ಕೊರಟಗೆರೆ-ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಒತ್ತಡದ ಬದುಕಿನಲ್ಲಿ ಬದುಕುತ್ತಿದ್ದು ಕೇವಲ ಹಣ ಸಂಪಾದನೆಗಷ್ಟೇ ಮಹತ್ವ ನೀಡುತ್ತಿದ್ದು ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುತ್ತಿಲ್ಲ.ಶಿಕ್ಷಣದೊಂದಿಗೆ ಮಕ್ಕಳ ಪ್ರತಿಭೆಗೂ ಹೆಚ್ಚು ಒತ್ತು ನೀಡುವ ಮೂಲಕ ಮಕ್ಕಳನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ತರುವ ಪ್ರಯತ್ನ ಮಾಡಬೇಕು ಎಂದು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ಕೊರಟಗೆರೆ ಪಟ್ಟಣದ ಎಂ.ಜಿ ಪ್ಯಾಲೇಸ್ ನಲ್ಲಿ ಕನ್ನಿಕಾ ವಿದ್ಯಾಪೀಠ ಶಾಲೆಯ ಸಂಭ್ರಮ 24-25 ರ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಮುಂದಿನ ಭವಿಷ್ಯಕ್ಕೆ ಉತ್ತಮ ಹಣ ಸಂಪಾದನೆ ಮಾಡಬೇಕು ಎನ್ನುವ ಹಿನ್ನೆಲೆಯಲ್ಲಿ ಪೋಷಕರಿಬ್ಬರೂ ಸಂಪಾದನೆಗೆ ತೆರಳುತ್ತಿದ್ದು ಮಕ್ಕಳ ಬಾಲ್ಯ ಮತ್ತು ವಿದ್ಯಾಭ್ಯಾಸದ ಕಡೆ ಆದ್ಯತೆಯನ್ನು ನೀಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.ಪೋಷಕರು ಜಾಗೃತರಾ ಗಬೇಕು,ಮಕ್ಕಳಿಗೆ ಉತ್ತಮ ರೀತಿಯಾದ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸುವಂತಹ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ ಎಂದು ತಿಳಿಸಿದರು.
ವಿಶೇಷ ಆಹ್ವಾನಿತರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಧಾನಪರಿಷತ್ ಸದಸ್ಯ ಟಿ.ಎ ಶರವಣ ಮಾತನಾಡಿ, ಮಕ್ಕಳಿಗೆ ಇಂದು ಮೊಬೈಲ್ ಎನ್ನುವ ಮಾಯಾಜಾಲದ ಯಂತ್ರವು ಸಿಕ್ಕಿದ್ದು ಇದರಿಂದ ಇಡೀ ವಿಶ್ವವನ್ನು ನೋಡುತ್ತಿದ್ದು,ಇದರಲ್ಲಿ ಒಳಿತು ಮತ್ತು ಕೆಡಕುಗಳೆರಡೂ ಇರುವು ದರಿಂದ ಪೋಷಕರು ಮಕ್ಕಳಿಗೆ ಮೊಬೈಲ್ ಕೊಡುವ ಮೊದಲು ಜಾಗೃತಿಯನ್ನು ವಹಿಸಬೇಕು ಎಂದರು.
ಪೋಷಕರು ಮಕ್ಕಳಿಗೆ ಆಸ್ತಿಯನ್ನು ಮಾಡಬೇಕು ಎನ್ನುವ ಕಲ್ಪನೆಯನ್ನು ಬಿಟ್ಟು ಸಮಾಜಕ್ಕೆ ಮಕ್ಕಳನ್ನು ಆಸ್ತಿಯನ್ನಾಗಿ ಮಾಡುವ ಮೂಲಕ ಭವಿಷ್ಯದ ಪ್ರಜೆಗಳನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.
