ಹಾಸನದ ಪ್ರಸಿದ್ಧ ಯುವ ಕವಿ ಮತ್ತು ಯುವ ಸಾಹಿತಿಗಳು ಆಗಿರುವಂತಹ ಶ್ರೀಯುತ ಚಂದ್ರು ಪಿ ಹಾಸನ್ ರವರ ಸಂದರ್ಶನ ನನ್ನ ಮೊದಲ ಸಂದರ್ಶನ. ಎರಡನೇಯ ವರ್ಷದ ಪದವಿಯ ಜರ್ನಲಿಜಮ್ ವಿದ್ಯಾರ್ಥಿಯಾಗಿರುವ ನನಗೆ, ನನ್ನ ಉಪನ್ಯಾಸಕರ ಮಾರ್ಗದರ್ಶನದಂತೆ, ಸ್ಥಳೀಯ ಒಬ್ಬರ ಸಾಹಿತಿಗಳ ಸಂದರ್ಶನ ಮಾಡಬೇಕೆಂದು ಒಮ್ಮೆ ನನ್ನ ಸಹೋದರಿ ಸಂಗೀತವರೊಂದಿಗೆ ಚರ್ಚಿಸಿದಾಗ ಅವರು ಚಂದ್ರು ಪಿ ಹಾಸನ್ ರವರ ಬಗ್ಗೆ ಮಾಹಿತಿ ತಿಳಿಸಿದರು.
ಕ್ಷಣದಲ್ಲೇ ಅವರ ಫೋನ್ ನಂಬರ್ ಅನ್ನು ತೆಗೆದುಕೊಂಡು ಅವರು ನಿಗದಿ ಪಡಿಸಿದ ಸಮಯದಲ್ಲಿ ಅವರನ್ನು ಭೇಟಿಯಾಗಲು ಹೊರಟೆ. 20 ನಿಮಿಷ ಮುಂಚಿತವಾಗಿ ಹಾಜರಾಗಿ ಅವರ ಬಳಿ ಕೇಳಬೇಕೆಂದು ಕೆಲವು ಸರಳ ಪ್ರಶ್ನೆಗಳನ್ನು ಸಿದ್ಧ ಪಡಿಸಿಕೊಂಡೆ. ಇದು ನನ್ನ ಮೊದಲ ಸಂದರ್ಶನವಾದ್ದರಿಂದ ಹೇಗೋ, ಏನೋ ಅಂದುಕೊಳ್ಳುತ್ತಾ ಧೈರ್ಯ ಮಾಡಿಕೊಂಡು ಒಳಗೆ ಹೋದಾಗ ಅವರ ನನ್ನನ್ನು ಖುಷಿಯಿಂದ ಬರಮಾಡಿಕೊಂಡರು. ಮಕ್ಕಳೊಂದಿಗೆ ಕುಳಿತಿದ್ದವರನ್ನು ನೋಡಿ ತುಂಬಾ ಸಂತೋಷವಾಯಿತು. ನನ್ನ ಸಹೋದರಿ ಹೇಳಿದ್ದ ಮಾತು ನೆನಪಾಯಿತು. ಹಾಸನ್ ಸರ್ ರವರು ಗಣಿತ ಶಿಕ್ಷಕರು ಅಲ್ಲದೆ ಅವರೊಂದಿಗೆ ಹೇಗೆ ಮಾತನಾಡುವುದು ಎಂಬ ಪ್ರಶ್ನೆ ಮನಸ್ಸಿನಲ್ಲಿ ಕಾಡುತ್ತಿತ್ತು.
