ಆಲೂರು:ನಮ್ಮ ರೈತರೂ ವಿದೇಶಿ ಗುಣಮಟ್ಟದ ದಾಳಿಂಬೆ ಬೆಳೆಯಲು ಮುಂದಾದರೆ ಹೆಚ್ಚು ಹೆಚ್ಚು ಆದಾಯ ಗಳಿಸಬಹುದು ಎಂದು ನಿವೃತ್ತ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿದ್ದ ಐಪಿಎಸ್ ಅಧಿಕಾರಿ ಎಸ್.ಎನ್. ಸಿದ್ದರಾಮಯ್ಯ ಸಲಹೆ ನೀಡಿದರು.
ದಕ್ಷಿಣ ಭಾಗ ದಾಳಿಂಬೆ ಬೆಳೆಗಾರರ ರೈತೋತ್ಪಾದಕ ಸಂಸ್ಥೆ (ಎಸ್‌ಆರ್‌ಪಿಜಿ) ಹಾಗೂ ಮಹಾರಾಷ್ಟ್ರದ ಸೊಲ್ಲಾಪುರದ ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ತಾಲೂಕಿನ ರೋಸೆಟ್ಟ ರೆಸಾರ್ಟ್ ನಲ್ಲಿ ಹಮ್ಮಿಕೊಂಡಿದ್ದ ದಾಳಿಂಬೆ ತಾಂತ್ರಿಕ ತಿಳುವಳಿಕೆ ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.
ರಫ್ತು ಮಾಡುವ ಗುಣಮಟ್ಟದ ದಾಳಿಂಬೆ ಬೆಳೆಯಲು ಅಂತರರಾಷ್ಟ್ರೀಯ ಗುಣಮಟ್ಟದ ಔಷಧಿಗಳನ್ನೇ ನಮ್ಮ ರೈತರೂ ಸಿಂಪಡಿಸಬೇಕು. ಹಾಗಾದಾಗ ನಮ್ಮ ಫಸಲಿಗೂ ಎಲ್ಲೆಡೆ ಬೇಡಿಕೆ ಹೆಚ್ಚಾಗಿ ರಫ್ತು ಪ್ರಮಾಣವನ್ನೂ ಹೆಚ್ಚು ಮಾಡಿ, ಆದಾಯವೂ ದ್ವಿಗುಣ ಆಗಲಿದೆ. ಅದಕ್ಕಾಗಿ ಬೇಕಾದ ತಾಂತ್ರಿಕತೆಯನ್ನೂ ಮೈಗೂಡಿಸಿಕೊಳ್ಳಬೇಕು ಎಂದು ನುಡಿದರು.
ಅನೇಕ ಸಂದರ್ಭಗಳಲ್ಲಿ ದಾಳಿಂಬೆ ಬೆಲೆಯಲ್ಲಿ ಏರಿಳಿಕೆ ಆಗುತ್ತಿದ್ದು, ಇದರಿಂದ ರೈತರಿಗಾಗುವ ನಷ್ಟ ತಪ್ಪಿಸಲು ಇದಕ್ಕಾಗಿ ಇರುವ ಸಹಕಾರ ಸಂಘದಿoದಲೇ ಹಣ್ಣು ಖರೀದಿ ರಫ್ತು ಮಾಡುವಂತೆ ತಿಳಿ ಹೇಳಿದರು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ಎಸ್‌ಆರ್‌ಪಿಜಿ ಅಧ್ಯಕ್ಷ ಯೋಗೀಶ್ವರ ಹೆಚ್.ಆರ್,ಕಳೆದ ಮೂರು ವರ್ಷಗಳ ಹಿಂದೆ ಸ್ಥಾಪಿಸಿದ ನಮ್ಮ ಸಂಸ್ಥೆ ಅತ್ಯಲ್ಪ ಅವಧಿಯಲ್ಲಿ ಒಂದೂವರೆ ಕೋಟಿ ಲಾಭಗಳಿಸಿದೆ. 18 ಲಕ್ಷ ತೆರಿಗೆ ಪಾವತಿ ಮಾಡಿದೆ. ಈ ವರ್ಷದಿಂದ ಸಂಸ್ಥೆಗೆ ಬಂದ ಲಾಭಾಂಶವನ್ನು ಷೇರುದಾರರಿಗೆ ಶೇ.25 ರಷ್ಟು ಹಂಚಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಪ್ರಕಟಿಸಿದರು.ಲಾಭಾಂಶ ಹಂಚಿಕೆ ನಿರ್ಧಾರ ನಮ್ಮದೇ ಮೊದಲು, ಬೇರೆ ಯಾವ ಸಹಕಾರ ಸಂಘಗಳೂ ಹೀಗೆ ಮಾಡುತ್ತಿಲ್ಲ ಎಂದರು.
ದಾಳಿoಬೆ ಬೆಳೆಗಾರರು ಆರ್ಥಿಕವಾಗಿ ಸದೃಢರಾಗುವುದರ ಜೊತೆಗೆ ಇದು ವಾಣಿಜ್ಯ ಬೆಳೆಯಾದ್ದರಿಂದ ತಾಂತ್ರಿಕ ತಿಳಿವಳಿಕೆಯನ್ನೂ ಹೊಂದುವುದು ಅನಿವಾರ್ಯ. ಹೀಗಿದ್ದಾಗ ಸರ್ವಾಂಗೀಣ ಅಭಿವೃದ್ಧಿ ಹೊಂದಬಹುದು ಎಂದರು.
