ಆಲೂರು-ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಲ್ಲಿ ಶಿಸ್ತನ್ನು ಕಲಿಸುವುದರಿಂದ ಆ ಮಕ್ಕಳು ಸಾಮಾನ್ಯ ಮಕ್ಕಳಿಗಿಂತಲೂ ಭಿನ್ನವಾಗಿ, ಮಾದರಿಯಾಗಿ ಕಾಣಿಸುತ್ತಾರೆ ಎಂದು ಶಿಕ್ಷಣ ಸಂಯೋಜಕ ಕೆ.ಎಲ್.ರವಿಕಿರಣ್ ಅಭಿಪ್ರಾಯಪಟ್ಟರು.
ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಸ್ಥಳೀಯ ಸಂಸ್ಥೆ ಹಾಗೂ ಭೈರಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ರತ್ನಮ್ಮ ಬುಲ್‌ಬುಲ್ಸ್ ಘಟಕದ ಸಹಕಾರದಲ್ಲಿ ರಾಜ್ಯಮಟ್ಟದ ಹೀರಕ್ ಫಂಕ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ನಮ್ಮ ತಾಲ್ಲೂಕಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅನೇಕ ಶಾಲೆಗಳಲ್ಲಿ ಈ ಘಟಕಗಳು ಪ್ರಾರಂಭಗೊoಡು ಮಕ್ಕಳಿಗೆ ಅಗತ್ಯವಿರುವ ಜೀವನ ಶಿಕ್ಷಣವನ್ನು ನೀಡುತ್ತಿದೆ ಎಂದರು.
ತಾಲ್ಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್.ಉಪ್ಪಾರ್ ಮಾತನಾಡಿ,ಭೈರಾಪುರ ಶಾಲೆಯ ಬುಲ್‌ಬುಲ್ಸ್ ಮಕ್ಕಳು ನಮ್ಮ ತಾಲ್ಲೂಕಿನಲ್ಲಿಯೇ ಪ್ರಪ್ರಥಮ ಬಾರಿಗೆ ರಾಜ್ಯಮಟ್ಟದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಂದ ಪ್ರಮಾಣಪತ್ರಗಳನ್ನು ಸ್ವೀಕರಿಸಿಬಂದಿರುವುದು ತಾಲ್ಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ. ಈ ಮಕ್ಕಳ ಸಾಧನೆಯ ಹಿಂದೆ ಫ್ಲಾಕ್ ಲೀಡರ್ ಎಂ. ಎಲ್. ಎಲಿಜಬೆತ್ ರವರ ಪರಿಶ್ರಮ ಅಪಾರವಾಗಿದೆ. ಮಕ್ಕಳ ಶ್ರೇಯೋಭಿವೃದ್ಧಿಗಾಗಿ ತಮ್ಮ ಸಹೊದ್ಯೋಗಿಗಳ ಸಹಕಾರದೊಂದಿಗೆ ಸದಾ ಶ್ರಮಿಸುವ ಇವರ ಕಾರ್ಯ ಶ್ಲಾಘನೀಯವಾದುದು ಎಂದು ಹೇಳಿದರು.
ಮುಖ್ಯ ಶಿಕ್ಷಕಿ ಹಾಗೂ ಫ್ಲಾಕ್ ಲೀಡರ್ ಎಂ. ಎಲ್. ಎಲಿಜಬೆತ್ ಮಾತನಾಡಿ, ನಮ್ಮ ಶಾಲೆಯಲ್ಲಿ ರತ್ನಮ್ಮ ಬುಲ್‌ಬುಲ್ಸ್ ಪ್ರಾರಂಭಿಸಿದಾಗ ನನ್ನ ಸಹೋದ್ಯೋಗಿಗಳಾದ ಜ್ಯೋತಿ ಹಾಗೂ ನಾಗರತ್ನ ಮತ್ತು ಪೋಷಕರು ತುಂಬಾ ಸಹಕಾರ ನೀಡಿದರು. ಜೊತೆಗೆ ತಾಲ್ಲೂಕು ಸಂಸ್ಥೆ, ಜಿಲ್ಲಾ ಸಂಸ್ಥೆ, ಎಡಿಸಿ ಬಾಲಣ್ಣರವರ ಸಹಕಾರವನ್ನು ನೆನೆಯದಿದ್ದರೆ ತಪ್ಪಾದೀತು.ಕಲಿಸಿದ ಅಷ್ಟೂ ಅಂಶಗಳನ್ನು ನಿಯಮಿತವಾಗಿ ಕಲಿತು ಈ ಹಂತಕ್ಕೆ ತಲುಪಿದ ಬುಲ್‌ಬುಲ್ಸ್ ಮಕ್ಕಳ ಸಾಧನೆ ಕೂಡ ಅನನ್ಯವಾದುದು ಎಂದರು.
ವೇದಿಕೆಯಲ್ಲಿ ಜಿಲ್ಲಾ ಸಹಾಯಕ ಆಯುಕ್ತ ಎಂ. ಬಾಲಕೃಷ್ಣ, ಹಿರಿಯ ಗೈಡರ್ ಎಚ್.ಜಿ.ಕಾಂಚನಮಾಲ, ಶಿಕ್ಷಣ ಸಂಯೋಜಕ ಎಂ. ಡಿ. ದಿವಾಕರ್ ಮಾತನಾಡಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಚಂದ್ರೇಗೌಡ, ಸಹ ಶಿಕ್ಷಕರಾದ ಜ್ಯೋತಿ, ನಾಗರತ್ನ, ಎಸ್.ಡಿ.ಎಂ.ಸಿ.ಸದಸ್ಯರಾದ ಕಾವ್ಯ, ಸಾನಿಯಾ ಸೇರಿದಂತೆ ಮಕ್ಕಳು, ಪೋಷಕರು ಹಾಜರಿದ್ದರು.
—————–ಧರ್ಶನ್ ಕೆರೇಹಳ್ಳಿ