ಕೊರಟಗೆರೆ :– ಮೂರುವರುಷಗಳ ಹಿಂದೆ ಮಾನಸಿಕ ಸ್ಥಿತಿಯಲ್ಲಿ ವಿಸಾಖಪಟ್ನಂ ರೈಲ್ವೆ ನಿಲ್ದಾಣದ ಬಳಿ ತಿರುಗಾಡುತ್ತಿದ್ದ ಚಿಂಗಯ್ಯ ಎಂಬುವವರನ್ನು ಎಯುಟಿಡಿ ಶಿಲ್ಟರ್ ಹೋಂ ಸಹಾಯದಿಂದ ರಕ್ಷಿಸಲಾಯಿತು. ಆ ಬಳಿಕ ಮುಂಬೈನ ಶ್ರದ್ಧಾ ಫೌಂಡೇಶನ್ ಇವರಿಗೆ ಸೂಕ್ತ ಮಾನಸಿಕ ಚಿಕಿತ್ಸೆ ನೀಡಿ, ಸಾಮಾನ್ಯ ಜೀವನಕ್ಕೆ ಮರಳುವಂತೆ ಮಾಡಿತು.
ಭಾರತದ ಪ್ರಸಿದ್ಧ ಮಾನಸಿಕ ವೈದ್ಯ ಡಾ. ಭಾರತ್ ವಾಟ್ವಾನಿ ಅವರು ಸ್ಥಾಪಿಸಿದ ಶ್ರದ್ಧಾ ಫೌಂಡೇಶನ್, ಕಳೆದ 38 ವರ್ಷಗಳಿಂದ ದೇಶದಾದ್ಯಂತ ರಸ್ತೆಬದಿಯಲ್ಲಿ ತಿರುಗಾಡುತ್ತಿರುವ ಮಾನಸಿಕ ಸಮಸ್ಯೆಗೊಳಗಾದ ವ್ಯಕ್ತಿಗಳನ್ನು ರಕ್ಷಿಸಿ, ಅವರಿಗೆ ವಸತಿ ಹಾಗೂ ಚಿಕಿತ್ಸೆ ನೀಡುವ ಕಾರ್ಯದಲ್ಲಿ ತೊಡಗಿಕೊಂಡಿದೆ. ವಿಳಾಸ ಸಿಗುತ್ತಿದ್ದಂತೆ, ಅವರು ಯಾವುದೇ ರಾಜ್ಯದಲ್ಲಿ ಇರಲಿ, ಮನೆಗೆ ತಲುಪಿಸುವ ಜವಾಬ್ದಾರಿಯನ್ನೂ ಈ ಸಂಸ್ಥೆ ಭರಿಸುತ್ತಿದೆ. ಹಾಗೂ ಆ ರೋಗಿಗಳಿಗೆ ಪ್ರತಿ ತಿಂಗಳು ಉಚಿತ ಔಷಧಿ ಅವರ ಮನೆಬಾಗಿಲಿಗೆ ತಲುಪಿಸುತ್ತಿದ್ದಾರೆ.

ತಮ್ಮ ಕುಟುಂಬದಿಂದ ಸುಮಾರು 15 ವರ್ಷಗಳ ಹಿಂದೆ ನಾಪತ್ತೆ ಆದ ಚಿಂಗಯ್ಯ ಅವರು, ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬುಕ್ಕಪಟ್ಟಣ ಗ್ರಾಮದ ಮೂಲದವರಾಗಿದ್ದು, ಈ ಮಾಹಿತಿ ದೊರೆತ ಬಳಿಕ ಸಾಮಾಜಿಕ ಕಾರ್ಯಕರ್ತ ಗೌತಮ್ ಜಿ ಅವರ ಸಹಕಾರದಿಂದ ಅವರನ್ನು 13- 04-2025 ಸೋಮವಾರ ದಂದು ಅವರ ಕುಟುಂಬ ಹಾಗೂ ಗ್ರಾಮಸ್ಥರೊಂದಿಗೆ ಮತ್ತೆ ಒಗ್ಗೂಡಿಸಲಾಯಿತು.
ಇದರೊಂದಿಗೆ ಚಿಂಗಯ್ಯ ಅವರ ಬದುಕು ಹೊಸ ದಿಕ್ಕು ಪಡೆಯುವಲ್ಲಿ ಶ್ರದ್ಧಾ ಫೌಂಡೇಶನ್ ಹಾಗೂ ಸಮಾಜ ಸೇವಕರ ಪಾತ್ರ ಮಹತ್ವದ್ದಾಗಿದೆ.
- ನರಸಿಂಹಯ್ಯ ಕೋಳಾಲ