ಚಿಕ್ಕಮಗಳೂರು-ಬಡವರ ಮನಸ್ಸು ಖುಷಿಯಾದರೆ ನೂರು ಚಂಡಿಕಯಾಗ ಮಾಡಿದ ಫಲ ಸಿಗುತ್ತದೆ ಎಂದು ಗೌರಿಗದ್ದೆ ಶ್ರೀಕ್ಷೇತ್ರದ ಅವಧೂತ ಶ್ರೀವಿನಯ ಗುರೂಜೀ ಅಭಿಪ್ರಾಯಿಸಿದರು.
ಶಿರವಾಸೆ ವಿವೇಕಾನಂದ ವಿದ್ಯಾಸಂಸ್ಥೆ 50ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಆಯೋಜಿಸಿರುವ ಎರಡು ದಿನಗಳ ಸುವರ್ಣಮಹೋತ್ಸವ ಸಮಾರಂಭದಲ್ಲಿ ಇಂದು ಗುರುಶಿಷ್ಯರ ಸಮಾಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ತಿರುಗಾಟ, ವೇಷಭೂಷಣ, ಇಂಟರ್‌ನೆಟ್, ಮೊಬೈಲ್ ಸೇರಿದಂತೆ ನಾವು ಅನಗತ್ಯವಾಗಿ ನಿತ್ಯ ಮಾಡುವ ವೆಚ್ಚವನ್ನು ನಿಯಂತ್ರಿಸಿ ಅದೇ ಹಣವನ್ನು ಶಾಲೆ,ದೇವಸ್ಥಾನ,ಬಡವರ ಮನೆ ನಿರ್ಮಾಣಕ್ಕೆ ನೀಡಿದರೆ ಹೆಚ್ಚು ಉಪಯೋಗವಾಗುತ್ತದೆ. ಇದೇ ನಿಜವಾದ ದೇವರಸೇವೆ. ಸನಾತನ ಧರ್ಮತತ್ವವು ಪರೋಪಕಾರವನ್ನೆ ಪ್ರತಿಪಾದಿಸುತ್ತದೆ ಎಂದರು.
ನಮ್ಮ ದೇಹ ಬೆಳೆದರೂ ಅದೇ ಪ್ರಮಾಣದಲ್ಲಿ ಬುದ್ಧಿ ಬೆಳೆದಿಲ್ಲ.ದೇಶದೆಲ್ಲೆಡೆ ಬಹುತೇಕ ಎಲ್ಲ ಮಹಾಪುರುಷರ ಹೆಸರಿನಲ್ಲಿ ಬಾರ್‌ಗಳಿವೆ.ಆದರೆ ಇಬ್ಬರ ಹೆಸರಿನಲ್ಲಿ ಮಾತ್ರ ಬಾರ್ ತೆರೆದಿಲ್ಲ.ಅವೆಂದರೆ ಒಂದು ಮಹಾತ್ಮಾಗಾoಧಿ, ಇನ್ನೊಂದು ಸ್ವಾಮಿವಿವೇಕಾನಂದ. ಏಕೆಂದರೆ ಈ ಹೆಸರುಗಳಿಗೆ ಪಾವಿತ್ರ್ಯ ಇದೆ ಎಂದರು.
ಅಹoಕಾರ ಮತ್ತು ಅಜ್ಞಾನ ಮನುಷ್ಯರಲ್ಲಿ ಒಟ್ಟಿಗೆ ಇರುತ್ತದೆ.ಇವನ್ನು ಬದಿಗಿರಿಸಿ ಸೇವಾ ಮನೋಭಾವ ಬೆಳೆಸಿ ಕೊಳ್ಳಬೇಕು.ಆಗ ಮನೆ,ಹಳ್ಳಿ,ದೇಶಕ್ಕೆ ಕೊಡುಗೆ ಕೊಡಲು ಸಾಧ್ಯ. ತಂದೆ-ತಾಯಿಯರು ವಿಶ್ವ ವಿದ್ಯಾನಿಲಯವಿದ್ದoತೆ. ಇವರಿಂದ ಸಂಸ್ಕಾರ ಕಲಿತು ಬೆಳೆದರೆ ಬೆಳಕಾಗಬಹುದು. ತಂದೆ ಕೆಟ್ಟರೆ ಮನೆ ಹಾಳು. ತಾಯಿ ಕೆಟ್ಟರೆ ಕುಲ ಹಾಳಾಗುತ್ತದೆ ಎಂಬ ಮಾತಿದೆ. ಹಬ್ಬ-ಹರಿದಿನಗಳು ಸುತ್ತಲಿನ ದ್ವೇಷ ಮರೆಯಲು ಹಿಂದಿನವರು ಮಾಡಿಕೊಟ್ಟ ಆಚರಣೆ. ನನ್ನೂರು, ಶಾಲೆ,ದೇವಸ್ಥಾನ, ಸುಗ್ಗಿಹಬ್ಬ, ಮಾರಿಹರಕೆ,ಇವೆಲ್ಲವೂ ಜನರನ್ನು ಬೆಸೆಯುವ ಸಾಧನಗಳೆಂಬುದನ್ನು ಅರಿಯಬೇಕು. ಶಾಲೆಯ ಸುವರ್ಣಮಹೋತ್ಸವ ಊರಹಬ್ಬವಾಗಿರುವುದು ಸಂತಸದ ಸಂಗತಿ ಎoದರು.
