ಮೂಡಿಗೆರೆ:ಅಂಬೇಡ್ಕರ್ ಪುತ್ಥಳಿ ಪ್ರತಿಷ್ಟಾಪಿಸಿ,ತೆರವುಗೊಳಿಸಿದವರ ವಿರುದ್ಧ ಕ್ರಮಕ್ಕೆ ಬಿಕೆಎಸ್ ಒತ್ತಾಯ-ಪ್ರತಿಮೆಗೆ ಸ್ಥಳ ನಿಗದಿಪಡಿಸಲು 15 ದಿನಗಳ ಗಡುವು

ಮೂಡಿಗೆರೆ:ಮೀಸಲಾತಿ ಕ್ಷೇತ್ರದಲ್ಲಿ ಮೀಸಲಾತಿ ಕೊಟ್ಟ ವ್ಯಕ್ತಿಗೆ,ಅವರ ಜನಾಂಗದವರೇ ಅಪಮಾನ ಮಾಡಿದ್ದು ಬಹುಷಃ ಇಂತಹ ಘಟನೆ ದೇಶದಲ್ಲಿ ಎಲ್ಲಿಯೂ ನಡೆದಿಲ್ಲ ಎಂದು ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಮುಖಂಡರಾದ ಜ್ಯೋತಿ ವಿಠಲ್ ಹೇಳಿದರು.

ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದು ಮೂಡಿಗೆರೆ ಮೀಸಲು ಕ್ಷೇತ್ರವೆಂದು ಹೇಳಿಕೊಳ್ಳಲು ನಾಚಿಕೆಯಾಗುತ್ತದೆ. ಕಳೆದ 4 ದಶಕದಲ್ಲಿ ಇಬ್ಬರು ಮಾಜಿ ಸಚಿವರು, ಓರ್ವ ಮಾಜಿ ಶಾಸಕ ಆಡಳಿತ ನಡೆಸಿದ್ದರೂ ಇದುವರೆಗೂ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಜಾಗ ದೊರಕದಿರುವುದು ದುರಂತ. ಕಳೆದ ಜ.3ರಂದು ಪಟ್ಟಣದಲ್ಲಿ ನಡೆದ ಭೀಮ ಕೋರೆಂಗಾವ್ ಕಾರ್ಯಕ್ರಮದಲ್ಲಿ ಆಯೋಜಕರು ಅನುಮತಿ ಪಡೆಯದೇ ಅಂಬೇಡ್ಕರ್ ಅವರ ಪುತ್ಥಳಿಯನ್ನು ಪ್ರತಿಷ್ಟಾಪಿಸಿ, ಮರುದಿನ ಏಕಾಏಕಿ ತೆರವುಗೊಳಿಸಿ ಸಮುದಾಯದ ನಡುವೆ ವೈಮನಸ್ಸು ಸೃಷ್ಟಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕೋರೆಂಗಾವ್ ವಿಜಯೋತ್ಸವ ಒಂದು ಚರಿತ್ರೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ. ಅದು ಈಗ ರಾಜಕೀಯ ಹಾಗೂ ವಯಕ್ತಿಕ ವಿಚಾರದೆಡೆಯಲ್ಲಿ ಸಾಗುತ್ತಿದೆ. ಹಾಗಾಗಿ ಮೂಡಿಗೆರೆಯಲ್ಲಿ ಭೀಮ ಕೋರೆಂಗಾವ್ ಎರಡು ಬಣಗಳಾಗಲು ಹಾಗೂ ಗಲಭೆ ಸೃಷ್ಟಿಯಾಗಲು ಕಾರಣವಾಗಿದೆ. ಅನುಮತಿ ಪಡೆಯದೇ ಪುತ್ಥಳಿ ಪ್ರತಿಷ್ಠಾಪಿಸಿ ಒಂದು ದಿನ ಕಳೆದರೂ ತೆರವುಗೊಳಿಸದೇ ಇರುವುದು ಪೊಲೀಸ್ ಇಲಾಖೆ ನಿಷ್ಕ್ರೀಯತೆ ತೋರುತ್ತದೆ. ಅಥವಾ ಯಾವುದಾದರೂ ಒತ್ತಡಕ್ಕೆ ಮಣಿದು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆಯೇ ಎಂಬುದರ ಬಗ್ಗೆ ತನಿಖೆಯಾಗಬೇಕು. ಪಟ್ಟಣದ ಹೃದಯ ಭಾಗದಲ್ಲಿ 15 ದಿನದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಿಸಲು ಸ್ಥಳ ಗುರುತು ಮಾಡಬೇಕು. ಇಲ್ಲವಾದರೆ ನಮ್ಮ ಹೋರಾಟ ತೀವ್ರವಾಗುತ್ತದೆ ಎಂದು ಹೇಳಿದರು.

ಈ ವೇಳೆ ವಿಠಲ್ ಜಿ.ಹೊಸಳ್ಳಿ, ಚೇತನ್ ಆರ್ಯ, ಸುರೇಶ್ ಮಗ್ಗಲಮಕ್ಕಿ, ಚಂದ್ರು ದೇವರಮಕ್ಕಿ ಉಪಸ್ಥಿತರಿದ್ದರು.

…….. ವರದಿ: ವಿಜಯಕುಮಾರ್, ಮೂಡಿಗೆರೆ

Leave a Reply

Your email address will not be published. Required fields are marked *

× How can I help you?