ಈ ಕಾರ್ಯಾಗಾರದ ಉದ್ದೇಶ ವಿದೇಶಕ್ಕೆ ರಫ್ತುಮಾಡುವ ಗುಣಮಟ್ಟಣ ಹಣ್ಣು ಬೆಳೆಯಲು ನಮ್ಮ ರೈತರನ್ನು ಪ್ರೇರೇಪಿಸುವು ದಾಗಿದೆ.ಯೂರೋಪ್, ಅಮೆರಿಕ ಗುಣಮಟ್ಟದ ಹಣ್ಣನ್ನು ನಮ್ಮಲ್ಲೂ ಬೆಳೆಯುವಂತಾಗಬೇಕು ಎಂಬ ಕಾರಣಕ್ಕೆ, ಅದಕ್ಕೆ ಪೂರಕವಾದ ಕಾರ್ಯಕ್ರಮ, ಕಾರ್ಯಾಗಾರಗಳನ್ನು ನಮ್ಮ ಸಂಘದಿoದ ಆಯೋಜನೆ ಮಾಡಲಾಗುತ್ತಿದೆ. ರೈತರೂ ಜ್ಞಾನಸಂಪಾದನೆ ಮಾಡಿಕೊಳ್ಳಬೇಕು.ಆ ಮೂಲಕ ಗುಣಮಟ್ಟದ ಹಣ್ಣು ಉತ್ಪಾದಿಸಬೇಕು ಎಂಬುದು ನಮ್ಮ ಸದಾಶಯ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಗುಣಮಟ್ಟದ ಔಷಧ ಜೊತೆಗೆ ಅಧಿಕ ರಸಗೊಬ್ಬರ ಬಳಕೆ ಮಾಡದೆ,ಒಳ್ಳೆಯ ಹಣ್ಣುಗಳನ್ನು ಬೆಳೆಯುವಂತೆ ಸಲಹೆ ನೀಡಿದರು.
ನಿರ್ದೇಶ ಮಂಜುನಾಥ್ ಎಸ್.ಎಂ. ಪ್ರಾಸ್ತಾವಿಕ ನುಡಿಗಳನ್ನಾಡಿ, ರೈತರಿಗೆ ತಾಂತ್ರಿಕ ಮಾಹಿತಿ ನೀಡುವುದು ಕಾರ್ಯಾಗಾರದ ಉದ್ದೇಶ. ಮುಂದಿನ ದಿನಗಳಲ್ಲಿ ಅರಸೀಕೆರೆ ತಾಲೂಕು ಬಾಣಾವರದಲ್ಲಿರುವ ನಮ್ಮ ಎಸ್‌ಆರ್‌ಪಿಜಿ ಸಂಘಕ್ಕೆ ಸ್ವಂತ ಕಟ್ಟಡ ಹೊಂದುವ ಗುರಿ ಹೊಂದಲಾಗಿದೆ ಎಂದರು.
ಮತ್ತೊಬ್ಬ ನಿರ್ದೇಶಕ ಯತೀಶ್ ಎಸ್. ಸ್ವಾಗತಿಸಿದರು.ಸಂಸ್ಥೆಯ ಸಿಇಒ ಪ್ರಿಯಾ ವಾರ್ಷಿಕ ವರದಿ ಮಂಡಿಸಿದರು.
ಬಳಿಕ ಮಹಾರಾಷ್ಟ್ರದ ಸೊಲ್ಲಾಪುರದ ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಕೇಂದ್ರದ ವಿವಿಧ ರೋಗ, ವಿಷಯಗಳ ಹಿರಿಯ ವಿಜ್ಞಾನಿಗಳಾದ ಡಾ.ಮಂಜುನಾಥ್ ಎನ್., ಡಾ.ನೀಲೇಶ್ ಗಾಯಕ್ವಾಡ್, ಡಾ.ಮಲ್ಲಿಕಾರ್ಜುನ ಎಂ.ಹೆಚ್ ಮತ್ತು ಡಾ.ಶಿಲ್ಪಾ ಪರಶುರಾಮ್ ತಾಂತ್ರಿಕ ಉಪನ್ಯಾಸ ಮೂಲಕ ದಾಳಿಂಬೆ ಬೆಳೆಗಾರರ ಜ್ಞಾನ ಸಂಪಾದನೆ, ನೈಪುಣ್ಯತೆಗೆ ಪೂರಕವಾಗುವ ಅಂಶಗಳನ್ನು ವಿವರಿಸಿ ಹೇಳಿದರು.
ಇದೇ ವೇಳೆ ಕಡಿಮೆ ದಾಳಿಂಬೆ ಗಿಡ ಬೆಳೆದು ಹೆಚ್ಚು ಇಳುವರಿ ತೆಗೆಯುತ್ತಿರುವ ರಾಜ್ಯದ ವಿವಿಧ ಜಿಲ್ಲೆಗಳ ಐವರು ಪ್ರಗತಿಪರ ರೈತರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಾಗಾರದಲ್ಲಿ ವಿವಿಧ ಕಂಪನಿಗಳವರೂ ಭಾಗಿಯಾಗಿ ರೈತರಿಗೆ ಪೂರಕವಾದ ಗೊಬ್ಬರ, ಬಿತ್ತನೆ ಬೀಜ, ಔಷಧಗಳ ಪ್ರದರ್ಶನ ಮಾಡಿದರು.
ನಿರ್ದೇಶಕರಾದ ದಿನೇಶ್ ಟಿ.ಎಸ್,ನಂದಕುಮಾರ್ ಟಿ.ಸಿ., ಯತೀಶ್ ಜಿ.ಎಸ್.,ಗೋವರ್ಧನ್, ಶ್ಯಾಮಲಾ ಬಿ.ಕೆ., ಸಚಿನ್ ಬಿ.ಸಿ ಮತ್ತು ಸಚ್ಚಿದಾನಂದ ಬಿ.ಸಿ.ಇದ್ದರು.