ಆಲ್ದೂರು-ಪಿ.ಎಸ್.ಐ ಅಕ್ಷಿತಾ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆ-ಪ್ರತಿ ಭಟನೆಗೆ ಸಜ್ಜಾಗಿದ್ದ ಒಕ್ಕಲಿಗರ ಮನವೊಲಿಸಿದ ಜಿಲ್ಲಾಡಳಿತ-ಹತ್ತು ದಿನಗಳ ಗಡುವು ನೀಡಿದ ಒಕ್ಕಲಿಗರ ಸಂಘ

ಆಲ್ದೂರು-ಜಮೀನಿನ ವಿವಾದ ನ್ಯಾಯಾಲಯದ ಅಂಗಳದಲ್ಲಿದ್ದರು ಸಹ ಅಲ್ಲಿ ಶವಸಂಸ್ಕಾರ ಮಾಡಲು ಉದ್ದೇಶಪೂರ್ವಕವಾಗಿಯೇ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಪಿ.ಎಸ್.ಐ ಅಕ್ಷಿತಾ ಅವರ ಅಮಾನತ್ತಿಗೆ ಆಗ್ರಹಿಸಿ ಒಕ್ಕಲಿಗ ಸಂಘಟನೆ ಕರೆದಿದ್ದ ಪ್ರತಿಭಟನೇ ಅಧಿಕಾರಿಗಳ ಸಮಯೋಚಿತ ನಿರ್ಧಾರದ ಕಾರಣಕ್ಕೆ ಸಭೆಗಷ್ಟೇ ಸೀಮಿತವಾಯಿತು.

ಕಳೆದ ಶುಕ್ರವಾರದಂದು ಒಕ್ಕಲಿಗರ ಸಂಘದ ಸುಪರ್ದಿಯಲ್ಲಿದ್ದ ಜಮೀನಿನಲ್ಲಿ ದಲಿತಪರ ಸಂಘಟನೆಗಳು ಮಹಿಳೆಯೊಬ್ಬರ ಶವ ಸಂಸ್ಕಾರ ನಡೆಸಿದ್ದು ಆಲ್ದೂರು ಹಾಗು ಸುತ್ತಮುತ್ತಲ ಪರಿಸರದಲ್ಲಿ ಜಾತೀ ಸಂಘರ್ಷದ ಭೀತಿಯನ್ನು ಸೃಷ್ಟಿಸಿತ್ತು.

ಆ ಸಂದರ್ಭದಲ್ಲಿ ಎರಡು ಸಂಘಟನೆಗಳ ಮುಖಂಡರುಗಳು ಇದು ಜಾತೀ-ಜಾತಿಗಳ ನಡುವೆ ನಡೆಯುತ್ತಿರುವ ಘರ್ಷಣೆಯಲ್ಲ ಜಮೀನಿನ ಹಕ್ಕಿಗಾಗಿ ಸಂಘಟನೆಗಳ ನಡುವೆ ನಡೆಯುತ್ತಿರುವ ತಿಕ್ಕಾಟವಷ್ಟೇ ಎಂಬುದನ್ನು ಸ್ಪಷ್ಟಪಡಿಸಿ ನಡೆಯಬಹುದಾಗಿದ್ದ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿ ಆಗಿದ್ದರು.

ಪಿ.ಎಸ್.ಐ ಅಕ್ಷಿತಾರ ಅಮಾನತ್ತಿಗೆ ಆಗ್ರಹ …

ಒಕ್ಕಲಿಗರ ಸಂಘಕ್ಕೆ ಗ್ರಾಮಪಂಚಾಯತಿ ವತಿಯಿಂದ ಕೊಡಮಾಡಿದ್ದ ಜಾಗದ ಸಂಪೂರ್ಣ ಹಕ್ಕಿಗಾಗಿ ಎರಡು ಸಂಘಟನೆಗಳ ನಡುವಿನ ಹೋರಾಟ ನ್ಯಾಯಾಲಯದ ಮೆಟ್ಟಿಲೇರಿತ್ತು.