ಆದರೆ ಅವರ ಆತ್ಮೀಯ ಆಹ್ವಾನ ಎಲ್ಲವನ್ನು ಮರೆಸಿ ಧೈರ್ಯದಿಂದ ಮಾತನಾಡಲು ಉತ್ತೇಜಿಸಿತು. ಅವರು ನನ್ನನ್ನು ಎಂದೂ ನೋಡದಿದ್ದರೂ ಎಷ್ಟೋ ವರ್ಷಗಳ ಪರಿಚಯವಿರುವ ಹಾಗೆ ಆತ್ಮೀಯವಾಗಿ ನನ್ನ ಬಗ್ಗೆ ಮತ್ತು ನನ್ನ ಅಧ್ಯಯನದ ಬಗ್ಗೆ ವಿಚಾರಿಸಿದ ನಂತರದಲ್ಲಿ ಇದ್ದ ಅಲ್ಪ ಸ್ವಲ್ಪ ಹಿಂಜರಿಕೆಯೂ ದೂರವಾಯಿತು. ಮಕ್ಕಳಿಗೆ ಮನೆ ಪಾಠ ಹೇಳಿಕೊಡುತ್ತಾ ಕುಳಿತಿದ್ದವರು ನನ್ನನ್ನು ಮಾತನಾಡಿಸುವುದನ್ನು ಕುಳಿತು ನೋಡುತ್ತಿದ್ದ ಮಕ್ಕಳಿಗೆ ನನ್ನ ಪರಿಚಯ ಮಾಡಿಕೊಟ್ಟರು ಮತ್ತು ನನಗೆ ಕಾಫಿ ತರಿಸಿ ಕೊಟ್ಟರು. ಅದನ್ನು ಕುಡಿಯುತ್ತಾ ನನ್ನ ಸಂದರ್ಶನದ ಪ್ರಶ್ನೆಗಳನ್ನು ಕೇಳುವ ಬಗ್ಗೆ ತಿಳಿಸುತ್ತಾ ಆರಂಭಿಸಿದೆ. ಈ ಸುಮಧುರ ಸಂಜೆಯ ವಾತಾವರಣ ನನ್ನನ್ನು ಖುಷಿಯಾಗಿರುವಂತೆ ಪ್ರಚೋದಿಸುತ್ತಿದೆ ಅನಿಸುತ್ತಿತ್ತು. ಅವರ ಅನುಮತಿಯನ್ನು ಪಡೆದು ಪ್ರಶ್ನೆಗಳನ್ನು ಆರಂಭಿಸಿದೆ.
- ಸರ್ ತಮ್ಮ ಪೂರ್ತಿ ಹೆಸರೇನು? ನೀವು ಮೂಲತಃ ಯಾವ ಊರಿನವರು?
ನನ್ನ ಹೆಸರು ಚಂದ್ರು ಪಿ ಆದರೆ ನಾನು ಸಾಹಿತ್ಯ ಕ್ಷೇತ್ರಕ್ಕೆ ಬಂದ ನಂತರ ಚಂದ್ರು ಪಿ ಹಾಸನ್ ಎಂಬುದು ಅಂಕಿತನಾಮವಾಗಿದೆ. ನಾನು ಹಾಸನ ಜಿಲ್ಲೆ ಆಲೂರು ತಾಲೂಕಿನ ಬಲ್ಲೂರು ಪುರ ಎಂಬ ಪುಟ್ಟ ಗ್ರಾಮದ ಪುಟ್ಟೇಗೌಡ ಮತ್ತು ಮಣಿ ಕೃಷಿಕ ದಂಪತಿಗಳ ದ್ವಿತೀಯ ಪುತ್ರ
- ನಿಮ್ಮ ಬಾಲ್ಯ , ಶಿಕ್ಷಣ ಮತ್ತು ವೃತ್ತಿಯ ಬಗ್ಗೆ ತಿಳಿಸಿ ಕೊಡುವಿರಾ?