ಬಹುತೇಕ ಮಕ್ಕಳು ಇಂದು ಒತ್ತಡದಲ್ಲಿ ಬದುಕುತ್ತಿದ್ದು ಇದಕ್ಕೆ ಮುಖ್ಯ ಕಾರಣ ನಮ್ಮ ಪ್ರಚಲಿತ ಸಮಾಜ,ಶಿಕ್ಷಣ ಪದ್ಧತಿ ಜೊತೆಗೆ, ತಂತ್ರಜ್ಞಾನದಿಂದ ಮಕ್ಕಳಿಗೆ ಸಿಗುತ್ತಿರುವ ಟಿವಿ,ಮೊಬೈಲ್,ವಿಡಿಯೋ ಗೇಮ್ ಗಳು ಕಾರಣವಾಗಿದ್ದು ಇದರಿಂದ ಮಕ್ಕಳನ್ನು ರಕ್ಷಿಸುವ ಅನಿವಾರ್ಯತೆ ನಮ್ಮೆಲ್ಲರ ಮೇಲಿದೆ ಎಂದು ಖ್ಯಾತ ಹಿರಿಯ ಮಕ್ಕಳ ತಜ್ಞ ಡಾ.ಎಂ.ಎಸ್ ಪ್ರಕಾಶ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಗೆ ಕೀರ್ತಿ ತಂದ ಹಿರಿಯ ವಿದ್ಯಾರ್ಥಿ ಡಾ.ಪ್ರೇಮ್ ಕುಮಾರ್ ಅವರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಕನ್ನಿಕಾ ವಿದ್ಯಾಪೀಠ ಶಾಲೆಯ ಅಧ್ಯಕ್ಷ ಎಂ.ಜಿ ಸುಧೀರ್,ಉಪಾಧ್ಯಕ್ಷ ಕೆ.ಎಸ್ ಶ್ರೀನಿವಾಸ್,ಕಾರ್ಯದರ್ಶಿ ಕೆ ಎಸ್ ವಿ ರಘು,ಖಜಾಂಚಿ ಕೆಎಸ್ ರಾಧಾಕೃಷ್ಣ,ಸಹಕಾರದರ್ಶಿ ಲಕ್ಷ್ಮಿ ಪ್ರಸಾದ್, ಚಿನ್ನ ವೆಂಕಟ ಶೆಟ್ಟಿ,ಕೆ.ವಿ ಸತೀಶ್ ಪ್ರತಿಭಾ ಪುರಸ್ಕಾರದ ದಾನಿಗಳಾದ ಸೌಮ್ಯ ಮತ್ತು ಹೆಚ್.ಸಿ ನಾಗೇಂದ್ರ ಬಾಬು, ಕೆ.ಎನ್ ಸುಭಾಷಿಣಿ ಮತ್ತು ಕೆ.ಕೆ ನವೀನ್ ಕುಮಾರ್,ಆರ್ಯ ವೈಶ್ಯ ಮಂಡಳ ಅಧ್ಯಕ್ಷ ಕೃಷ್ಣಯ್ಯ ಶೆಟ್ಟಿ,ಕನ್ನಿಕಾ ಔದಾರ್ಯ ಸಂಸ್ಥೆ ಹೆಚ್.ಎಸ್ ಬದರಿನಾಥ್, ವಾಸವಿ ಯುವಜನ ಸಂಘದ ಅಧ್ಯಕ್ಷ ಹೆಚ್.ಎನ್ ದಿನೇಶ್ ,ವಾಸವಿ ಮಾತೃ ಮಂಡಳಿಯ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಗುಂಡಯ್ಯ ಶೆಟ್ಟಿ ,ಮುಖ್ಯ ಶಿಕ್ಷಕ ರಾಘವೇಂದ್ರ ಡಿ.ಎಂ ಸೇರಿದಂತೆ ಶಾಲೆಯ ಶಿಕ್ಷಕರು,ಪೋಷಕರು ಮತ್ತು ಮಕ್ಕಳು ಇದ್ದರು.
——————ಶ್ರೀನಿವಾಸ್ ಕೊರಟಗೆರೆ