ಮೈಸೂರು:ಕನ್ನಡ ಸಾಹಿತ್ಯದಲ್ಲಿ ಕವಿ ಕುಮಾರವ್ಯಾಸನಿಗೆ ಅಗ್ರಸ್ಥಾನ-ಮತ್ತೆ ಮತ್ತೆ ಓದಿಸಿಕೊಳ್ಳುವ ಕವಿ:ಕೃ.ಪಾ. ಮಂಜುನಾಥ್

ಮೈಸೂರು:ಕನ್ನಡ ಸಾಹಿತ್ಯದಲ್ಲಿ ಕವಿ ಕುಮಾರವ್ಯಾಸನಿಗೆ ಅಗ್ರಸ್ಥಾನವಿದ್ದು ಇಂದಿಗೂ ಪಂಡಿತರಿಗೆ ಮತ್ತು ಪಾಮರರಿಗೆ ಮೆಚ್ಚುಗೆಯಾಗುವ ಕವಿ. ಕುಮಾರವ್ಯಾಸನ ಕಾವ್ಯದ ಸೊಬಗು ಅಡಗಿರುವುದೇ ಮತ್ತೆ ಮತ್ತೆ ಓದಿಸಿಕೊಳ್ಳುವ ಗುಣದಿಂದ. ಈತನ ಕಾವ್ಯದ ಹಿರಿಮೆ ಎಷ್ಟು ಪ್ರಸಿದ್ಧಿಯೋ,ಗಮಕಿಗಳ ಕೊಡುಗೆಯು ಅಷ್ಟೇ ಅಮೂಲ್ಯವಾದದ್ದು ಈ ಹಿನ್ನೆಲೆಯಲ್ಲಿಯೇ ಗಮಕಿಗಳ ಉಸಿರು ಕುಮಾರವ್ಯಾಸ ಎಂಬ ನುಡಿ ಹೆಚ್ಚು ಪ್ರಚಲಿತವೆಂದು ಗಮಕ ವ್ಯಾಖ್ಯಾನಕಾರ ಹಾಗೂ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಕೃ.ಪಾ. ಮಂಜುನಾಥ್ ಅಭಿಪ್ರಾಯಪಟ್ಟರು.

ಮೈಸೂರಿನ ಕುವೆಂಪುನಗರದ ಗಾನಭಾರತೀ ಸಭಾಂಗಣದಲ್ಲಿ ಇಂದು ಕರ್ನಾಟಕ ಗಮಕ ಕಲಾ ಪರಿಷತ್ತು ಮೈಸೂರು ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಕನ್ನಡದ ಪ್ರಸಿದ್ಧ ಕವಿ ಕುಮಾರವ್ಯಾಸ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಗಮಕ ವ್ಯಾಖ್ಯಾನಕಾರರೂ ಮೈಸೂರು ಜಿಲ್ಲಾ ಗಮಕ ಕಲಾ ಪರಿಷತ್ತಿನ ಘಟಕದ ಅಧ್ಯಕ್ಷರೂ ಆಗಿರುವ ಕೃ. ಪಾ. ಮಂಜುನಾಥ್ ಮಾತನಾಡುತ್ತಾ ‘ಕರ್ಣಾಟಕ ಭಾರತ ಕಥಾಮಂಜರಿ’ ಕಾವ್ಯದ ಮೂಲಕ ಜನಮಾನಸದ ಕವಿಯಾಗಿ, ದೇಸಿ ಸೊಬಗನ್ನು ಪಸರಿಸಿದ ಈ ಮಹಾಕವಿಗೆ ಸಾರ್ಥಕ ನಮನ ಸಲ್ಲಿಸುವುದು ಕಾವ್ಯಾಸಕ್ತರ ಮತ್ತು ಗಮಕಿಗಳ ಕರ್ತವ್ಯವಾಗಿದೆ.

