ಕೆ.ಆರ್.ಪೇಟೆ: ತಾಲ್ಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ವಿಶ್ವಾವಸು ನಾಮ ಸಂವತ್ಸರದ ಯುಗಾದಿ ಹಬ್ಬದ ದಿನ ರೈತರು ಮುಂಗಾರಿನ ಮೊಟ್ಟ ಮೊದಲ ಉಳುಮೆ ಎಂದು ಕರೆಯಲಾಗುವ ಹೊನ್ನಾರು ಕಟ್ಟಿ ಈ ವರ್ಷದ ಕೃಷಿ ಚಟುವಟಿಕೆಗೆ ಚಾಲನೆ ನೀಡಿದರು.
ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿ ಅಮ್ಮನವರ ದೇವಸ್ಥಾನದಿಂದ ಆರಂಭವಾದ ಹೊನ್ನಾರಿಗೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ಗ್ರಾಮದ ಯಜಮಾನ್ ಸಂತೋಷ್, ಲಾಳಿ ಬೋರೇಗೌಡ ಅವರು ಜಾನುವಾರುಗಳಿಗೆ, ನೇಗಿಲು ಮತ್ತು ನೊಗಕ್ಕೆ ವಿಶೇಷ ಪೂಜೆ ಸಲ್ಲಿಸಿ ಹೊನ್ನಾರಿಗೆ ಚಾಲನೆ ನೀಡಿದರು.
ಜಾನುವಾರುಗಳಿಗೆ ನೇಗಿಲು ಕಟ್ಟಿ ಹೊರಟ ಹೊನ್ನಾರು ಶ್ರೀ ಚನ್ನಕೇಶವ ದೇವಾಲಯದ ಹಿಂಭಾಗದ ಬೀದಿಯಲ್ಲಿ ಸಾಗಿ, ಶ್ರೀ ಅಮೃತೇಶ್ವರ, ಶ್ರೀ ಬೋರೇದೇವರ ದೇವಾಲಯದ ರಸ್ತೆಯ ಸಾಗಿ, ಬ್ರಾಹ್ಮಣರ ಬೀದಿ, ಕೆರೆಬೀದಿ, ಸಿಂಗಮ್ಮನ ಗುಡಿ ಬೀದಿಗಳ ಮೂಲಕ ಮೆರವಣಿಗೆ ಹೊರಟ ಹೊನ್ನಾರು ಮತ್ತು ರೈತರು ಜಮೀನುಗಳಲ್ಲಿ ಉಳುಮೆ ಮಾಡಿ ನಂತರ ಪುನಃ ಶ್ರೀ ಲಕ್ಷ್ಮೀ ದೇವಿ ದೇವಸ್ಥಾನದ ಬಳಿ ಬಂದು ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಅರ್ಚಕ ಎ.ಡಿ.ರವಿ, ಶನಿದೇವರ ಜಯರಾಮೇಗೌಡ, ಪುಟ್ಟಸ್ವಾಮಿ, ರಂಗನಾಯಕ, ಮಂಜೇಗೌಡ. ಶಿವಕುಮಾರ್ ಸೇರಿದಂತೆ ಹಲವು ಗ್ರಾಮಸ್ಥರು, ಮುಖಂಡರು ಉಪಸ್ಥಿತರಿದ್ದರು.

