ಮೈಸೂರು-ಪ್ರತಿ ಬಾರಿ ಜನವರಿ 26ರಂದು ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯಲ್ಲಿ ನಡೆಯುವ ‘ಗಣರಾಜ್ಯೋತ್ಸವ ಪೆರೆಡ್’ ಕಾರ್ಯಕ್ರಮದಲ್ಲಿ ಈ ಬಾರಿ ಕರ್ನಾಟಕದಿಂದ ಖ್ಯಾತ ಕಲಾನಿರ್ದೇಶಕ ಶಶಿಧರ ಅಡಪ ಅವರ ವಿನ್ಯಾಸದಲ್ಲಿ ನಮ್ಮ ನಾಡಿನ ವಿಶೇಷ ವಾಸ್ತುಶಿಲ್ಪ,ಪ್ರವಾಸಿ ತಾಣವಾದ ಲಕ್ಕುಂಡಿ ದೇವಾಲಯದ ಸ್ತಬ್ಧಚಿತ್ರವು ಪ್ರದರ್ಶನಗೊಳ್ಳಲಿದೆ. ಈ ಸ್ತಬ್ಧಚಿತ್ರದ ಭಾಗವಾಗಿ ಪ್ರದರ್ಶನವನ್ನು ನೀಡಲು ‘ನಟನ’ದ ಕಲಾವಿದರು ಆಯ್ಕೆಯಾಗಿದ್ದು, ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೆಡ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
ದೇಶದ ಅಸ್ಮಿತೆ, ಐಕ್ಯತೆ, ಸಂಸ್ಕೃತಿ, ಸಾರ್ವಭೌಮತೆಯನ್ನು ಎತ್ತಿ ಹಿಡಿಯುವ ಈ ಪ್ರಸಿದ್ಧ ಪೆರೆಡ್ನಲ್ಲಿ ವಿವಿಧ ರಾಜ್ಯದಿಂದ ಬರುವ ಹಲವಾರು ಕಲಾತಂಡಗಳು,ಕಲಾವಿದರ ಜೊತೆಗೆ ಭಾಗಿಯಾಗುವ ಅಪೂರ್ವ ಅವಕಾಶ ನಟನಕ್ಕೆ ಒದಗಿದ್ದು, ಕರ್ನಾಟಕದ ವಿಶೇಷತೆ, ಸಂಸ್ಕೃತಿ, ಕಲೆ, ರಂಗಭೂಮಿಯ ಕoಪನ್ನು ದೆಹಲಿಯಲ್ಲಿ ಪಸರಿಸಲು ತಂಡ ಉತ್ಸುಕತೆಯಿಂದ ದೆಹಲಿಗೆ ಪ್ರಯಾಣ ಬೆಳೆಸಿದೆ.
ಈಗಾಗಲೇ ಸ್ತಬ್ಧಚಿತ್ರದ ತಯಾರಿ ಮತ್ತು ಪ್ರದರ್ಶನದ ತಾಲೀಮು ಪ್ರಾರಂಭವಾಗಲಿದ್ದು ಗಣರಾಜ್ಯೋತ್ಸವದoದು ನೆರೆಯುವ ದೇಶ-ವಿದೇಶದ ವಿಶೇಷ ಅತಿಥಿಗಳು, ದೇಶದ ಪ್ರಧಾನಮಂತ್ರಿ, ರಾಷ್ಟ್ರಪತಿಗಳಾದಿಯಾಗಿ ಸೇರುವ ಎಲ್ಲಾ ಮಹೋದಯರ ಮುಂದೆ ನಟನದ ಕಲಾವಿದರು ಕರ್ನಾಟಕವನ್ನು ಪ್ರತಿನಿಧಿಸಿ ಪ್ರದರ್ಶನವನ್ನು ನೀಡಲಿದ್ದಾರೆ.
——————–ಮಧುಕುಮಾರ್