ಹಳ್ಳಿಗಳು ಸಂಸ್ಕೃತಿಯನ್ನು ಕಳೆದುಕೊಳ್ಳಬಾರದು. ಇಲ್ಲಿಯ ಯುವಕ ಯುವತಿಯರು ಪ್ರಕೃತಿ-ಸಂಸ್ಕೃತಿ ಎರಡನ್ನೂ ಕಾಪಾಡಲು ಸಂಕಲ್ಪಿ ಸಬೇಕು. ಬ್ಯುಸಿನೆಸ್ ಮೀಟ್‌ನಂತಹ ಯೋಜನೆಗಳು ಇಲ್ಲಿ ನಡೆಸಿದರೆ ಹಳ್ಳಿಯ ಪ್ರತಿಭಾನ್ವಿತರಿಗೆ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಈ ಸವಿನೆನಪಿಗಾಗಿ ಸಭಾಭವನ ನಿರ್ಮಿಸುವುದಾದರೆ ಲಕ್ಷ ರೂ. ತಮ್ಮ ಟ್ರಸ್ಟ್ನಿಂದ ನೀಡುವುದಾಗಿ ನುಡಿದ ವಿನಯ ಗುರೂಜೀ,ಶಿಕ್ಷಣಸಂಸ್ಥೆಯ ರೂವಾರಿ ಮುಳ್ಳೇಗೌಡರದು ಆದರ್ಶ ಬದುಕು ಎಂದರು.ನನ್ನಲ್ಲಿ ಬೆಳಕಿದೆ,ನಿಮ್ಮೆಲ್ಲರಲ್ಲೂ ಬೆಳಕಿದೆ ಇದನ್ನು ಅರ್ಥಮಾಡಿಕೊಳ್ಳಬೇಕು.ಲಕ್ಷ್ಯ ಇಟ್ಟು ಬದುಕಿದರೆ ವಿವೇಕಾನಂದರಾಗುತ್ತೇವೆ ಎಂದ ವಿನಯ ಗುರೂಜೀ,ಇಂದು ಅವರ ಹುಟ್ಟಿದ ದಿನ.ಅವರ ಹೆಸರಿನಲ್ಲೆ ಕಟ್ಟಿದ ವಿದ್ಯಾಸಂಸ್ಥೆ ಸುವರ್ಣಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಯೋಗಾಯೋಗ ಎಂದರು.
ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹಿರಿಯ ಶಿಕ್ಷಕರುಗಳನ್ನು ಸನ್ಮಾನಿಸಿ ಮಾತನಾಡಿ ದಾನಗಳಲ್ಲೆ ವಿದ್ಯಾದಾನ ಶ್ರೇಷ್ಠ. ವಿದ್ಯೆಯಿಂದ ನಮ್ಮ ಬದುಕಿನ ಸ್ಥರವನ್ನು ಎತ್ತರಿಸಿಕೊಳ್ಳಬಹುದು.ಗುಡ್ಡಗಾಡು ಗ್ರಾಮೀಣ ಪ್ರದೇಶದ ನೂರಾರು ಹುಡುಗರು ಉತ್ತಮವಾಗಿ ಬದುಕು ಕಟ್ಟಿಕೊಳ್ಳಲು ಈ ಶಾಲೆ ಸಹಕಾರಿಯಾಗಿದೆ. ಮುಳ್ಳೇಗೌಡರು ಹಾಗೂ ಅವರ ಸ್ನೇಹಿತರ ಮುಂದಾಲೋಚನೆಯಿoದ ಶಿಕ್ಷಣಸಂಸ್ಥೆ ನಿರ್ಮಾಣಗೊoಡು ಸುವರ್ಣ ಮಹೋತ್ಸವ ಸಂಭ್ರಮಿಸುತ್ತಿರುವುದು ಹರ್ಷದಾಯಕ. ಇದರ ಸವಿನೆನಪಿಗೆ ಯಾವುದಾರೂ ಶಾಶ್ವತಕಾರ್ಯ ಆಗಬೇಕು. ತಾವೂ ಎಲ್ಲ ರೀತಿಯಿಂದಲೂ ಸಹಕಾರ ನೀಡುವುದಾಗಿ ರವಿ ನುಡಿದರು.
