ಚಿಕ್ಕಮಗಳೂರು-ಗುರುಪರಂಪರೆಗೆ ಪ್ರಸ್ತುತ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಕಳಸಪ್ರಾಯ ಎಂದು ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದ ಸಂಸದರಾದ ಕೋಟಾ ಶ್ರೀನಿವಾಸಪೂಜಾರಿ ಅಭಿಪ್ರಾಯಿಸಿದರು.
ಸುವರ್ಣಮಾಧ್ಯಮ ಭವನದ ಚಿಕ್ಕೊಳಲೆ ಸದಾಶಿವಶಾಸ್ತ್ರೀ ಸಭಾಂಗಣದಲ್ಲಿ ಜಂಗಮ ಬಳಗ, ಶ್ರೀದೇವಿ ಗುರುಕುಲ ಹಾಗೂ ಶ್ರೀ ಪಾರ್ವತಿ ಮಹಿಳಾ ಮಂಡಳಿ ಆಯೋಜಿಸಿದ್ದ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ 69ನೆಯ ಜನ್ಮದಿನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಗುರುಪರಂಪರೆ, ಗುರುಪೀಠಗಳಿಗೆ ನಮ್ಮ ಸಮಾಜದಲ್ಲಿ ಅತ್ಯಂತ ಪ್ರೀತಿ-ಗೌರವ ಇದೆ.ಸಮಾಜಕ್ಕೆ ಸತ್‌ಪ್ರೇರಣೆ ನೀಡಿ ಸನ್ಮಾರ್ಗ ತೋರುವ ಶಕ್ತಿ ಪೂಜ್ಯರಿಗಿದೆ.ಜಾತಿ, ಮತ, ಭಿನ್ನಬೇಧಗಳಿಲ್ಲದೆ ಎಲ್ಲರಿಗೂ ಒಳಿತನ್ನು ಬಯಸುವ ಆಶೀರ್ವಾದ ರಂಭಾಪುರಿ ಜಗದ್ಗುರುಗಳು ನೀಡುತ್ತಾ ಬಂದಿದ್ದಾರೆ.ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ತಾವು ಪೂಜ್ಯರನ್ನು ಭೇಟಿ ಮಾಡಿದಾಗ ‘ನಿನಗೆ ಒಳ್ಳೆಯದಾಗಲಿ. ಅದಕ್ಕಿಂತ ಮುಖ್ಯವಾಗಿ ದೇಶಕ್ಕೆ ಒಳ್ಳೆಯದಾಗಬೇಕು’ ಎಂದು ಅಪ್ಪಣೆ ಕೊಡಿಸಿದ್ದರೆಂದು ಸ್ಮರಿಸಿದರು.
ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದರೆ ಆತಂಕವಾಗುತ್ತದೆ.ನಮ್ಮ ಮುಂದಿನ ತಲೆಮಾರಿನ ಬದುಕು ಶಾಂತಿ ಮತ್ತು ನೆಮ್ಮದಿಯಿಂದ ಕೂಡಿರಬೇಕಾದರೆ ಇಂತಹ ಗುರುಪೀಠಗಳು ಮಾರ್ಗದರ್ಶನದ ಅನಿವಾರ್ಯತೆ ಅರ್ಥವಾಗುತ್ತದೆ. ಮಕ್ಕಳಿಗೆ ಗುರುಕುಲದ ಒಳ್ಳೆಯ ಶಿಕ್ಷಣ ನೀಡಿದರೆ ಭವಿಷ್ಯಕ್ಕೆ ಒಳಿತಿದೆ ಎಂದರು.