ನನ್ನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಊರಿನ ಹತ್ತಿರದ ಮಗ್ಗೆ ಎಂಬ ಹಳ್ಳಿಯಲ್ಲಿ ಮುಗಿಸಿದೆ. ಪದವಿಪೂರ್ವ ಶಿಕ್ಷಣವು ಸರ್ಕಾರಿ ಪದವಿಪೂರ್ವ ಕಾಲೇಜು ಆಲೂರು ಮತ್ತು ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಬಿಡಿ ಅರಸೀಕೆರೆಯಲ್ಲಿ ಮತ್ತು ಸ್ನಾನತಕೋತ್ತರ ಪದವಿಯನ್ನು ಹಾಸನದಲ್ಲಿ ಮುಗಿಸಿದೆ. ಸಾಮಾನ್ಯ ಬಡ ವರ್ಗದ ಕುಟುಂಬದಿಂದ ಬಂದಿರುವುದರಿಂದ ಹೆಚ್ಚು ಓದುವ ಅಭಿಲಾಷೆ ಇದ್ದರೂ ಅವಕಾಶ ಸಿಗಲಿಲ್ಲ. ಈಗ ಪ್ರಸ್ತುತದಲ್ಲಿ ನಮ್ಮ ತಾಲೂಕಿನ ಖಾಸಗಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕನಾಗಿ ಸುಮಾರು 18 ವರ್ಷಗಳಿಂದ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದ್ದೇನೆ. ಬರವಣಿಗೆ ಮತ್ತು ಸಂಗೀತ ನನ್ನ ಅಚ್ಚುಮೆಚ್ಚಿನ ವಿಷಯಗಳಾಗಿವೆ.
- ನೀವು ವಿಜ್ಞಾನ ವಿದ್ಯಾರ್ಥಿ ಗಣಿತ ಶಿಕ್ಷಕರು ಆಗಿದ್ದರೂ ಕನ್ನಡದ ಮೇಲೆ ಆಸಕ್ತಿ ಮತ್ತು ಸ್ಪೂರ್ತಿ ಹೇಗೆ ಸರ್?
ಪ್ರೌಢ ಶಾಲೆಯಲ್ಲಿ ಓದುತ್ತಿದ್ದಾಗ ಕೆಲವು ಹಾಡುಗಳ ರಿಮೇಕ್ ಮಾಡುತ್ತಿದ್ದೆ. ಇನ್ನು ಪಿಯುಸಿ ಬಂದಾಗ ವಿಜ್ಞಾನ ಭೀತಿ ಎಲ್ಲ ಮರೆಸಿತು. ನಂತರದಲ್ಲಿ ಬಿಎಸ್ಸಿ ಪದವಿಯಲ್ಲಿ ನನ್ನ ಕನ್ನಡದ ಉಪನ್ಯಾಸಕರಾದ ಪ್ರೊಫೆಸರ್ ಸುಲೋಚನಾ ಮೇಡಂ ರವರು ಉಪಯೋಗಿಸುತ್ತಿದ್ದ ಶಬ್ದ ವಾಕ್ಯ ರಚನೆ ನನ್ನಲ್ಲಿ ಕವಿ ಪ್ರೇರಣೆಯಾಯಿತು. ಮುಂದುವರೆದಂತೆ ಶಿಕ್ಷಕನಾಗಿ ಶಾಲೆಗೆ ಬಂದಾಗ, ಕಾರ್ಯಕ್ರಮಗಳಿಗೆ ಮುಂದಾಳತ್ವ ನನಗೆ ಜಾಸ್ತಿ ಸಿಗುತ್ತಿತ್ತು. ಅಲ್ಲಿ ಮಕ್ಕಳಿಗೆ ನಾಟಕ ಕಲಿಸುವುದು ಹಾಡುಗಳು ಕಲಿಸುವುದು ಕಾರ್ಯಕ್ರಮದ ನಿರೂಪಣೆ ಇವು ನನ್ನಲ್ಲಿ ಕನ್ನಡದ ಆಸಕ್ತಿ ಹೆಚ್ಚಿಸುತ್ತಾ ಕವಿತೆ, ಲೇಖನ, ಮತ್ತು ಪ್ರಬಂಧಗಳ ರಚನೆಗೆ ಪ್ರೇರೇಪಣೆ ಅಂತ ಹೇಳಬಹುದು.