ಈ ನಡುವಲ್ಲೇ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಮಹಿಳೆಯೊಬ್ಬರ ಶವವನ್ನು ವಿವಾದಿತ ಜಾಗದಲ್ಲಿಯೇ ದಫನ್ ಮಾಡುವ ಮೂಲಕ ವಿವಾದದ ಬೆಂಕಿಗೆ ತುಪ್ಪ ಸುರಿಯುವ ಪ್ರಯತ್ನ ಮಾಡಲಾಗಿತ್ತು.

ಶವ ಸಂಸ್ಕಾರ ಮಾಡುವ ಸಮಯದಲ್ಲಿ ಸ್ಥಳದಲ್ಲಿಯೇ ಇದ್ದ ಆಲ್ದೂರು ಪೊಲೀಸ್ ಠಾಣೆಯ ಪಿ.ಎಸ್.ಐ ಅಕ್ಷಿತಾ ಜಾಗದ ವಿವಾದ ನ್ಯಾಯಾಲಯದಲ್ಲಿ ಇದೆ ಎಂಬ ಮಾಹಿತಿಯನ್ನು ತಿಳಿಸಿದರು ಸಹ ಅದಕ್ಕೆ ಗಮನ ಕೊಡದೆ ಶವ ಸಂಸ್ಕಾರವನ್ನು ತಡೆಯುವ ಬದಲು ಶವ ಸಂಸ್ಕಾರ ನಡೆಸಲು ಅನುಕೂಲ ಮಾಡಿಕೊಟ್ಟರು ಎಂಬ ಗಂಭೀರ ಆರೋಪವನ್ನು ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ ಗೌಡ ಮಾಡಿ,ಸೋಮವಾರದ ವರೆಗೆ ಕರ್ತವ್ಯಲೋಪ ಎಸಗಿರುವ ಪಿ.ಎಸ್.ಐ ಅಕ್ಷಿತಾ ವರರನ್ನು ಅಮಾನತ್ತು,ಅಥವಾ ಬೇರೆಡೆಗೆ ವರ್ಗಾವಣೆಗೊಳಿಸಬೇಕು ತಪ್ಪಿದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಜಿಲ್ಲಾಡಳಿತಕ್ಕೆ ನೀಡಿದ್ದರು.ಆದರೆ ಅವರ ಮನವಿಗೆ ಪೊಲೀಸ್ ಇಲಾಖೆ ಸ್ಪಂದಿಸದ ಕಾರಣಕ್ಕೆ ಬಾರಿ ಪ್ರತಿಭಟನೆಗೆ ಒಕ್ಕಲಿಗರ ಸಂಘ ಸಿದ್ದವಾಗಿತ್ತು.

ಅಧಿಕಾರಿಗಳ ಜೊತೆ ಸಭೆ …

ಪ್ರತಿಭಟನೆ ಜೋರಾಗಿಯೇ ನಡೆಯುವ ಮಾಹಿತಿ ಪಡೆದ ಜಿಲ್ಲಾಡಳಿತ ಸೋಮವಾರ ಬೆಳಗ್ಗೆಯೇ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ ರಾಜಶೇಖರ ಗೌಡ,ರೀನಾ ಸುಜೇಂದ್ರ,ಸವಿತಾ ರಮೇಶ್,ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ , ಮಾಡ್ಲಪ್ರಕಾಶ್,ಹೆಚ್.ಎಸ್ ಕವೀಶ್,ಅರೇನೂರ್ ಲಕ್ಷ್ಮಿಣಗೌಡ ಜೊತೆಗೆ ಸಭೆ ನಡೆಸಿ ಪ್ರತಿಭಟನೆಯನ್ನು ಸಭೆಗಷ್ಟೇ ಸೀಮಿತಗೊಳಿಸುವಂತೆ ಮನವೊಲಿಸುವಲ್ಲಿ ಯಶಸ್ವಿಯೂ ಆಗಿತ್ತು.