ಮಂಗಳೂರಿನ ಶ್ರೀಮಂತ ಕುಟುಂಬದ ಏಕೈಕ ಪುತ್ರ ದೇಶ ಸೇವೆಯ ಹಂಬಲದಿoದ ಸೈನ್ಯಸೇರಿ ಪಾಕ್ ಗಡಿ ಕಾಯುವಾಗ ಉಗ್ರ ಬಾಂಬ್ ಧಾಳಿಗೆ ತುತ್ತಾಗಿ ಜೀವಬಿಡುತ್ತಾನೆ.ದೇಶ ಭಕ್ತನ ಶವ ಕಾಶ್ಮೀರದಿಂದ ಕರ್ನಾಟಕಕ್ಕೆ ಬರುವ ಸಂದರ್ಭದಲ್ಲೆ ಕರ್ನಾಟಕದ ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಮೊಳಗುತ್ತದೆ ಎಂದರೆ ನಾವು ಎತ್ತ ಸಾಗುತ್ತಿದ್ದೇವೆ ಚಿಂತೆ ಕಾಡುತ್ತದೆ.ದೇಶಭಕ್ತನ ತಾಯಿ ‘ಯಾರಿಗಾಗಿ ನನ್ನ ಮಗ ಪ್ರಾಣಬಿಟ್ಟ’ ಎಂಬ ಚುಟುಕು ಬರೆದು ಸಂಕಟ ಹೊರ ಹಾಕುತ್ತಾಳೆ.ಇದನ್ನು ಓದಿದ ಲೇಖಕನೊಬ್ಬ ಕೆಟ್ಟ ಮನಸ್ಥಿತಿಯವರಿಗೆ ನಾವೆಂತಹ ಶಿಕ್ಷಣ ನೀಡಿದ್ದೇವೆ ಎಂಬ ಪ್ರಶ್ನೆ ಹಾಕುತ್ತಾನೆ ಎಂದ ಸಂಸದರು,ಸ್ವಾರ್ಥಕ್ಕಿಂತ ದೇಶ ಮೊದಲು ಎಂಬ ರಂಭಾಪುರಿ ಜಗದ್ಗುರುಗಳ ಸಂದೇಶ ನಮಗೆಲ್ಲ ಪಾಠವಾಗಬೇಕು ಎಂದರು.
ಸಮಾರoಭದ ಅಧ್ಯಕ್ಷತೆವಹಿಸಿದ್ದ ಜಂಗಮ ಬಳಗದ ಸಂಚಾಲಕ ಪ್ರಭುಲಿಂಗಶಾಸ್ತ್ರೀ ಮಾತನಾಡಿ ‘ಸಾಹಿತ್ಯ-ಸಂಸ್ಕೃತಿ ಸಂವರ್ಧಿಸಲಿ, ಶಾಂತಿ-ಸoಮೃದ್ಧಿ ಸರ್ವರಿಗಾಗಲಿ’ ಎಂಬ ಮಹತ್ವದ ಸಂದೇಶ ನೀಡಿರುವ ಶ್ರೀಮದ್ರಂಭಾಪುರಿ ಡಾ.ವೀರಸೋಮೇಶ್ವವರ ಜಗದ್ಗುರುಗಳ ಸದಾಶಯದಲ್ಲಿ ಲೋಕಹಿತ ಗುರುತಿಸಬಹುದು.ಪೀಠಾರೋಹಣ ಮಾಡಿ 33ವರ್ಷಗಳಲ್ಲಿ ನಾಡು-ದೇಶಾದ್ಯಂತ ನಿರಂತರ ಸಂಚಾರಮಾಡಿ ನಿಜಧರ್ಮದ ಅರಿವು ಮೂಡಿಸಲು ಪ್ರಯತ್ನಿಸುತ್ತಿರುವ ದಣಿವರಿಯದ ಧರ್ಮದೊಡೆಯರೆನಿಸಿದ್ದಾರೆಂದರು.
