ರಾಮನಾಥಪುರ-ಮನುಷ್ಯನಲ್ಲಿ ಧಾರ್ಮಿಕ ಚಿಂತನೆ ಇದ್ದಲ್ಲಿ ಮಾನಸಿಕ ನೆಮ್ಮದಿ ಸಿಗುತ್ತದೆ.ಧಾರ್ಮಿಕ ಚಿಂತನೆಗಳ ಮೂಲಕ ಊರು ಕೇರಿಗಳು ಅಭಿವೃದ್ಧಿ ಹೊಂದುತ್ತವೆ.ಅದಕ್ಕೆ ಪೂರಕವಾದ ವಾತಾವರಣ ದೇವಾಲಯಗಳಲ್ಲಿ ದೊರೆಯುತ್ತದೆ ಎಂದು ಶ್ರೀ ರಾಮೇಶ್ವರ ದೇವಾಲಯದ ಮುಖ್ಯ ಅರ್ಚಕರಾದ ಶ್ರೀನಿವಾಸಯ್ಯ ತಿಳಿಸಿದರು.
ದೇವಾಲಯದಲ್ಲಿ ನಡೆದ ಸಂಕ್ರಾಂತಿ ಪ್ರಯುಕ್ತದ ವಿಶೇಷ ಪೂಜೆಯನ್ನು ನೆರವೇರಿಸಿ ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹಿಂದೂ ಧರ್ಮ ಇಂದು ನಿಜವಾದ ಅಪಾಯವನ್ನು ಎದುರಿಸುತ್ತಿದ್ದು,ನಾವುಗಳು ಬರೀಯ ನಮ್ಮಗಳ ಏಳ್ಗೆಯ ಬಗ್ಗೆಯಷ್ಟೇ ಚಿಂತಿಸುತ್ತಿದ್ದು ಧರ್ಮ ಉಳಿದರಷ್ಟೇ ನಮ್ಮ ಉಳಿವು ಎಂಬುದನ್ನು ಮರೆತಿದ್ದೇವೆ.ಯುವ ಸಮುದಾಯಕ್ಕೆ ಧರ್ಮ ಶಿಕ್ಷಣ ನೀಡುವುದನ್ನು ಮರೆತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ನಮ್ಮ ಸಂಸ್ಕೃತಿ,ಪರಂಪರೆಗಳನ್ನು ಯುವ ಸಮುದಾಯಕ್ಕೆ ಪರಿಚಯಿಸಿಕೊಡುವ ಕೆಲಸವನ್ನು ಮನೆಗಳಲ್ಲಿಯೇ ಪ್ರಾರಂಭಿಸಬೇಕು.ವಾರಕ್ಕೆ ಒಮ್ಮೆಯಾದರೂ ಮಕ್ಕಳನ್ನು ದೇವಾಲಯಗಳಿಗೆ ಕರೆತರುವ ಸತ್ ಸಂಪ್ರದಾಯವನ್ನು ಪೋಷಕರು ಬೆಳೆಸಿಕೊಳ್ಳಬೇಕು.ಜೊತೆಗೆ ಹಿಂದೂ ಧಾರ್ಮಿಕ ಗ್ರಂಥಗಳನ್ನು ಮಕ್ಕಳಿಗೆ ಓದಿ ಹೇಳುವ ಕೆಲಸವನ್ನು ಮಾಡುವಂತೆ ಅವರು ಕರೆ ನೀಡಿದರು.
ಸಂಕ್ರಾಂತಿ ಮಂಟಪದಲ್ಲಿ ಶ್ರೀ ರಾಮೇಶ್ವರಸ್ವಾಮಿ,ಶ್ರೀ ಸುಬ್ರಹ್ಮಣ್ಯಸ್ವಾಮಿ,ಅಘಸ್ತ್ಯೇಶ್ವರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ,ಪೂಜಾ ಕೈಂಕರ್ಯ ನೆರವೇರಿಸಿದ ನಂತರ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಭಕ್ತಗಣ,ಮುಖಂಡರುಗಳು ಹಾಜರಿದ್ದರು.
———————–-ಶಶಿಕುಮಾರ್ ಕೆಲ್ಲೂರು