ಒಕ್ಕಲಿಗರ ಸಂಘದ ಪ್ರಮುಖ ಬೇಡಿಕೆಯಾದ ಪಿ.ಎಸ್.ಐ ಅಕ್ಷಿತಾರವರ ಅಮಾನತ್ತು ಅಥವಾ ವರ್ಗಾವಣೆ ಸಂಬಂಧ 10 ದಿನಗಳ ಒಳಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ,ಒಕ್ಕಲಿಗರ ಸಂಘಕ್ಕೆ ಬೇರೆಡೆ 3ಎಕರೆ ಜಮೀನನ್ನು ನೀಡುವ,ಹಾಗು ಐದು ಜನ ಒಕ್ಕಲಿಗ ಮುಖಂಡರುಗಳ ಮೇಲೆ ದಾಖಲಾಗಿರುವ ದೂರುಗಳ ಪರಿಶೀಲನೆ ನಡೆಸಿ ಹಿಂಪಡೆಯುವ ಭರವ ಸೆಯನ್ನು ಜಿಲ್ಲಾಡಳಿತ ನೀಡಿದೆ.

ಆಲ್ದೂರಿನಲ್ಲಿ ಒಕ್ಕಲಿಗರ ಬೃಹತ್ ಶಕ್ತಿ ಪ್ರದರ್ಶನ

ಈ ಎಲ್ಲ ಬೆಳವಣಿಗೆಗಳ ನಡುವಲ್ಲಿಯೇ ತೋರಣಮಾವು ಪ್ಲಾಂಟರ್ಸ್ ಕ್ಲಬ್ ನ ಆವರಣದಲ್ಲಿ ಸಾವಿರಾರು ಜನ ಒಕ್ಕಲಿಗ ಸಮಾಜದವರು ಸೇರಿದ್ದರು.ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ ಬಂದ ಟಿ. ರಾಜಶೇಖರ ಗೌಡ ಆ ಮಾಹಿತಿಯನ್ನು ಸೇರಿದ್ದ ಜನಸ್ತೋಮಕ್ಕೆ ತಿಳಿಸಿದಾಗ ಆಕ್ರೋಶ ಭುಗಿಲೆದ್ದಿತು.

ಪಿ.ಎಸ್.ಐ ಅಕ್ಷಿತಾ ರಾಜಕಾರಣಿಯೊಬ್ಬರ ಕುಮ್ಮಕ್ಕಿನಿಂದ ಉದ್ದೇಶಪೂರ್ವಕವಾಗಿಯೇ ಶವಸಂಸ್ಕಾರಕ್ಕೆ ಸಾತ್ ಕೊಟ್ಟಿದ್ದಾರೆ.ಅವರನ್ನು ಈ ಕೂಡಲೇ ಅಮಾನತ್ತು ಗೊಳಿಸಬೇಕು ಇಲ್ಲದೆ ಹೋದಲ್ಲಿ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸೋಣ ಎನ್ನುವ ವಾದವು ಬಲವಾಗಿ ಕೇಳಿಬಂತು.

144 ಜಾರಿಯಲ್ಲಿದೆ..

ದತ್ತಜಯಂತಿಯ ಕಾರಣಕ್ಕೆ ಜಿಲ್ಲೆಯಾದ್ಯಂತ ನಿಷೇದಾಜ್ಞೆ ಜಾರಿಯಲ್ಲಿದೆ ಈ ಸಮಯದಲ್ಲಿ ಪ್ರತಿಭಟನೆ ನಡೆಸುವುದು ಸೂಕ್ತವಲ್ಲ.ಜೊತೆಗೆ ಜಿಲ್ಲಾಡಳಿತ ನೀಡಿರುವ ಭರವಸೆ ಈಡೇರಿಸಲು ಸಮಯ ಕೊಟ್ಟಿದ್ದೇವೆ. ಆ ಕಾಲಮಿತಿಯೊಳಗೆ ನಮ್ಮ ಬೇಡಿಕೆಗಳು ಈಡೇರದೆ ಹೋದಲ್ಲಿ ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸೋಣ ಎಂದು ಟಿ. ರಾಜಶೇಖರ ಗೌಡ ಹಾಗು ಮುಖಂಡರು ಮನವೊಲಿಸಲು ಮುಂದಾದರು ಸಹ ಯುವಕರು ಅವರ ಮಾತಿಗೆ ಮಣಿಯಲಿಲ್ಲ.