- ಸರ್ ತಮ್ಮ ಸಾಹಿತ್ಯಕ್ಕೆ ವಿಷಯ ಬಗ್ಗೆ ಸ್ವಲ್ಪ ತಿಳಿಸುವಿರಾ?
ಬಿಡುವಿನ ವೇಳೆಯಲ್ಲಿ ಬರೆದ ಕವಿತೆಗಳನ್ನು ವಾಟ್ಸಾಪ್ ಗುಂಪುಗಳಿಗೆ ಮೊದಲು ಕಳಿಸುತ್ತಿದ್ದೆ . ಅಲ್ಲಿ ಸ್ನೇಹಿತರು ವಿಮರ್ಶೆ ಮಾಡುತ್ತಾ ಕಮೆಂಟ್ ಗಳನ್ನು ಹಾಕುತ್ತಿದ್ದರು. ಕರೋನ ಸಮಯದಲ್ಲಿ ಬಿಡುವಿನ ವೇಳೆಯಲ್ಲಿ ಕರೋನ ಅಲೆಗೆ ಒಂದು ರೀತಿಯಲ್ಲಿ ಮಾನವ ಕಾರಣ ಆಗಿದ್ದಾನೆ. ಅವನ ಕೆಲವು ವೈಜ್ಞಾನಿಕತೆಯಲ್ಲಿ ಮೂಡಿದ ಅನಾಗರಿಕ ಚಟುವಟಿಕೆಗಳಿಂದಾಗಿ ಈ ರೀತಿಯ ರೋಗಾಣುಗಳ ಉದ್ಭವ ಈ ಪ್ರಕೃತಿಯಲ್ಲಿ ಆಗುತ್ತಿದೆ ಎಂಬ ಸಾರಾಂಶವನ್ನು ತುಂಬಿದ ಕವಿತೆಯನ್ನು ಕರೋನ ನೀ ಬರಲು ಕಾರಣ ಇವನೇನಾ? ಎಂಬ ಶೀರ್ಷಿಕೆ ಅಡಿ ಬರೆದಿದ್ದ ಕವನವನ್ನು ಓದಿ ಹಾಸನದ ಲೇಖಕಿ ವಾಣಿ ಮಹೇಶ್ ಪತ್ರಿಕೆಗೆ ಕಳಿಸಿದರು. ಮತ್ತು ಅದೇ ಸಮಯದಲ್ಲಿ ಶೈಲಜಾ ಹಾಸನ್ ರವರು ಬರೆದಿರುವ ಇಳಕಾದಂಬರಿಯ ವಿಮರ್ಶಾಲೆ ಕಣವನ್ನು ಸಹ ಪತ್ರಿಕೆಗೆ ಕಳಿಸಿದರು. ನಂತರ 200 ಕ್ಕೂ ಹೆಚ್ಚು ಕವನಗಳು, ನೂರಕ್ಕೂ ಹೆಚ್ಚು ಲೇಖನಗಳು, ಪ್ರಬಂಧ, ಪ್ರವಾಸ ಲೇಖನ, ನಾಟಕ, ಕಥೆ, ಸಣ್ಣ ಕಥೆ ಮತ್ತು ನ್ಯಾನೋ ಕಥೆ ಹೀಗೆ ಹಲವಾರು ಬರಹಗಳು ಪತ್ರಿಕೆಯಲ್ಲಿ, ಮ್ಯಾಕ್ಸಿನ್ ಗಳಲ್ಲಿ ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ, ಮ್ಯಾಕ್ಸಿನ್‌ಗಳಲ್ಲಿ ಪ್ರಕಟಗೊಂಡವು. ಈಗ ಒಂದು ಕಾದಂಬರಿಯನ್ನು ಹೊರ ತರಬೇಕೆಂದು ಅಭಿಲಾಷೆ ಇಟ್ಕೊಂಡು ಅದರ ತಯಾರಿಯಲ್ಲಿದ್ದೇನೆ.
- ಸರ್ ತಮಗೆ ಲಭಿಸಿದ ಪ್ರಶಸ್ತಿಗಳ ಬಗ್ಗೆ ತಿಳಿಸುವಿರಾ?
