ಬಣಕಲ್-ಪ್ಲಾಂಟರ್ಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ಬಣಕಲ್ ಪೊಲೀಸ್ ಠಾಣೆ ಸಹಯೋಗದಲ್ಲಿ ‘ಕಳ್ಳಮಾಲು ಕೊಳ್ಳಬೇಡಿ’ ಜಾಗೃತಿ ಅಭಿಯಾನ

ಬಣಕಲ್:ಬಣಕಲ್ ದಿ ಪ್ಲಾಂಟರ್ಸ್ ಸ್ಪೋರ್ಟ್ ಕ್ಲಬ್ (ರಿ )ಮತ್ತು ಬಣಕಲ್ ಪೊಲೀಸ್ ಠಾಣೆ ಸಹಯೋಗದಲ್ಲಿ ‘ಕಳ್ಳತನದ ಮಾಲು ಕೊಳ್ಳಬೇಡಿ’ ಎಂಬ ಅರಿವು ಮೂಡಿಸುವ ಕಾರ್ಯಕ್ರಮವನ್ನು ಬಣಕಲ್ ನಲ್ಲಿ ನಡೆಸಲಾಯಿತು.

ಕಾರ್ಯಕ್ರಮ ಸಂಘಟಕರಲ್ಲಿ ಒಬ್ಬರಾಗಿರುವ ಪ್ರವೀಣ್ ಗೌಡ ಮಾತನಾಡಿ,ಕಾಫಿ ಬೆಳೆಗಾರರಿಗೆ ತಾವು ಬೆಳೆದ ಬೆಳೆ ಕಳ್ಳರ ಪಾಲಾಗುತ್ತಿರುವುದು ತಲೆ ನೋವು ತರಿಸಿದ್ದು,ಕಳ್ಳರ ಹಾವಳಿಯಿಂದಾಗಿ ಬೆಳೆ ಉಳಿಸಿಕೊಳ್ಳಲು ಬೆಳೆಗಾರರು ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಈ ಬಾರಿ ಫಸಲು ಚೆನ್ನಾಗಿದ್ದು ಕಾಫಿ ಬೆಲೆ ಕೂಡ ಈ ಹಿಂದೆಂದಿಗಿಂತಲೂ ಅತ್ಯುತ್ತಮವಾಗಿದೆ. ಆದರೆ ಬಂಪರ್ ಬೆಳೆಯ ಜೊತೆಗೆ ಕಾಫಿ ಬೆಳೆಗಾರರಿಗೆ ಹೊಸ ತಲೆನೋವು ಶುರುವಾಗಿದೆ. ಕಾಫಿಯನ್ನು ಕಣದಲ್ಲಿ ಸುಮಾರು 10-12 ದಿನಗಳ ಕಾಲ ಒಣಗಿಸಬೇಕಾಗುತ್ತದೆ. ಸಾಮಾನ್ಯವಾಗಿ ಕಾಫಿ ಒಣಗಿಸುವ ಕಣ ಮತ್ತು ಮಾಲೀಕನ ಮನೆ ದೂರವೇ ಇರುತ್ತದೆ. ಕಣದ ಕೊರತೆ ಇರುವವರು ಗದ್ದೆಯಲ್ಲೇ ಕಾಫಿ ಒಣಗಿಸುತ್ತಾರೆ, ಇದು ಕಳ್ಳರಿಗೆ ಕಳ್ಳತನ ಮಾಡಲು ಸುಲಭವಾಗಿದೆ.

ಕಳ್ಳರು ಕದ್ದು ತರುವ ಮಾಲನ್ನು ಯಾರು ಕೊಳ್ಳಲು ಮುಂದೆ ಬಾರದೆ ಇದ್ದಾಗ ಈ ಸಮಸ್ಯೆಯನ್ನು ಬಹುತೇಕ ಮಟ್ಟಹಾಕಬಹುದಾಗಿದ್ದು ಈ ನಿಟ್ಟಿನಲ್ಲಿ ವ್ಯಾಪಾರಿಗಳಲ್ಲಿ ಜಾಗೃತಿ ಮೂಡಿಸಲು ಇಂದು ಮೆರವಣಿಗೆ ಹಮ್ಮಿಕೊಂಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಬಣಕಲ್ ಠಾಣಾ ಪಿ.ಎಸ್.ಐ ರೇಣುಕಾ ರವರು, ಕೆಲವರು ಈ ಕಳ್ಳತನ ಮಾಡಲೆಂದೇ ರಾತ್ರೋರಾತ್ರಿ ತೋಟಗಳಿಗೆ ನುಗ್ಗುತ್ತಿದ್ದಾರೆ. ಹಸಿ ಕಾಫಿಯನ್ನೇ ಕಳವು ಮಾಡಲಾಗುತ್ತಿದೆ. ಅಲ್ಲದೆ ಬೆಳೆಗಾರರು ಒಣಗಿಸಿಟ್ಟ ಕಾಫಿಯನ್ನು ಕಣಕ್ಕೆ ತೆರಳಿ ಕಣದಿಂದಲೇ ಕದಿಯುವ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ.ಕಾಫಿ ಒಣಗಿಸುವ ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಅಳವಡಿಸಿಕೊಳ್ಳಬೇಕು,ಜೊತೆಗೆ ಕಾಫಿ ಕೊಳ್ಳುವವವರು ಇದರ ಬಗ್ಗೆ ಗಮನ ಹರಿಸಬೇಕು.ಅಪರಿಚಿತರು ಮಾಲು ಮಾರಲು ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ಕೊಡಬೇಕು ಎಂದು ಮನವಿ ಮಾಡಿದರು.

ಮೆರವಣಿಗೆ ದಿ ಪ್ಲಾಂಟರ್ಸ್ ಸ್ಪೋರ್ಟ್ ಕ್ಲಬ್ ಬಣಕಲ್ ಅವರಣದಿಂದ ಪ್ರಾರಂಭಗೊಂಡು ಮತ್ತಿಕಟ್ಟೆ ರಸ್ತೆ ಹಾಗೂ ಕೆ ಎಂ ರಸ್ತೆ ಮೂಲಕ ಸಾಗಿ ಪೆಟ್ರೋಲ್ ಬಂಕ್ ಬಳಿ ಕೊನೆಗೊಂಡಿತು.

ಜಾಗೃತಿ ಅಭಿಯಾನ ಮೆರವಣಿಗೆಯಲ್ಲಿ ಬಣಕಲ್ ಬಾಳೂರು ಮತ್ತಿಕೆಟ್ಟೆ ಸುತ್ತಮುತ್ತಲ ಪ್ರದೇಶಗಳ ಕಾಫಿ ಬೆಳಗಾರರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

——ವರದಿ-ಸೂರಿ ಬಣಕಲ್

Leave a Reply

Your email address will not be published. Required fields are marked *

× How can I help you?