ಬಾಳೆಹೊನ್ನೊರು ಶ್ರೀಪೀಠದ ಪರಿಸರದಲ್ಲಿ ಅದ್ವಿತೀಯ ಅಸಾಧಾರಣ ಅಭಿವೃದ್ಧಿ ಕಾರ್ಯಗಳನ್ನೂ ಕೈಗೊಂಡು ಬರುವ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪರಿಶ್ರಮಿಸಿರುವ ಪೂಜ್ಯರು, 51ಅಡಿ ಎತ್ತರದ ಲಿಂಗೋದ್ಭವ ರೇಣುಕರ ಶಿಲಾವಿಗ್ರಹವನ್ನು ಸಂಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.ಸಂಸ್ಕೃತಿ-ಸoಸ್ಕಾರಗಳನ್ನು ಜನಮಾನಸಕ್ಕೆ ಮೂಡಿಸುವ ನಿಟ್ಟಿನಲ್ಲಿ ಮುಂದಾಗಿರುವ ಪೂಜ್ಯರು, ಧರ್ಮ-ಪರಂಪರೆಗೆ ಧಕ್ಕೆಬಂದಾಗ ಗಟ್ಟಿಧ್ವನಿ ಮೊಳಗಿಸುವ ಸಾಮರ್ಥ್ಯವನ್ನು ಅನೇಕ ಸಂದರ್ಭಗಳಲ್ಲಿ ಸಾಬೀತು ಪಡಿಸಿರುವುದು ಗಣನೀಯ ಎಂದು ನುಡಿದರು.
ಶ್ರೀದೇವಿ ಗುರುಕುಲದ ಸಂಸ್ಥಾಪಕ ವಿದ್ವಾನ್ ಡಾ.ದಯಾನಂದಮೂರ್ತಿಶಾಸ್ತ್ರೀ ಸ್ವಾಗತಿಸಿ ನಿರೂಪಿಸಿದರು.ಪಾರ್ವತಿ ಮಹಿಳಾಮಂಡಳಿಅಧ್ಯಕ್ಷೆ ಸುಮಿತ್ರಾಶಾಸ್ತ್ರೀ ಮತ್ತು ಕಾರ್ಯದರ್ಶಿ ಭವಾನಿ ವಿಜಯಾನಂದ ರೇಣುಕಗೀತೆಗಳನ್ನು ಪ್ರಸ್ತುತ ಪಡಿಸಿದರು. ಮಲೆನಾಡು ಐಸಿರಿ ದೈನಿಕದ ಹಿರಿಯ ವರದಿಗಾರ ಚಂದ್ರೇಗೌಡರನ್ನು ಸಂಸದರು ಗೌರವಿಸಿದರು. ಅಥಣಿಯ ಪುರೋಹಿತ ವೇ.ಮೂ.ಪ್ರವೀಣಶಾಸ್ತ್ರೀ ಪೂಜಾವಿಧಿ ನಿರ್ವಹಿಸಿದರು.
ನಗರಸಭಾ ಮಾಜಿ ಅಧ್ಯಕ್ಷ ದೇವರಾಜಶೆಟ್ಟಿ, ರಂಭಾಪುರಿ ಪೀಠದ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಭುಕಲ್ಮಠ, ಶ್ರೀಜಗದ್ಗುರು ರೇಣುಕಾಚಾರ್ಯ ಶಿಕ್ಷಣಸಂಸ್ಥೆ ಅಧ್ಯಕ್ಷ ಯು.ಎಂ.ಬಸವರಾಜ, ಯುರೇಕಾ ಅಕಾಡೆಮಿ ಸ್ಥಾಪಕ ದೀಪಕ್ ದೊಡ್ಡಯ್ಯ, ಶ್ರೀಸತ್ಯಸಾಯಿ ಸೇವಾ ಸಮಿತಿಗಳ ಜಿಲ್ಲಾಧ್ಯಕ್ಷ ಬಿ.ಪಿ.ಶಿವಮೂರ್ತಿ ಮತ್ತಿತರರ ನೇತೃತ್ವದಲ್ಲಿ ಶ್ರೀಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.
ಪ್ರಸಾದನಿಲಯದಲ್ಲಿ:
ರತ್ನಗಿರಿಬೋರೆ ಸಮೀಪದ ವಿವಿಎಸ್‌ನ ಗೌರಮ್ಮಬಸವೇಗೌಡ ವೀರಶೈವ ವಿದ್ಯಾರ್ಥಿನಿಯರ ಪ್ರಸಾದ ನಿಲಯದಲ್ಲಿ ನಿನ್ನೆ ಸಂಜೆ ರಂಭಾಪುರಿ ಜಗದ್ಗುರುಗಳ ಜನ್ಮದಿನೋತ್ಸವವನ್ನು ಪುಷ್ಪನಮನದೊಂದಿಗೆ ಆಚರಿಸಲಾಯಿತು.