ಹೊನ್ನಾರಿಗೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಕುಮಾರ್, ಯುಗಾದಿ ಹಬ್ಬದ ದಿನದಂದೇ ಹೊನ್ನಾರು ಕಟ್ಟುವ ಸಂಪ್ರದಾಯವು ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ನಮ್ಮ ಹಿರಿಯರು ನಡೆಸಿಕೊಂಡು ಬರುತ್ತಿದ್ದು ಇದನ್ನು ನಾವೂ ಕೂಡಮುಂದುವರಿಸಿಕೊಂಡು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಹೊನ್ನಾರು ಜನಪದ ಒಂದು ಸಂಸ್ಕೃತಿಯ ಪ್ರತೀಕವಾಗಿದೆ. ನಮ್ಮ ರೈತರು ಹೊಸ ವರ್ಷ ಯುಗಾದಿ ಹಬ್ಬದಂದು ರೈತರು ಗ್ರಾಮದ ಸುತ್ತ ತಮ್ಮ ಹೊಲಗಳಲ್ಲಿ ನೇಗಿಲನ್ನು ಭೂಮಿಗೆ ಹೂಡಿ ಪೂಜೆ ಪುನಸ್ಕಾರಗಳನ್ನು ಮಾಡುವ ಮುನ್ನ ದೇವಾಲಯದಲ್ಲಿ ಪೂಜೆ ನೆರವೇರಿಸಿ ಹೊನ್ನಾರು ಕಟ್ಟುವ ಸಂಪ್ರದಾಯ ಗ್ರಾಮೀಣ ಭಾಗದ ಆಚರಣೆಯಲ್ಲಿದೆ. ಅದೇ ರೀತಿ ನಮ್ಮ ಅಗ್ರಹಾರಬಾಚಹಳ್ಳಿ ಗ್ರಾಮದಲ್ಲಿ ಹೊನ್ನಾರು ಸಂಭ್ರಮವನ್ನು ಆಚರಿಸಲಾಯಿತು.
ಯಾಂತ್ರೀಕೃತ ಬೇಸಾಯ ಆರಂಭವಾದಾಗಿನಿಂದ ಗ್ರಾಮಗಳಲ್ಲಿ ಹೊನ್ನಾರು ಸಂಪ್ರದಾಯ ಕಳೆಗುಂದುತ್ತಿದೆ. ಆದರೂ ಹಲವಾರು ಗ್ರಾಮಗಳಲ್ಲಿ ಇಂದಿಗೂ ಹೊನ್ನಾರು ಕಟ್ಟುವ ಪದ್ದತಿಯನ್ನು ಆಚರಿಸಿಕೊಂಡು ಬರುತ್ತಿದ್ದು ಜಾನಪದ ಸಂಪ್ರದಾಯವನ್ನು ಉಳಿಸಿಕೊಂಡಿದ್ದಾರೆ. ಹೊನ್ನಾರು ಎಂದರೆ ಜಾನುವಾರುಗಳ ಮೈತೊಳೆದು ಸಿಂಗಾರ ಮಾಡಿ, ಭೂಮಿ ತಾಯಿಗೆ ಪೂಜೆ ವರ್ಷದ ಮೊದಲ ಉಳುಮೆ ಮಾಡುವುದನ್ನು ಹೊನ್ನಾರು ಎಂದು ಕರೆಯಲಾಗುತ್ತದೆ.

ಹಿಂದೆ ಯುಗಾದಿಗೆ ಮುಂಚೆ ಎಷ್ಟೇ ಮಳೆ ಬಿದ್ದರೂ ಸಹ ಹೊನ್ನಾರು ಕಟ್ಟುವ ತನಕ ಭೂಮಿಯನ್ನು ಉಳುವುದನ್ನು ನಿರ್ಭಂಧಿಸಲಾಗಿತ್ತು. ಕೃಷಿ ಯಾಂತ್ರೀಕರಣ ವ್ಯವಸ್ಥೆ ಬಂದ ಮೇಲೆ ಈ ಸಂಪ್ರದಾಯ ಬದಲಾಗಿದೆ. ಆದರೂ ಯುಗಾದಿ ಹಬ್ಬದಂದು ರೈತನಿಗೆ ಶುಭದಿನ ಈ ಪವಿತ್ರ ದಿನದಂದು ಭೂಮಿಯನ್ನು ಉಳುಮೆ ಮಾಡುವ ಕಾರ್ಯಕ್ಕೆ ಹೊನ್ನಾರಿನ ಮೂಲಕ ಚಾಲನೆ ನೀಡಲಾಗುತ್ತದೆ ಎಂದು ಎ.ಬಿ.ಕುಮಾರ್ ತಿಳಿಸಿದರು.
- ಶ್ರೀನಿವಾಸ್ ಆರ್.