
ಕೆ.ಆರ್.ಪೇಟೆ-ತಾಲೂಕಿನ ಬೂಕನಕೆರೆ ಹೋಬಳಿಯ ಕೂಡಲಕುಪ್ಪೆ ಗ್ರಾಮದ ದಯನೀಯ ಪರಿಸ್ಥಿತಿಯನ್ನು ಕಂಡ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ್ ಸಿಇಓ ಶೇಕ್ ತನ್ವಿರ್ ಆಸೀಫ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ತಕ್ಷಣವೇ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಸಿ ಕೊಡುವಂತೆ ಮನವಿ ಮಾಡಿದರು.
ಗಬ್ಬೆದ್ದು ನಾರುತ್ತಿರುವ ಚರಂಡಿ, ಸ್ವಂತ ಕಟ್ಟಡವಿಲ್ಲದ ಅಂಗನವಾಡಿ, ಗ್ರಾಮಕ್ಕೆ ಬಾರದ ಸಾರಿಗೆ ಬಸ್ಸು, ಗ್ರಾಮಕ್ಕೆ ಹೋಗಿ ಬರಲು ರಸ್ತೆ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳಿಲ್ಲದೇ ಬಳಲುತ್ತಿರುವ ಕೂಡಲಕುಪ್ಪೆ ಗ್ರಾಮದ ಜನರ ಧಾರುಣ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಬೇಸರ ವ್ಯಕ್ತಪಡಿಸಿದರು.
ಗ್ರಾಮಕ್ಕೆ ಆಗಮಿಸಿದ ಡಾ.ನಾಗಲಕ್ಷ್ಮಿ ಅವರಿಗೆ ಆರತಿ ಎತ್ತಿ ಹೃದಯಸ್ಪರ್ಷಿಯಾಗಿ ಸ್ವಾಗತಿಸಿದ ಗ್ರಾಮದ ಮಹಿಳೆಯರು ಹಾಗೂ ಯುವತಿಯರು ಭಾಗ್ಯ ಲಕ್ಷ್ಮವ್ವ ನಮ್ಮ ಗ್ರಾಮಕ್ಕೆ ಬರಲು ಸುಸಜ್ಜಿತವಾದ ರಸ್ತೆಯೇ ಇಲ್ಲಾ, ನಮ್ಮೂರಿಗೆ ಹೆಣ್ಣು ತೆಗೆದುಕೊಂಡು ಹೋಗಲು ಗಂಡಿನ ಕಡೆಯವರು ಬರುತ್ತಿಲ್ಲ.ಡೆಂಗ್ಯೂ, ಚಿಕುನ್ ಗುನ್ಯಾದಂತಹ ಖಾಯಿಲೆಗಳು ನಮ್ಮ ಗ್ರಾಮದ ಮಕ್ಕಳನ್ನು ಕಾಡುತ್ತಿವೆ.ನೀವು ಭಾಗ್ಯ ದೇವತೆಯಂತೆ ನಮ್ಮೂರಿಗೆ ಬಂದಿದ್ದೀರಿ. ನಮ್ಮೂರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಸಿಕೊಡಿ ನಿಮ್ಮ ಕಾಲಿಗೆ ಬೀಳುತ್ತೇವೆ ಎಂದು ಅವಲತ್ತುಕೊಂಡರು.

ನಮ್ಮ ಕೂಡಲಕುಪ್ಪೆ ಗ್ರಾಮಕ್ಕೆ ಬಸ್ಸು ಓಡಾಡುವಂತೆ ಮಾಡಿ ಪುಣ್ಯ ಕಟ್ಟಿಕೊಳ್ಳಿ, ಅಂಗನವಾಡಿ ಮಕ್ಕಳಿಗೆ ಸ್ವಂತ ಕಟ್ಟಡ ಮಾಡಿಸಿಕೊಡಿ, ಚರಂಡಿ ಮಾಡಿಸಿ ರಸ್ತೆಯಲ್ಲಿ ನೀರು ಹರಿಯದಂತೆ ಮಾಡಿಸಿ ನಮ್ಮ ಆರೋಗ್ಯ ಕಾಪಾಡಿ ಎಂದು ಗ್ರಾಮದ ಮಹಿಳೆಯರು ಕಣ್ಣೀರು ಹಾಕಿದಾಗ ಗ್ರಾಮದ ಜನರಿಗೆ ಧೈರ್ಯ ಹೇಳಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿಚೌಧರಿ ನಿಮ್ಮೊಂದಿಗೆ ನಾನಿದ್ದೇನೆ. ರಸ್ತೆ, ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಗ್ರಾಮೀಣ ಜನರ ಆರೋಗ್ಯ ಕಾಪಾಡುವುದು ಸರ್ಕಾರದ ಕರ್ತವ್ಯ, ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಜನರ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಸ್ಥಳದಲ್ಲಿದ್ದ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಸುಷ್ಮಾ, ರಾಜಸ್ವ ನಿರೀಕ್ಷಕಿ ಚಂದ್ರಕಲಾ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಮೂರ್ತಿ ಅವರಿಗೆ ನಿರ್ದೇಶನ ನೀಡಿ ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಪಂಚಾಯತ್ ಸಿಇಓ ಶೇಖ್ ತನ್ವಿರ್‌ಆಸೀಫ್ ಅವರಿಗೆ ದೂರವಾಣಿ ಕರೆ ಮಾಡಿ ಕೂಡಲಕುಪ್ಪೆ ಗ್ರಾಮದ ಜನರ ಸಮಸ್ಯೆಗಳಿಗೆ ಕೂಡಲೇ ಶಾಶ್ವತ ಪರಿಹಾರ ದೊರಕಿಸಿ ಕೊಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿಠಲಾಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಕಾಳೇಗೌಡನಕೊಪ್ಪಲು ಕುಮಾರ್, ಕಾರ್ಯದರ್ಶಿ ಸಲ್ಮಾಬೇಗಂ, ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಡಾ.ಅರುಣ್‌ಕುಮಾರ್, ತಾಲ್ಲೂಕು ಉದ್ಯೋಗ ಖಾತ್ರಿ ಯೋಜನಾ ಸಹಾಯಕ ನಿರ್ದೇಶಕ ಡಾ.ನರಸಿಂಹರಾಜು, ತಾಲೂಕು ಸಮಾಜ ಕಲ್ಯಾಣಾಧಿಕಾರಿ ದಿವಾಕರ್, ಬಿಸಿಎಂ ಅಧಿಕಾರಿ ವೆಂಕಟೇಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ್, ಕೃಷಿ ತಾಂತ್ರಿಕ ಶ್ರೀಧರ್, ಸೇರಿದಂತೆ ಪೊಲೀಸ್ ವೃತ್ತ ನಿರೀಕ್ಷಕರಾದ ಸುಮಾರಾಣಿ, ಆನಂದೇಗೌಡ ಸೇರಿದಂತೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
———-–ಶ್ರೀನಿವಾಸ್ ಆರ್