ಆಲೂರು-ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ಐದಳ್ಳ ಕಾವಲು ಸ. ನಂ.1 ರಲ್ಲಿರುವ 2580 ಎಕರೆ ಭೂಮಿಯನ್ನು 800 ಜನ ರೈತರಿಗೆ ನೀಡುವಂತೆ ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು.ನಮ್ಮ ಮನವಿಗೆ ಸ್ಪಂದಿಸಿದ್ದ ಅವರುಗಳು ಭೂಮಿ ಹಂಚಿಕೆ ಮಾಡುವಂತೆ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದರು.ರೈತರಿಗೆ ಜಮೀನು ನೀಡಿರುವ ಸರಕಾರ ಇಲ್ಲಿಯವರೆಗೂ ದಾಖಲಾತಿಗಳ ನೀಡಿಲ್ಲ.ಹೀಗೆ ನಿರ್ಲಕ್ಷ್ಯ ಮುಂದುವರೆದರೆ ಬೇಲೂರು-ಚಿಕ್ಕಮಗಳೂರು ರಸ್ತೆ ತಡೆದು ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಕನಕಚೇನಹಳ್ಳಿ ಪಟೇಲ್ ಪ್ರಸನ್ನ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ನಾಯಕ ಪ್ರೊಫೆಸರ್ ಎಂ. ಡಿ.ನಂಜುಂಡಸ್ವಾಮಿ ಸ್ಥಾಪಿತ ರಾಷ್ಟ್ರೀಯ ಮಹತ್ವವಾದ ಬೃಹತ್ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಡೆಯುತ್ತಿರುವ ರೈತರ ಬ್ರಹತ್ ಪಾದಯಾತ್ರೆ ಆಲೂರು ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಅಧಿಕಾರಿಗಳು ಇದೆ ತಿಂಗಳ 21ರೊಳಗೆ ಭೂಮಿ ನೀಡಿದ ಎಲ್ಲಾ ರೈತರಿಗೆ ದಾಖಲಾತಿ ನೀಡಬೇಕು.ಇಲ್ಲವಾದಲ್ಲಿ ಪ್ರತಿಭಟನೆ ಎದುರಿಸಲು ಸಿದ್ಧರಾಗುವಂತೆ ಅವರು ಗಂಭೀರ ಎಚ್ಚರಿಕೆಯನ್ನು ನೀಡಿದರು.
ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲೆಯಾದ್ಯಂತ ಪಾದಯಾತ್ರೆ ನಡೆಸುತ್ತಿದ್ದು ಅರಸೀಕೆರೆಯಿಂದ ಪ್ರಾರಂಭವಾದ ನಮ್ಮ ಪಾದಯಾತ್ರೆ ಇಂದು ಆಲೂರಿಗೆ ಬಂದು ತಲುಪಿದೆ.ಆಯಾ ತಾಲೂಕಿನ,ಹೋಬಳಿಗಳ ರೈತರ ಬೇಡಿಕೆಗಳ ಪರವಾಗಿ ನಾವು ಪಾದಯಾತ್ರೆಯ ಸಂದರ್ಭದಲ್ಲಿ ಹೋರಾಟ ನಡೆಸುತ್ತಿದ್ದೇವೆ.ಇಲ್ಲಿಂದ ಸಕಲೇಶಪುರಕ್ಕೆ ಸಾಗಿ ಬೇಲೂರಿಗೆ ತಲುಪಲಿದ್ದೇವೆ ಎಂದರು.
ಸರಕಾರ ರೈತರ ಕೃಷಿ ಭೂಮಿಗೆ ಅವಶ್ಯವಿರುವ ರಸ ಗೊಬ್ಬರವನ್ನು ಕಡಿಮೆ ದರದಲ್ಲಿ ನೀಡಬೇಕು. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಬೇಕು. ಎಡೆಬಿಡದೆ ಸುರಿಯುತ್ತಿರುವ ಮಹಾಮಳೆಗೆ ರೈತರ ಬೆಳೆ ಸಂಪೂರ್ಣ ಹಾಳಾಗಿದೆ. ಸರ್ಕಾರ ಕೂಡಲೇ ಪರಿಹಾರ ಘೋಷಣೆ ಮಾಡಬೇಕು. ರೈತರ ಪಂಪ್ ಸೆಟ್ಟುಗಳಿಗೆ ಸಮರ್ಪಕ ವಿದ್ಯುತ್ ