ತುಮಕೂರು-ನಗರದ ಮೂರನೇ ವಾರ್ಡ್ ವ್ಯಾಪ್ತಿಗೆ ಒಳಪಡುವ ಶಿರಾಗೇಟ್ 80 ಅಡಿ ರಸ್ತೆಯು ಗುಂಡಿಗಳಿಂದ ಹಾಳಾಗಿದ್ದು, ಮರು ಡಾಂಬರೀಕರಣ ಮಾಡಬೇಕು ಎಂದು ಆಗ್ರಹಿಸಿ ಈ ಭಾಗದ ನಿವಾಸಿಗಳು ಇಂದು ಸಾಮೂಹಿಕವಾಗಿ ಸಿರಾಗೇಟ್ನ ಕನಕ ವೃತ್ತಬಳಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಹಿರಿಯ ನಾಗರಿಕರಾದ ಬಿ.ಸಿ. ಗಂಗಾಧರ್ ಮಾತನಾಡುತ್ತಾ ,ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರು ಬೆಳಿಗ್ಗೆ-ಸಂಜೆ ಓಡಾಡಲು ತೊಂದರೆ ಅನುಭವಿಸುವಂತಾಗಿದೆ. ಸದರಿ ರಸ್ತೆಯಲ್ಲಿ ಎಲ್ಲಾ ಶಾಲಾ-ಕಾಲೇಜುಗಳ ವಾಹನಗಳು ಹೆಚ್ಚಿನದಾಗಿ ಚಲಿಸುತ್ತಿದ್ದು, ಈ ರಸ್ತೆಯು ಹಳ್ಳ-ಗುಂಡಿಗಳಿಂದ ಆವೃತವಾಗಿದ್ದು ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲಾ-ಕಾಲೇಜು ತಲುಪಲು ಸಾಧ್ಯವಾಗುತ್ತಿಲ್ಲ. ಅಪಘಾತಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿವೆ ಎಂದರು.
ಶಿರಾಗೇಟ್ ನಿಂದ ಶನಿಮಹಾತ್ಮ ದೇವಸ್ಥಾನದವರೆಗೂ ರಸ್ತೆ ಡಾಂಬರೀಕರಣ ಮಾಡಬೇಕೆಂದು ಒತ್ತಾಯಿಸಿ ಶಿರಾಗೇಟ್ ನಿಂದ ಜಿಲ್ಲಾಧಿಕಾರಿಗಳ ಕಛೇರಿಗೆ ಮೆರವಣಿಗೆ ಮೂಲಕ ತೆರಳಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.