ಆಲೂರು:ತಾಲೂಕಿಗೆ ಲೋಕಾಯುಕ್ತರ ಭೇಟಿ-ಅಧಿಕಾರಿಗಳ ವಿರುದ್ಧ ಸಾರ್ವಜನಿಕರಿಂದ ದೂರಿನ ಸುರಿಮಳೆ-ಕಠಿಣ ಕ್ರಮದ ಎಚ್ಚರಿಕೆ ನೀಡಿದ ಎಸ್.ಪಿ ಬಿ.ಎನ್ ನಂದಿನಿ

ಆಲೂರು:ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಹಾಸನ ಜಿಲ್ಲಾ ಲೋಕಾಯುಕ್ತ ಎಸ್.ಪಿ ಬಿ.ಎನ್ ನಂದಿನಿ ನೇತತ್ವದಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಿ, ಅಹವಾಲು ಸ್ವೀಕರಿಸಲಾಯಿತು.

ಲೋಕಾಯುಕ್ತರ ಭೇಟಿ ವಿಷಯ ತಿಳಿದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಾಲೂಕು ಕೇಂದ್ರ ಹಾಗೂ ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳ ಅನಗತ್ಯ ವಿಳಂಬ, ಲಂಚದ ಹಣದ ಬೇಡಿಕೆ ಸೇರಿದಂತೆ ಮುಂತಾದ ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ದೂರು ನೀಡಿದರು.

ಅದರಲ್ಲೂ ಹೆಚ್ಚಾಗಿ ತಾಲೂಕು ಸರ್ಕಾರಿ ಆಸ್ಪತ್ರೆ ಹಾಗೂ ಕಂದಾಯ ಇಲಾಖೆಯಲ್ಲಿ ಆಗುತ್ತಿರುವ ತೊಂದರೆ ಹಾಗೂ ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಲೋಕಾಯುಕ್ತ ಅಧಿಕಾರಿಗಳನ್ನು ಒತ್ತಾಯಿಸಿದರು.

ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಜಿಲ್ಲಾ ಲೋಕಾಯುಕ್ತ ಎಸ್ಪಿ ಬಿ. ಎನ್ ನಂದಿನಿ, ಸಾರ್ವಜನಿಕರ ಕೆಲಸಕ್ಕೆ ಅನಗತ್ಯ ವಿಳಂಬ ಮಾಡದೇ ನಿಗದಿತ ಅವಧಿಯಲ್ಲಿ ಮುಗಿಸಿಕೊಡಬೇಕು. ಕರ್ಮಚಾರಿಗಳು ಮತ್ತು ಅಧಿಕಾರಿಗಳು ಯಾವುದೇ ಅವ್ಯವಹಾರಕ್ಕೆ ಆಸ್ಪದ ನೀಡದೆ ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಬೇಕು ತಾಕೀತು ಮಾಡಿದರು. ಜನರ ಕೆಲಸಕ್ಕೆ ವಿಳಂಬ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಸುಮಾರು 12 ಅರ್ಜಿಗಳು ಸ್ವೀಕೃತವಾದವು. ಅದರಲ್ಲಿ ಎರಡು ಅರ್ಜಿಗಳಿಗೆ ಸ್ಥಳದಲ್ಲಿ ಪರಿಹಾರ ಕಂಡುಕೊಡಲಾಯಿತು.

ಈ ಸಂದರ್ಭದಲ್ಲಿ ತಹಸಿಲ್ದಾರ್ ನಂದಕುಮಾರ್, ಗ್ರೇಡ್ 2 ತಹಶೀಲ್ದಾರ್ ಪೂರ್ಣಿಮಾ, ಹಾಸನ ಲೋಕಾಯುಕ್ತ ಇಲಾಖೆಯ ಇನ್ಸ್ಪೆಕ್ಟರ್ ಗಳಾದ ಬಾಲು, ಶಿಲ್ಪ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

———–—-ಧರ್ಶನ್ ಕೆರೇಹಳ್ಳಿ

Leave a Reply

Your email address will not be published. Required fields are marked *

× How can I help you?