ಕರೋನಾ ಅಲೆಯ ಸಮಯದಲ್ಲಿ ಹಲವಾರು ಕನ್ನಡ ಸಂಘಗಳಿಂದ ಅಂತರ್ಜಾಲ ಕವನ ಸ್ಪರ್ಧೆಗಳು ನಡೆಯುತ್ತಿದ್ದವು. ಹೀಗೆ ಒಮ್ಮೆ ಹಸಿವು ವಿಷಯದಡಿ ಕವಿತೆ ಬರೆಯುವ ಅವಕಾಶ ಸಿಕ್ಕಿತು ಆ ಸಮಯದಲ್ಲಿ ಹೆಣ್ಣಿಗೆ ನಡೆಯುತ್ತಿದ್ದ ದೌರ್ಜನ್ಯ, ಅತ್ಯಾಚಾರ ಇದರ ಬಗ್ಗೆ ಏನಾದರೂ ಬರೆಯಬೇಕೆಂದು ಯೋಚಿಸಿದೆ. ನಂತರ ಕಾಮದ ಹಸಿವು ಎಂಬ ವಿಷಯವನ್ನು ಇಟ್ಟುಕೊಂಡು ರೊಕ್ಕದಿ ದಕ್ಕದ ಒಡವೆಯವಳು ಎಂಬ ಶೀರ್ಷಿಕೆಡಿ 20 ಸಾಲುಗಳ ಕವಿತೆ ರಚಿಸಿ ಕೊನೆಯ ಕ್ಷಣದಲ್ಲಿ ಕಳಿಸಿದೆ. ಅದು ಆಯ್ಕೆಯಾಗಿ 2020 ರಲ್ಲಿ ರಾಜ್ಯಮಟ್ಟದ ಸಾಹಿತ್ಯಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಮತ್ತೊಮ್ಮೆ ಮನೋವೈಜ್ಞಾನಿಕ ಕಥಾ ಸ್ಪರ್ಧೆಯಲ್ಲಿ ಅಶೋಕ ಪೈ ಸ್ಮರಣ ಪ್ರಶಸ್ತಿ ಲಭಿಸಿತು ಪ್ರಸ್ತುತ ನವೆಂಬರ್ 2024ರಲ್ಲಿ ತಾಲೂಕು ವತಿಯಿಂದ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಇದೇ ರೀತಿ ಇನ್ನೂ ಹಲವಾರು ಸಂಘ-ಸಂಸ್ಥೆಗಳಿಂದ ಗೌರವ ಸನ್ಮಾನಗಳು ಲಭಿಸಿವೆ.
- ಸರ್ ನಿಮಗೆ ಇಷ್ಟವಾದ ಒಂದು ಕವನವನ್ನು ಓದುವಿರಾ?