ಜಗತ್ತು ಕಂಡ ಶ್ರೇಷ್ಠ ಜ್ಞಾನಿ ವಿವೇಕಾನಂದರು, ಬದುಕಿದ್ದು ಕಡಿಮೆ. ಆದರೆ ಸಾಧಿಸಿದ್ದು ಅದ್ವಿತೀಯ. ಚಿಕಾಗೋ ನಗರದ ವಿಶ್ವಧರ್ಮ ಸಮ್ಮೇಳನದಲ್ಲಿ ಕೇವಲ ನಾಲ್ಕೂವರೆ ನಿಮಿಷದ ಮಾತು ಇಡೀ ಜಗತ್ತನ್ನು ಅವರತ್ತ ಸೆಳೆಯಿತು. ಅವರಿಂದ ಪ್ರೇರಣೆ ಪಡೆದ ಸಾವಿರಾರು-ಲಕ್ಷಾಂತರ ಜನ ಬಾಳು ಹಸನು ಮಾಡಿಕೊಂಡರು.ಜೆ.ಆರ್.ಡಿ.ಟಾಟಾ 1905ರಲ್ಲಿ ಇಂಡಿಯನ್ ಇನ್ಸಿಟ್ಯೂಟ್ ಸೈನ್ಸ್ ಪ್ರಾರಂಭಿಸಿದ್ದು ವಿವೇಕಾನoದರ ಸಲಹೆಯಂತೆ. ಇಲ್ಲೂ ಈ ಶಿಕ್ಷಣಸಂಸ್ಥೆಗೆ ಅವರೇ ಪ್ರೇರಣೆ ಎಂದ ಸಿ.ಟಿ.ರವಿ, ಕೊಟ್ಟಿದ್ದು ಎಂದೂ ಕೆಡುವುದಿಲ್ಲ ಎಂಬುದನ್ನು ಅರಿಯಬೇಕು. ಪಾಪ-ಪುಣ್ಯದ ವ್ಯತ್ಯಾಸ ಅರ್ಥಮಾಡಿಕೊಂಡು ಬದುಕಬೇಕೆoದರು.
ಸಿರಿಕಾಫಿ ರೆಸಾರ್ಟ್ ಮಾಲೀಕರಾದ ಸ.ನಾ.ರಮೇಶ್ ಸಾಧಕರನ್ನು ಗೌರವಿಸಿ ಮಾತನಾಡಿ, ಭಾರತದ ಚೈತನ್ಯ ಶಕ್ತಿ ವಿವೇಕಾನಂದ ಎಂದು ಸ್ವರಚಿತ ಕವನ ವಾಚಿಸಿದರು.
ಶಿವಮೊಗ್ಗ ಸೂಡ ಮಾಜಿ ಅಧ್ಯಕ್ಷ ಜ್ಯೋತಿಪ್ರಕಾಶ್,ವಿಶ್ರಾಂತ ಮುಖ್ಯ ಶಿಕ್ಷಕರುಗಳಾದ ಮಾಯಿಲಪ್ಪ, ರಾಮಪ್ಪ ಮತ್ತು ಎನ್.ಎಂ.ಅನುಸೂಯ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಾಧಕರುಗಳಾದ ಡಾ.ಎಚ್.ಎನ್.ಅಶೋಕ, ಡಾ.ಮಧುಸೂದನ್,ಬಾಲ ಮುರುಳಿಕೃಷ್ಣ, ಕೊಳಗಾಮೆ ಕಾಂತರಾಜ್, ಹಡ್ಲುಗದ್ದೆ ಶಿವಕುಮಾರ, ಸಾವಯವ ಕೃಷಿಕ ಉಮೇಶ್‌ರನ್ನು ಸನ್ಮಾನಿಸಲಾಯಿತು.
ವಿದ್ಯಾಸಂಸ್ಥೆ ಉಪಾಧ್ಯಕ್ಷ ಎನ್.ಶ್ರೀಕಾಂತಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಹಿರಿಯರಿಂದ ನಿರ್ಮಾಣಗೊಂಡಿರುವ ವಿದ್ಯಾಸಂಸ್ಥೆ ಅವರು ಹಾಕಿಕೊಟ್ಟ ಹಾದಿಯಲ್ಲೆ ಮುನ್ನಡೆಯುತ್ತಿದೆ.ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿತು, ಬದುಕು ಕಟ್ಟಿಕೊಂಡು ಶಾಲೆಗೆ ನೆರವಾಗುತ್ತಿರುವುದು ಸಂತಸದ ಸಂಗತಿ ಎಂದರು.
ಶಾಲಾಮುಖ್ಯ ಶಿಕ್ಷಕ ಸಾಬಣ್ಣಮಾದರ್ ಸ್ವಾಗತಿಸಿ, ವಾಸುಪೂಜಾರಿ ಮತ್ತು ರಾಜೇಶ್ ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಬಿ.ನೀ.ವಿಶ್ವನಾಥ್ ವಂದಿಸಿದರು.
ಶಾಲೆಯಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸಿರುವ ರವಿಕುಮಾರ್, ತುಂಗಾಭದ್ರ,ಸುಬ್ಬಲಕ್ಷ್ಮಿ ಸೇರಿದಂತೆ 22ಶಿಕ್ಷಕರು ಹಾಗೂ ಸಿಬ್ಬಂದಿಗಳನ್ನು ಇದೇ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷ ಭೋಜೇಗೌಡ, ಕಾರ್ಯ ದರ್ಶಿ ದೇವಣ್ಣಗೌಡ, ನಿರ್ದೇಶಕ ಶಿವಶಂಕರ್, ಕಲಾ ಪ್ರಸನ್ನಕುಮಾರ್ ಸನ್ಮಾನಿಸಿದರು.