ಮೂಡಿಗೆರೆ:ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯೆoಬ ದ್ವೀಪವನ್ನು ಹಚ್ಚಿದಾಗ ಜಗತ್ತು ಪ್ರಕಾಶಮಾನವಾಗಿ ಬೆಳಗುತ್ತದೆ. ಅದರಂತೆ ವಿಧ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಿದಾಗ ಅತ್ಯುತ್ತಮವಾದ ಶಿಕ್ಷಣ ಪಡೆದ ಬಳಿಕ ಜೀವನದಲ್ಲಿ ಉನ್ನತ ರೀತಿಯ ಉದ್ಯೋಗ ಪಡೆದುಕೊಳ್ಳಲು ಸಾಧ್ಯವಿದೆ ಎಂದು ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಶೃಂಗೇರಿ ಶಾಖಾ ಮಠದ ಶ್ರೀಗುಣನಾಥ ಸ್ವಾಮೀಜಿ ಹೇಳಿದರು.
ಅವರು ಶನಿವಾರ ಜಾವಳಿಯಲ್ಲಿನ ಬಿಜಿಎಸ್ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು.ಮಕ್ಕಳನ್ನು ಶಾಲೆಗೆ ಕರೆತರಲು ಸರ್ಕಾರ ವಿನೂತನ ಯೋಜನೆಯನ್ನು ರೂಪಿಸಿದೆ.ಶೈಕ್ಷಣಿಕವಾಗಿ ಶೇ.100ರಷ್ಟು ಪ್ರಗತಿ ಸಾಧಿಸಬೇಕೆಂದು ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಮಾರ್ಗದರ್ಶನ ನೀಡುತ್ತಿದೆ. ಸರ್ಕಾರದ ಇಂತಹ ದೃಡ ನಿರ್ಧಾರದಿಂದ ಎಲ್ಲಾ ಕಡೆ ವಿಧ್ಯಾಭ್ಯಾಸ ಹೆಚ್ಚಾಗಿದೆ.
ಹಿಂದೆ ನಗರ ಪ್ರದೇಶದಲ್ಲಿ ಮಾತ್ರ ಉತ್ತಮ ವಿಧ್ಯಾಭ್ಯಾಸ ಪಡೆಯಬಹುದಾಗಿತ್ತು. ಈಗ ಗ್ರಾಮೀಣ ಭಾಗದಲ್ಲೂ ಉತ್ತಮ ಶಿಕ್ಷಣ ಪಡೆಯುವ ಅವಕಾಶವಿದೆ. ಪೋಷಕರು ಮತ್ತು ವಿಧ್ಯಾರ್ಥಿಗಳು ಇಂತಹ ಅನುಕೂಲಗಳನ್ನು ಸದುಪಯೋಗ ಪಡಿಸಿಕೊಂಡಲ್ಲಿ ಎಲ್ಲರೂ ಗುಣಮಟ್ಟದ ಶಿಕ್ಷಣ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಬೆಳ್ತಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ದುಗ್ಗಪ್ಪಗೌಡ ಮಾತನಾಡಿ, ಶಾಲೆಗಳು ಒಂದಕ್ಕೊoದು ಪೈಪೋಟಿ ನೀಡುವ ನಿಟ್ಟಿನಲ್ಲಿ ವಿಧ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಇದರಿಂದಾಗಿ ಶೈಕ್ಷಣಿಕ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿದೆ. ವಿಧ್ಯಾರ್ಥಿಗಳು ಪಾಠಪ್ರವಚನಗಳ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಾದ ಕ್ರೀಡಾಕೂಟ, ಶೈಕ್ಷಣಿಕ ಪ್ರವಾಸ,ಪ್ರತಿಭಾ ಕಾರಂಜಿ, ಶಾಲಾ ವಾರ್ಷಿಕೋತ್ಸವ ಮಕ್ಕಳ ಸಂತೆ ಹೀಗೆ ಶಾಲೆಗಳಲ್ಲಿ ಆಯೋಜಿಸಲಾಗುವ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಅವುಗಳಲ್ಲಿಯೂ ಉತ್ತಮ ಸ್ಥಾನ ಪಡೆದುಕೊಂಡು ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ಅಕ್ಷರದಾಸೋಹ ಸಹಾಯಕ ನಿರ್ಧೇಶಕ ಹೇಮಂತ್ ಚoದ್ರ, ಬಿಜಿಎಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಚೆನ್ನಕೇಶವ ಗೌಡ,ಗ್ರಾ.ಪಂ.ಅಧ್ಯಕ್ಷ ಪ್ರದೀಪ್, ಮುಖ್ಯ ಶಿಕ್ಷಕ ಸುರೇಶ್, ಮುಖಂಡರಾದ ಎಂ.ವಿ.ಜಗದೀಶ್, ಪರೀಕ್ಷಿತ್ ಜಾವಳಿ,ಶಶಿಧರ್, ಮನೋಹರ್, ಶ್ರೀನಾಥ್, ಕೇಶವ ಗೌಡ, ಶಾಲಾ ಶಿಕ್ಷಕರಾದ ಯೋಗೇಶ್, ಗೌರಿಬಾಯಿ,ಸತೀಶ್, ಸಾಗರ್, ಆಶಾ ಕಿರಣ್ ಮತ್ತಿತರರಿದ್ದರು.
……….. ವರದಿ: ವಿಜಯಕುಮಾರ್,ಮೂಡಿಗೆರೆ.