ಅಗತ್ಯವಾಗಿ. ಇದು ನನಗೆ ಅತ್ಯಂತ ಇಷ್ಟವಾದ ಕವಿತೆ
ಶೀರ್ಷಿಕೆ – ಚುಕ್ಕಾಣಿ ಬಯಸಲಿಲ್ಲ
ಅರಸಲಿಲ್ಲ ಅರಸನಾಗಲು
ಕಿರೀಟದಂತೆ ಶಿರವೇರಲು
ಬಯಸಲಿಲ್ಲ ಗುಲಾಮನಾಗಲು
ಯಾರ ಕಾಲಡಿಯ ಧೂಳಾಗಲು
ಮುಚ್ಚಿಡಲಿಲ್ಲ ಮನದೊಳಗೆ
ಯಾವ ಅಧಿಕಾರದ ಆಸೆ
ಬಚ್ಚಿಟ್ಟಿದ್ದೊಂದೇ ಮನಮೆಚ್ಚಿಸೋ
ಹರ್ಷಿಸೋ ಸಾಕಾರದ ಆಸೆ
ಯಾರ ಮುಡಿ ಏರ ಬಯಸಲಿಲ್ಲ
ಮುಡಿಪಾಗಿಸಿ ಯಾರನ್ನು ಕಾಯಲಿಲ್ಲ
ದೇಹವ ಮಡಿ ಮಾಡಿಕೊಳ್ಳಲಿಲ್ಲ
ವಡಬಾನದೊಳ್ ಯಾರನ್ನು ಸುಡಲಿಲ್ಲ
ಬಯಸಿದ್ದೊಂದೆ ನನ್ತನದ
ಕಂಪನ್ನು ಚಿಮ್ಮಿಸಲೆಂದೇ,
ಸುಕೋಮಲ ಕಾಂತಿಯ ಚಿತ್ತದಿ
ಧನಾತ್ಮಕತೆಯ ಅರುಹಲೆಂದೇ
ಬಯಸಿದ್ದೊಂದು ಜನ್ಮವನ್ನು ಅದು
ಸ್ವರ್ಗದಲ್ಲೊ ನರಕದಲ್ಲೋ ಅರಿಯೇ
ಜನ್ಮಕ್ಕೆ ನಾ ಶುಭಾಶಯವಾಗಬಲ್ಲೆ
ಮರಣದಿ ಮಸಣದ ಅಲಂಕಾರವಾಗವಲ್ಲೇ
ಅರಿತಿಲ್ಲ ಯಾರ ಬಾಳಿನ ಹೂರಣ ತೋರಣವೂ?
ತಂದ್ರೆಯ ವೀರಭದ್ರೇಶ್ವರನ ಮುಡಿ ಸೇರುವ ಆಸೆ
ಚರಣಗಳು ಸೋಕಿದರೆ ಪಾವನವೂ ಅಂದು
ಕಾರಣ ಜನಿಸಿದೆ ನಾನೊಂದು ಹೂವು
ಚಂದ್ರು ಪಿ ಹಾಸನ್
- ಸರ್ ನೀವು ಒಬ್ಬರು ಕವಿಯಾಗಿ , ಸಾಹಿತಿಯಾಗಿ ನಮ್ಮಂತಹ ವಿದ್ಯಾರ್ಥಿಗಳಿಗೆ, ಯುವ ಜನತೆಗೆ ಏನನ್ನು ಹೇಳೋಕೆ ಇಷ್ಟಪಡ್ತೀರ? ಸಾಹಿತ್ಯ ಚಳುವಳಿಯ ಬಗ್ಗೆ ಒಂದೆರಡು ಮಾತು….
ನಾನು ಒಬ್ಬ ಅಲ್ಪಜ್ಞ, ಸಾಹಿತ್ಯ ಲೋಕದ ಪ್ರಶಿಕ್ಷಣಾರ್ಥಿ ಆಗಿರುವ ನಾನು ಈಗ ಕಲಿಯುತ್ತಿರುವಾಗ ಏನು ಹೇಳಲು ಸಾಧ್ಯ? ಜೀವನದ ಪುಟ್ಟ ಅನುಭವಗಳು ಮತ್ತು ಸಾಹಿತ್ಯಿಕ ಚಟುವಟಿಕೆಗಳು ನನಗೆ ಹೊಸ ಹೊಸ ಜೀವನ ಪಾಠವನ್ನು ಕಲಿಸುತ್ತಿದೆ. ನನಗೆ ಸಾಹಿತ್ಯ ಚಳುವಳಿ ಅನ್ನೋದಕ್ಕಿಂತ ಅನುಭವಗಳು