ಶ್ರವಣಬೆಳಗೊಳ : ಪಂಚಕಲ್ಯಾಣದ ಪ್ರಯುಕ್ತ ವೃಷಭನಾಥ ಸ್ವಾಮಿಯ ಜಿನ ಮೂರ್ತಿಗೆ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಕ್ಷೇತ್ರದ ಪೀಠಾಧಿಪತಿಗಳಾದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಶ್ರದ್ಧಾ ಭಕ್ತಿಯಿಂದ ಅಭಿಷೇಕವನ್ನು ನೆರವೇರಿಸಲಾಯಿತು.
ಬೆಳಗ್ಗೆ ನೂತನ ಬಾಹುಬಲಿ ಮೂರ್ತಿಗೆ ಅಷ್ಟೌಷಧಿ ಮತ್ತು ದ್ರವ್ಯಗಳಿಂದ ಲೇಪಿಸಿ ಶಾಂತಿ ಮಂತ್ರಗಳನ್ನು ಪಠಿಸಲಾಯಿತು. ಜನ್ಮ ಕಲ್ಯಾಣದ ನಿಮಿತ್ತ ಅಲಂಕರಿಸಿದ ಐರಾವತದಲ್ಲಿ ಜಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಉತ್ಸವದ ಮುಂಭಾಗದಲ್ಲಿ ಸ್ವರ್ಣ ಕಿರೀಟ ಧರಿಸಿ ಅಷ್ಟಮಂಗಲಗಳನ್ನು ಹಿಡಿದ ಅಷ್ಟ ಕನ್ನಿಕೆಯರಾದ ಬಿ.ಜೆ.ಮಾನ್ಯ ಜೈನ್, ವಿಂಧ್ಯಭಾ, ಸಿಂಚನ, ಭಕ್ತಿ, ಪ್ರಣವ್ಯ, ಪೂಜಾ, ಐಶ್ವರ್ಯ, ಭೂಮಿಕಾ, ಹೆಜ್ಜೆ ಹಾಕುತ್ತಾ ವಿಶೇಷ ಮೆರಗು ತಂದರು.
ಯಾಗ ಮಂಟಪದ ಸಮವಸರಣ ಮತರ್ತು ಭಂಡಾರ ಬಸದಿಯ ಸುತ್ತ ಎರಡು ಸಾರೋಟ್ ನಲ್ಲಿಚತುಷ್ಕೋನ ಕಳಸ, ಶಾಂತಿಧಾರಾ ಕಳಸಗಳನ್ನು ಸಹ ಮಂಗಳವಾಧ್ಯ, ಚಂಡೇವಾಧ್ಯದೊಂದಿಗೆ ಭವ್ಯ ಮೆರವಣಿಗೆ ನಡೆಸಿ, ನಂತರ ಸುಮೇರು ಪರ್ವತದ ಪಾಂಡುಕಾ ಶಿಲೆಯ ಮೇಲೆ ಪ್ರತಿಷ್ಠಾಪಿಸಿ 108 ಕಲಶಗಳಿಂದ ಅಭಿಷೇಕ ನಡೆಸಲಾಯಿತು. ಜನ್ಮ ಕಲ್ಯಾಣದ ನಂತರ ಜಿನ ಬಾಲಕನಿಗೆ ಆಭರಣಗಳಿಂದ ಅಲಂಕರಿಸಿ ನಾಮಕರಣದ ವಿಧಿಗಳನ್ನು ನಡೆಸಿ ರಜತದ ತೊಟ್ಟಿಲಿನಲ್ಲಿ ಮಲಗಿಸಿ ಪೂಜೆ ನೆರವೇರಿಸಲಾಯಿತು.

ಶುಕ್ರವಾರ ರಾತ್ರಿ ಜಿನಮಾತೆಗೆ ಅಷ್ಟಕನ್ನಿಕೆಯರಿಂದ ವಿವಿಧ ಸೇವೆ, ಜಿನಬಾಲಕನ ಬಾಲಕ್ರೀಡೆಗಳು, ವೃಷಭನಾಥ ಸ್ವಾಮಿಯ ರಾಜ್ಯಾಭಿಷೇಕ, ವೃಷಭನಾಥ ಸ್ವಾಮಿಯ ಮಕ್ಕಳಾದ ಭರತ, ಬಾಹುಬಲಿ ಬ್ರಾಹ್ಮಿ, ಸುಂದರಿ ಹಾಗು ಇನ್ನುಳಿದ ಪುತ್ರರಿಗೆ ಕಲಿಸಿದ 6 ವಿದ್ಯೆಗಳು, ಮುಂತಾದ ದೃಷ್ಯಗಳನ್ನು ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಆದಿನಾಥ ಸ್ವಾಮಿಯ ಕುರಿತು ಬಿ.ಜೆ.ಮಾನ್ಯಜೈನ್ ನೃತ್ಯ ಪ್ರದರ್ಶಿಸಿದರು. ರಾಜ್ಯಾಭಿಷೇಕದ ನಂತರ ೫೬ ರಾಜರಿಂದ ಕಪ್ಪ ಕಾಣಿಕೆ ಸ್ವೀಕರಿಸುವ ದೃಷ್ಯ ಮನಮೋಹಕವಾಗಿತ್ತು. ನಂತರ ನೀಲಾಂಜನೆಯ ನೃತ್ಯದ ನಂತರ ವೃಷಭನಾಥ ಸ್ವಾಮಿಗೆ ವೈರಾಗ್ಯ ಉಂಟಾಗಿ ದೀಕ್ಷೆ ಪಡೆದು ತಪಸ್ಸನ್ನಾಚರಿಸಲು ವನಕ್ಕೆ ಹೋಗುವ ದೃಷ್ಯಗಳನ್ನು ವೇದಿಕೆಯಲ್ಲಿ ನೆರವೇರಿಸಲಾಯಿತು.
ಸಾನಿಧ್ಯವನ್ನು ಆಚಾರ್ಯ ಕುಂಥುಸಾಗ ಮಹಾರಾಜರು ಸಂಘಸ್ಥ ತ್ಯಾಗಿಗಳು ಮಾತಾಜಿಯವರು ಕನಕಗಿರಿ ಜೈನ ಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಕಂಬದಹಳ್ಳಿ ಜೈನಮಠದ ಬಾನುಕೀರ್ತಿ ಸ್ವಾಮಿಜಿ ಅರಹಂತಗಿರಿಯ ಧವಲಕೀರ್ತಿ ಸ್ವಾಮಿಜಿ, ಆರತಿಪುರದ ಮತ್ತು ಸೋಂದಾಶ್ರಿಗಳು ಪಾಲ್ಗೊಂಡಿದ್ದರು.