ಚಿಕ್ಕಮಗಳೂರು-ಸಂವಿಧಾನ ನಮ್ಮ ಬದುಕು, ಭಾರತದ ಸಂವಿಧಾನ ಉಳಿದರೆ ಮಾತ್ರ ನಾವುಗಳು ರಾಜ್ಯ,ರಾಷ್ಟ್ರ ಆಳಲು ಸಾಧ್ಯ ಎಂದು ಎಐಸಿಸಿ ಸಹ ಸಂಚಾಲಕ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಕ್ಕಪ್ಪ ತಿಳಿಸಿದರು.
ಅವರು ಬುಧವಾರ ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸಂವಿಧಾನ ರಕ್ಷಕ ಅಭಿಯಾನ ಕಾರ್ಯಕ್ರಮದ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಸಂವಿಧಾನವನ್ನು ನಾವುಗಳು ರಕ್ಷಣೆ ಮಾಡದೇ ಹೋದರೆ ಯಾರು ರಕ್ಷಣೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಬಿಜೆಪಿ ನಾಯಕರುಗಳು ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಾವಣೆ ಮಾಡಲು ಎಂದು ಕೀಳು ಮಟ್ಟದ ಹೇಳಿಕೆಗಳನ್ನು ಹೇಳುವ ಮೂಲಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ಅವಮಾನ ಮಾಡಿಕೊಂಡು ಬರುತ್ತಿದ್ದು, ಅವರ ವಿರುದ್ಧ ನಾವುಗಳು ಸೆಟೆದು ನಿಲ್ಲಬೇಕೆಂದು ಕರೆ ನೀಡಿದರು.
ದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರಿಗೆ ಮೀಸಲಾತಿ ಏಕೆ ಬೇಕು ಎಂಬುದನ್ನು ಪ್ರತಿನಿತ್ಯ ಹೇಳಿಕೆಗಳನ್ನು ನೀಡುತ್ತಿದ್ದು, ಹೊರಗುತ್ತಿಗೆಯಲ್ಲೂ ಸಹ ಎಸ್.ಸಿ, ಎಸ್.ಟಿ ಜನಾಂಗವನ್ನು ಕಡೆಗಣಿಸಿ, ಆರ್ಎಸ್ಎಸ್ ಅವರನ್ನು ಮಾತ್ರ ಪರಿಗಣಿಸುತ್ತಿದ್ದು, ಇದನ್ನು ನಾವೆಲ್ಲರೂ ಪ್ರಶ್ನಿಸಬೇಕಾಗಿದೆ ಎಂದರು.
ರಾಜ್ಯ ಮತ್ತು ರಾಷ್ಟ್ರದ ಎಲ್ಲಾ ಭಾಗಗಳಲ್ಲು ಜೈ ಭೀಮ್, ಜೈ ಸಂವಿಧಾನ, ಜೈ ಬಾಪು ಅಭಿಯಾನವನ್ನು ಮಾಡಬೇಕು ಎಂಬುದು ಎಐಸಿಸಿ ಮತ್ತು ಕೆಪಿಸಿಸಿ ಆಶಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ದೇಶದ ಏಳಿಗೆಗಾಗಿ ಮತ್ತು ಸಂವಿಧಾನದ ಉಳಿವಿಗಾಗಿ ಪಣತೊಡಬೇಕೆಂದು ಮನವಿ ಮಾಡಿದರು.
ಅಹಿಂದ ಮತಗಳನ್ನು ವಿಭಜನೆ ಮಾಡಲು ಆರ್ಎಸ್ಎಸ್ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರ ನಾಯಕರಾದ ರಾಹುಲ್ ಗಾಂಧಿಯವರ ಪರವಾಗಿ ದೇಶದ ಎಲ್ಲಾ ವರ್ಗದವರು ಸಂಪೂರ್ಣವಾಗಿ ಬೆಂಬಲವಾಗಿ ನಿಂತಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರನ್ನು ಒಟ್ಟುಗೂಡಿಸಿ ಬೃಹತ್ ಕಾರ್ಯಾಗಾರವನ್ನು ಮಾಡಲು ಚಿಂತನೆ ಮಾಡಲಾಗಿದೆ. ಈ ಕಾರ್ಯಾಗಾರ ಯಶಸ್ವಿಯಾಗಲು ನಿಮ್ಮೆಲ್ಲರ ಸಹಕಾರ ಬಹಳ ಮುಖ್ಯವಾಗಿ ಬೇಕಾಗಿದೆ ಎಂದು ತಿಳಿಸಿದರು.
ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸoದೀಪ್ ಮಾತನಾಡಿ, ಭಾರತದ ಸಂವಿಧಾನದಲ್ಲಿ ಏನಿದೆ ಎಂಬುದು ಬಿಜೆಪಿಗಾಗಲಿ, ಆರ್ಎಸ್ಎಸ್ಗಾಗಲಿ ತಿಳುವಳಿಕೆ ಇಲ್ಲ. ಸಂವಿಧಾನದ ವಿರುದ್ಧ ಬಿಜೆಪಿ, ಆರ್ಎಸ್ಎಸ್ ಚಿಂತನೆ ಮಾಡುತ್ತಿದ್ದರೆ, ಕಾಂಗ್ರೆಸ್ ಜೈ ಭೀಮ್, ಜೈ ಸಂವಿಧಾನ, ಜೈ ಬಾಪು ಅವರುಗಳ ಬಗ್ಗೆ ಚಿಂತನೆ ಮಾಡಿಕೊಂಡು ಬರುತ್ತಿದೆ ಎಂದರು.