ಶಾಶ್ವತ ಅವು ಬರವಣಿಗೆ ಮೂಲಕ ಇರುವುದರಿಂದ ಮುಂದಿನ ಪೀಳಿಗೆಗೆ ದಾರಿದೀಪವಾಗಬಹುದು. ಹೀಗೆ ನಮಗೆ ನಿಮಗೆ ತಿಳಿದಿರುವ ಹಾಗೆ ಹಿರಿಯ ವಿದ್ವಾಂಸರು ರಚಿಸಿರುವ ರಾಮಾಯಣದ ಸನ್ನಿವೇಶಗಳು ಹಾಗೂ ಮಹಾಭಾರತದ ಸನ್ನಿವೇಶಗಳು ನಮಗೆ ಪ್ರೀತಿ, ಜವಾಬ್ದಾರಿ ಮತ್ತು ಜೀವನದ ಸತ್ಯದ ಕಡೆಗೆ ಎಚ್ಚರಿಸುತ್ತದೆ. ಮುಂದಿನ ಸಾಮಾಜಿಕ ಜೀವನಕ್ಕೆ ಬೆಳಕಾಕುತ್ತದೆ ಆದ್ದರಿಂದ ಅನುಭವಕ್ಕೆ ಬೆಲೆ ಖಂಡಿತ ಸಿಗಬೇಕು. ಅದನ್ನು ಯುವ ಜನತೆ ಅರ್ಥಮಾಡಿಕೊಂಡು ಹಳೇ ಬೇರಿಗೆ ಹೊಸ ಚಿಗುರು ಅನ್ನುವಂತೆ ಮುಂದುವರೆದರೆ ಒಳ್ಳೆಯ ಮಾರ್ಗದರ್ಶನವು ಸಿಗುವುದರ ಜೊತೆಗೆ ಮುಂದಿನ ಪೀಳಿಗೆಗೆ ಅದನ್ನು ಪರಿಚಯಿಸಿ ಒಂದು ಆರೋಗ್ಯಾತ್ಮಕ ಪರಿಸರವನ್ನು ಸೃಷ್ಟಿ ಮಾಡಬಹುದಾಗಿದೆ.
ಸರ್ ನಿಮ್ಮಿಂದ ಹಲವು ವಿಚಾರಗಳನ್ನು ತಿಳಿಯುವಂತಹ ಅವಕಾಶ ಆಯ್ತು. ನನ್ನ ಮೊದಲ ಸಂದರ್ಶನವು ನಿರ್ಭೀತಿಯಿಂದ ಮುಗಿಸಿದಂತಾಯಿತು. ನಿಮ್ಮ ಪರಿಚಯ ನಿಮ್ಮೊಂದಿಗಿನ ಮಾತುಕತೆ ತುಂಬಾ ಖುಷಿಯಾಯಿತು. ಎಂದು ಹೇಳಿ ದೇಸೀ ಶಿಖರ ಸೂರ್ಯ ಚಂದ್ರಶೇಖರ ಕಂಬಾರ ಎಂಬ ಪುಸ್ತಕವನ್ನು ಗೌರವ ಪೂರಕವಾಗಿ ನೀಡಿ ಅಲ್ಲಿಂದ ಹೊರೆಟೆನು. ಚಂದ್ರು ಪಿ ಹಾಸನ್ ಸರ್ ಅವರೊಂದಿಗೆ ಮೊದಲ ಸಂದರ್ಶನವು ಒಂದು ಅಚ್ಚಳಿಯದ ಅನುಭವವನ್ನು ತಂದು ಕೊಟ್ಟಂತಾಯಿತು. ನಂತರ ಅಲ್ಲಿದ್ದ ಮಕ್ಕಳಿಗೆ ಖುಷಿಯಿಂದ ವಿದಾಯ ಹೇಳಿ ಸರ್ ಗೆ ನಮಸ್ಕರಿಸಿ ಹೊರಟೆ. ಒಟ್ಟಿನಲ್ಲಿ ಹೇಳುವುದಾದರೆ ಇದೊಂದು ಮರೆಯಲಾಗದ ಮೊದಲ ಅನುಭವ.
————–ಸುಜನ್ ದೇವರಾಜ್, ದ್ವೀತಿಯ ಬಿ ಎ ಜರ್ನಲಿಸಂ ವಿದ್ಯಾರ್ಥಿ, ಕಲಾ ಕಾಲೇಜ್ ಹಾಸನ