ಆಡಳಿತ ಮಂಡಳಿ ಸದಸ್ಯರಾದ ಯು.ಎಂ.ಬಸರಾಜ್ ಮತ್ತು ಪ್ರಭುಲಿಂಗಶಾಸ್ತ್ರೀ, ಪಟ್ಟಣ ಸಹಕಾರಬ್ಯಾಂಕ್ ಅಧ್ಯಕ್ಷ ಎಚ್.ಎನ್.ನಂಜೇಗೌಡ ಪಾಲ್ಗೊಂಡಿದ್ದರು.
ಜೀವನಸoಧ್ಯಾ :
ಕದ್ರಿಮಿದ್ರಿ ಜೀವನಸಂಧ್ಯಾ ವೃದ್ಧಾಶ್ರಮದಲ್ಲಿ ಸಂಜೆ ವೇ.ಬ್ರ.ಡಾ. ದಯಾನಂದ ಮೂರ್ತಿಶಾಸ್ತ್ರೀಗಳ ನೇತೃತ್ವದಲ್ಲಿ ಆಚಾರ್ಯಗೀತೆಗಳ ಗಾಯನದೊಂದಿಗೆ ಡಾ.ವೀರಸೋಮೇಶ್ವರ ಜಗದ್ಗುರುಗಳ 69ನೆಯ ಜನ್ಮದಿನೋತ್ಸವವನ್ನು ಹಿರಿಯರೊಂದಿಗೆ ಆಚರಿಸಲಾಯಿತು.ಶ್ರೀಪೀಠದ ವತಿಯಿಂದ ಪ್ರಸಾದ ಭೋಜನ ಏರ್ಪಡಿಸಲಾಗಿತ್ತು.ಜಂಗಮ ಬಳಗದ ಸಂಚಾಲಕ ಪ್ರಭುಲಿಂಗಶಾಸ್ತ್ರೀ ಪ್ರಾಸ್ತಾವಿಸಿ ರಂಭಾಪುರಿ ಪ್ರಸ್ತುತ ಜಗದ್ಗುರುಗಳು 2010ರಲ್ಲಿ ಇಲ್ಲಿಗೆ ಆಗಮಿಸಿ ಆಶ್ರಮವಾಸಿಗಳನ್ನು ಆಶೀರ್ವದಿಸಿದ್ದನ್ನು ಉಲ್ಲೇಖಿಸಿ, ಇಲ್ಲಿಯ ಆಗುಹೋಗುಗಳ ಬಗ್ಗೆ ಸದಾ ಕಾಳಜಿಯನ್ನು ವ್ಯಕ್ತಪಡಿಸುತ್ತಾರೆಂದರು.
ಉಪ್ಪಳ್ಳಿ ಬಸವರಾಜ್, ಭವಾನಿ, ಸುಮಿತ್ರಾ, ತಾರಾ ಮತ್ತಿತರರು ಪಾಲ್ಗೊಂಡಿದ್ದರು.ಇದೇ ಸಂದರ್ಭದಲ್ಲಿ ಹಿರಿಯಜೀವಗಳ ಅಂತ್ಯಸoಸ್ಕಾರ ವೆಚ್ಚಕ್ಕಾಗಿ 5,೦೦೦ರೂ.ಗಳನ್ನು ವೇ.ಮೂ.ಪ್ರವೀಣಶಾಸ್ತ್ರೀ ಆಶ್ರಮಕ್ಕೆ ನೀಡಿದರು. ವ್ಯವಸ್ಥಾಪಕ ಹರಿಸಿಂಗ್ ಸ್ವಾಗತಿಸಿ, ವಂದಿಸಿದರು.