ಭಾರತದ ಸಂವಿಧಾನದ ಆಶಯವೇನು, ಉದ್ದೇಶವೇನು ಎಂಬುದನ್ನು ದೇಶದ ಪ್ರತಿಯೊಬ್ಬ ನಾಗರಿಕನು ಚಿಂತನೆ ಮಾಡಬೇಕಾಗಿದೆ. ಯುವ ಸಮೂಹಕ್ಕೆ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ನಾವೆಲ್ಲರೂ ಮಡಬೇಕಾಗಿದೆ ಎಂದು ಹೇಳಿದರು.
ಬುದ್ದ, ಬಸವ, ಅಂಬೇಡ್ಕರ್ ಅವರುಗಳು ಹಾಕಿಕೊಟ್ಟ ಹಾದಿಯಲ್ಲಿ ನಾವುಗಳು ಸಾಗುತ್ತಿದ್ದೇವೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧೀಜಿ ಮತ್ತು ನೆಹರು ಅವರು ತೆಗೆದುಕೊಂಡ ದಿಟ್ಟ ನಿಲುವುಗಳನ್ನು ಕಾಂಗ್ರೆಸ್ ಪಾಲಿಸುತ್ತಿದೆ. ಬಿಜೆಪಿ ಮತ್ತು ಆರ್ಎಸ್ಎಸ್ ದೇಶದಲ್ಲಿ ವಿಷ ಬೀಜವನ್ನು ಬಿತ್ತುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಅವರಿಗೆ ತಕ್ಕ ಪಾಠವನ್ನು ಕಲಿಸಬೇಕಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಭದ್ರಾ ಕಾಡಾ ನಿಗಮ ಅಧ್ಯಕ್ಷರೂ ಆದ ಡಾ.ಕೆ.ಪಿ.ಅಂಶುಮoತ್ ಮಾತನಾಡಿ, ಕಾಂಗ್ರೆಸ್ ಪಕ್ಷವು ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುತ್ತಿದೆ. ಅಂಬೇಡ್ಕರ್ ಅವರು ಹಾಕಿಕೊಟ್ಟಿರುವ ದಾರಿಯಲ್ಲಿ ಪ್ರತಿಯೊಬ್ಬರೂ ಸಾಗಬೇಕಾಗಿದೆ. ಸಮಾಜದಲ್ಲಿನ ಬದುಕು ಮತ್ತು ಹೋರಾಟ ಅವರಿಂದ ಪ್ರೇರಣೆಯಾಗಿದೆ ಎಂದು ಹೇಳಿದರು.
ದೇಶದಲ್ಲಿ ಸಾಮಾನ್ಯ ಜನರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ದಲಿತರು ಸಮನಾಗಿ ಅಧಿಕಾರವನ್ನು ಹಿಡಿಯಲು ಸಂವಿಧಾನ ಕಾರಣವಾಗಿದೆ. ಅವರ ತ್ಯಾಗ ಬಲಿದಾನದಿಂದ ಇಂದು ನಾವುಗಳು ಸ್ವತಂತ್ರವಾಗಿ ಸಮಾಜದಲ್ಲಿ ಬಹುಕಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ದೇಶದ ಇಂದಿನ ಪರಿಸ್ಥಿತಿಯಲ್ಲಿ ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು. ಅಂಬೇಡ್ಕರ್ ಬರೆದಿರುವ ಸಂವಿಧಾನಕ್ಕೆ ಎಲ್ಲರೂ ತಲೆಬಾಗಬೇಕು. ಅಂಬೇಡ್ಕರ್ ಅವರು ಜೀವಂತ ಅವಧಿಯಲ್ಲಿ ಬಹಳ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದರ ಫಲವಾಗಿ ಇಂದು ಜನಸಾಮಾನ್ಯರು ಅಧಿಕಾರ ನಡೆಸಲು ಸಹಕಾರಿಯಾಗಿದೆ ಎಂದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಜಿಲ್ಲಾ ಕಾಂಗ್ರೆಸ್ ಎಸ್.ಸಿ ಘಟಕದ ಜಿಲ್ಲಾಧ್ಯಕ್ಷ ಮಲ್ಲೇಶ್ ಮಾತನಾಡಿದರು. ಇತ್ತೀಚೆಗೆ ನಡೆದ ಚಿಕ್ಕಮಗಳೂರು ಟೌನ್ ಆಪರೇಟಿವ್ ಸೊಸೈಟಿ ನಿರ್ದೇಶಕರ ಚುನಾವಣೆಯಲ್ಲಿ ಆಯ್ಕೆಯಾದ ಹಾಲಮ್ಮ ರಾಮಚಂದ್ರ ಅವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಗೌರವಿಸಲಾಯಿತು.
ಪೂರ್ವ ಭಾವಿ ಸಭೆಯಲ್ಲಿ ಕೆಪಿಸಿಸಿ ಎಸ್.ಸಿ ಘಟಕದ ರಾಜ್ಯ ಉಪಾಧ್ಯಕ್ಷ ಮುನಿರಾಜು, ಸಿಡಿಎ ಅಧ್ಯಕ್ಷ ಮಹಮದ್ ನಯಾಜ್, ನಗರ ಕಾಂಗ್ರೆಸ್ ಅಧ್ಯಕ್ಷ ತನೋಜ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಬಸವರಾಜ್, ಜಿಲ್ಲಾ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ, ಕೆಪಿಸಿಸಿ ಎಸ್.ಸಿ ಘಟಕ ರಾಜ್ಯ ಸಂಚಾಲಕಿ ನೇತ್ರಾವತಿ, ಗ್ಯಾರಂಟಿ ಸಮಿತಿ ಸದಸ್ಯ ಅನ್ಸರ್ ಆಲಿ, ಮುಖಂಡರಾದ ನಾಗೇಶ್, ಶಿವಾಜಿ, ಶಬುದ್ದೀನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.