ಕೊಟ್ಟಿಗೆಹಾರ – ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಪ್ರವಾಸಿಗರ ಅತಿಯಾದ ಮೋಜು-ಮಸ್ತಿ, ಅಪಾಯಕಾರಿ ಕ್ರಿಯೆಗಳು ಹಾಗೂ ಬಂಡೆಗಳ ಹತ್ತುವ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಚಾರ್ಮಾಡಿ ಜಲಪಾತಗಳ ಬಳಿ ಜನರ ಭದ್ರತೆ ದೃಷ್ಟಿಯಿಂದ ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಪೊಲೀಸರು, ಗಸ್ತು ದಳವನ್ನು ನಿಯೋಜಿಸಿದ್ದಾರೆ. ಬಂಡೆಗಳ ಬಳಿ ಬ್ಯಾರಿಕೇಡ್ ಹಾಕಿ ಪ್ರವೇಶವನ್ನು ನಿಷೇಧಿಸಲಾಗಿದ್ದು, ಬಂಡೆ ಹತ್ತುವ ಪ್ರಯತ್ನ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

ಬಣಕಲ್ ಠಾಣೆಯ ಪೊಲೀಸರು ಚಾರ್ಮಾಡಿ ಘಾಟಿಯಲ್ಲಿ ನಿರಂತರ ಗಸ್ತು ನಡೆಸುತ್ತಿದ್ದು, ಪ್ರವಾಸಿಗರು ನಿಯಮ ಪಾಲನೆ ಮಾಡುವುದು ಅನಿವಾರ್ಯವಾಗಿದೆ. ಸುಂದರ ಪ್ರಕೃತಿ ಸೌಂದರ್ಯವನ್ನು ಆನಂದಿಸುವಾಗಲೇ ಸುರಕ್ಷತೆ ಹಾಗೂ ಕಾನೂನು ಪಾಲನೆ ಅಗತ್ಯ ಎಂಬ ಸಂದೇಶವನ್ನು ಪೊಲೀಸರು ನೀಡುತ್ತಿದ್ದಾರೆ.

ಪ್ರವಾಸಿಗರಿಗೆ ಸಲಹೆ: ಜಲಪಾತ ಪ್ರದೇಶಕ್ಕೆ ಭೇಟಿ ನೀಡುವಾಗ ತಮ್ಮ ಹಾಗೂ ಇತರರ ಭದ್ರತೆಗಾಗಿ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