾರಿ ಅಧಿಕಾರಿಗಳಿಗೆ ಬೆವರಿಳಿಸಿದರು. ಪ್ರಗತಿ ಪರಿಶೀಲನಾ ಸಭೆಗೆ ಮೂರು ಠಾಣೆಯ ಪೊಲೀಸ್ ನಿರೀಕ್ಷಕರು ಬರದೇ ಇರುವ ಬಗ್ಗೆ ಶಾಸಕ ಮಂಜು ಗರಂ ಆದರು. ಇತ್ತೀಚಿನ ದಿನಗಳಲ್ಲಿ ಜನತೆ ಪೊಲೀಸರ ಮೇಲೆ ಇಟ್ಟಿರುವ ನಂಬಿಕೆಗಳು ಸುಳ್ಳಾಗುವಂತೆ ವರ್ತಿಸುತ್ತಿದ್ದು ಪೊಲೀಸರು ಸರ್ವಾಧಿಕಾರಿಗಳಾ. ಅವರುಗಳು ತಮ್ಮ ಇಲಾಖೆಯ ಮಾಹಿತಿ ನೀಡಬಾರದು ಎಂದು ಕಾನೂನು ಇದೆಯಾ ? ಸಭೆಗೆ ಬಂದರೆ ಅವರ ಬಂಡವಾಳ ಬಯಲಾಗುತ್ತದೆಯೆ? ಕೂಡಲೇ ಡಿಜಿ ಹಾಗೂ ಐಜಿಗೆ ದೂರು ನೀಡಲು ಸೂಚನೆ ನೀಡಿದರು.

ಪಟ್ಟಣದ ಕ್ರೀಡಾಂಗಣದಲ್ಲಿ ಅಳವಡಿಸಿರುವ ಕ್ರೀಡಾ ಸಾಮಗ್ರಿಗಳ ಬೆಲೆ ಮಾರುಕಟ್ಟೆ ದರಗಳಗಿಂತ ಮೂರುಪಟ್ಟು ಹೆಚ್ಚಾಗಿರುತ್ತದೆ. ತಾಂತ್ರಿಕ ಅನುಮೋದನೆ ಪಡೆಯದೆ ಅಕ್ರಮವಾಗಿ ಬಿಲ್ ಮಾಡಿಕೊಂಡಿರುವುದಾಗಿ ಆರೋಪ. ಮರದ ನೆಲಹಾಸು, ಜಿಮ್ ಸಾಮಾಗ್ರಿ ಖರೀದಿಯಲ್ಲಿ ಅವ್ಯವಹಾರ ಆರೋಪ. ನಿರ್ಮಿತಿ ಕೇಂದ್ರದ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲು ತಾಕೀತು. ಕಂದಾಯ ಇಲಾಖೆಯ 715 ಸ.ನಂಗಳಲ್ಲಿ 195 ಸ.ನಂಗಳು 1-5 ಆಗಿದ್ದು, ಉಳಿದವು ಆಗಬೇಕು. 50 ಅರ್ಜಿಗಳು ಹೊಸ ಸ.ನಂ ಆಗಿವೆ. ಕಂದಾಯ ಗ್ರಾಮ ದಡದಹಳ್ಳಿಗೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್, ತಹಸೀಲ್ದಾರ್ ಎಸ್.ಯು.ಅಶೋಕ್, ತಾಲ್ಲೂಕು ಪಂಚಾಯತ್ ಆಡಳಿತಾಧಿಕಾರಿ ರಾಜಮೂರ್ತಿ, ಇಓ ಸುಷ್ಮಾ, ಶಾಸಕರ ಆಪ್ತ ಸಹಾಯಕ ಪ್ರತಾಪ್, ಕುಮಾರಸ್ವಾಮಿ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

——————–—–ಶ್ರೀನಿವಾಸ್ ಆರ್

Leave a Reply

Your email address will not be published. Required fields are marked *

× How can I help you?