ಪ್ರತಿವರ್ಷವೂ ಕುಮಾರವ್ಯಾಸನ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವುದು ನಮ್ಮೆಲ್ಲರ ಜವಾಬ್ದಾರಿ. ಯಾರೇ ಆಚರಿಸಲಿ ಅಥವಾ ಬಿಡಲಿ ಗಮಕಿಗಳ ಪರವಾಗಿ ಕರ್ನಾಟಕ ಗಮಕ ಕಲಾ ಪರಿಷತ್ತು ನಿರಂತರವಾಗಿ ಆಚರಿಸಿಕೊಂಡು ಬಂದಿದೆ. ಅದರಲ್ಲೂ ಮೈಸೂರು ಜಿಲ್ಲಾ ಘಟಕ ಐದಾರು ವರ್ಷಗಳಿಂದ ನಿರಂತರವಾಗಿ ಅಚ್ಚುಕಟ್ಟಾಗಿ ನಡೆಸಿರುವುದು ಹೆಮ್ಮೆಪಡುವ ವಿಚಾರವಾಗಿದೆ ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಗಮಕಿ ಕರ್ನಾಟಕ ಕಲಾಶ್ರೀ ಕೃ. ರಾಮಚಂದ್ರ ಅವರು ನೆರವೇರಿಸಿ ಕೇಂದ್ರ ಪರಿಷತ್ತಿನ ಆಶಯದಂತೆ ಮೈಸೂರು ಜಿಲ್ಲಾ ಘಟಕ ರಾಜ್ಯಾದ್ಯಂತ ಇಂದು ಕುಮಾರವ್ಯಾಸ ಜಯಂತಿಯನ್ನು ಆಚರಿಸುತ್ತಿರುವುದು ಸಂತೋಷದಾಯಕ ವಿಚಾರವಾಗಿದ್ದು ಕುಮಾರವ್ಯಾಸ ನಿತ್ಯವೂ ಆರಾಧಿಸಿಕೊಳ್ಳುವ ಕವಿ ಎಂದರು.

ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಡಾ. ಅನಿಲಕುಮಾರ ಬೊಮ್ಮಾಘಟ್ಟ ಅವರು ನಮ್ಮ ಕೌಟುಂಬಿಕ ವ್ಯವಸ್ಥೆ ಮತ್ತು ನೈತಿಕ ದೃಷ್ಟಿಕೋನಗಳಿಂದ ಹಲವು ಆಯಾಮಗಳಲ್ಲಿ ಕುಮಾರವ್ಯಾಸನ ಓದು ಪ್ರಸ್ತುತ ಅತ್ಯಾವಶ್ಯಕವಾಗಿದ್ದು ಈತ ಎಂದೆಂದಿಗೂ ಜನಮಾನಸದ ಅಪೂರ್ವಕವಿ ಎಂದರು. ಕುಮಾರವ್ಯಾಸನ ಕಾವ್ಯದ ಸೊಬಗು ಮತ್ತು ಒಳ ಸೂಕ್ಷ್ಮತೆಗಳ ಬಗ್ಗೆ ಮಾತನಾಡುತ್ತಾ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ವೇದಿಕೆ ಕಾರ್ಯಕ್ರಮದ ನಂತರ ವಿದುಷಿ ಶುಭ ರಾಘವೇಂದ್ರ ಅವರ ಶಿಷ್ಯರಿಂದ ನಾಂದಿಪದ್ಯಗಳ ವಾಚನ ಮತ್ತು ಗಮಕ ಶಿಕ್ಷಕಿ ಎಂ. ಎಸ್. ಸುಬ್ಬಲಕ್ಷ್ಮಿ ಅವರ ತಂಡದಿಂದ ‘ವಿಶ್ವರೂಪದರ್ಶನ’ ವಾಚನ-ವ್ಯಾಖ್ಯಾನಗಳ ಗಮಕ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿದವು.

ಕಾರ್ಯಕ್ರಮದ ಪ್ರಾರ್ಥನೆಯನ್ನು ವಿದುಷಿ ಧರಿತ್ರಿ ಆನಂದ ರಾವ್ ನೆರವೇರಿಸಿದರೆ, ಸ್ವಾಗತವನ್ನು ಡಾ. ಎ. ನಿರಂಜನ್ ನಿರ್ವಹಿಸಿದರು. ಕಾರ್ಯಕ್ರಮವನ್ನು ಶ್ರೀವತ್ಸ ನಿರೂಪಿಸಿದರು. ಗಮಕಲಾವಿದರು ಮತ್ತು ಕಾವ್ಯಾಸಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕುಮಾರವ್ಯಾಸನ ಕಾವ್ಯದ ಕೆಲವು ಪದ್ಯಗಳನ್ನು ತಾವು ಗುನುಗಿಕೊಂಡದ್ದು ವಿಶೇಷವಾಗಿತ್ತು.

—————-ಮಧುಕುಮಾರ್

Leave a Reply

Your email address will not be published. Required fields are marked *

× How can I help you?