ನೀವು ಅಧಿಕಾರಿಗಳನ್ನೇ ಸಭೆಗೆ ಕರೆಸಬೇಕಿತ್ತು.ಅಲ್ಲಿಗೆ ಹೋಗಿ ನಾಲ್ಕು ಗೋಡೆಗಳ ಮದ್ಯೆ ತೀರ್ಮಾನ ಮಾಡಿಕೊಂಡು ಬರುವ ಅಗತ್ಯತೆ ಏನಿತ್ತು ಎಂದು ಗರಂ ಆದ ಯುವಕರು ನಮ್ಮ ಮೇಲೆ ಕೇಸು ಬಿದ್ದರು ಸರಿಯೇ ನಾವು ಪ್ರತಿಭಟನೆ ನಡೆಸಿಯೇ ತೀರುತ್ತೇವೆ ಎಂದು ಸಿದ್ದರಾದರು.

ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕರೆ..

ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಕಂಡ ಟಿ .ರಾಜಶೇಖರ ಗೌಡ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕರೆ ಮಾಡಿ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದರು.

ಆಗ ಸ್ಥಳಕ್ಕೆ ಆಗಮಿಸಿದ ಡಿ.ವೈ.ಎಸ್.ಪಿ ಶೈಲೇಂದ್ರ,ಸರ್ಕಲ್ ಇನ್ಸ್‌ಪೆಕ್ಟರ್ ಗಳಾದ ಸೋಮೇಗೌಡ,ಗವಿರಾಜ್, ಪಿ.ಎಸ್.ಐ ಸುಜಿತ್ ಗೌಡ ಒಕ್ಕಲಿಗ ಯುವಕರ ಮನವೊಲಿಸುವಲ್ಲಿ ಸಫಲರಾದರು.

ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಟಿ ರಾಜಶೇಖರ ಗೌಡ ತಮ್ಮ ಮನವಿಗೆ ಸ್ಪಂದಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಹೋರಾಟಕ್ಕೆ ಕರೆ ಕೊಡುವುದಾಗಿ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಿದರು.

ಈ ಸಭೆಯಲ್ಲಿ ಒಕ್ಕಲಿಗ ಮುಖಂಡರಾದ,ರವಿ,ರೀನಾ ಸುಜೇಂದ್ರ,ರಂಜನ್ ಅಜಿತ್ ಕುಮಾರ್,ಕೋಮಲಾ ರವಿ, ವಿಕ್ರಾಂತ್, ಸಂಪತ್, ಬ್ರೀಜೇಶ್ ಪಟೇಲ್, ಗುಡ್ಡದೂರು ರಘು, ಸುರೇಶ್ ಬಿ.ಜಿ , ಹಳೇ ಆಲ್ದೂರು ಕೌಶಿಕ್, ಹೆಚ್.ಎಸ್ ಕವೀಶ್, ಹಳಿಯೂರು ಸಂದೇಶ್, ಸತೀಶ್, ವಸಂತ್ ಕುಮಾರ್, ಬಸರವಳ್ಳಿ ರವಿ, ಚಂಪಾ ಜಗದೀಶ್,ಭವ್ಯ ನಟೇಶ್, ಹಳಿಯೂರು ಮಹೇಶ್, ಪೂರ್ಣಿಮಾ ಸುಧೀನ್, ತುಡುಕೂರು ಮಂಜು, ವಕೀಲ ಕೃಷ್ಣೇಗೌಡ, ಮುಂತಾದವರಿದ್ದರು.

———––ಮಧು ಕೆ.ದುರ್ಗಾ

Leave a Reply

Your email address will not be published. Required fields are marked *

× How can I help you?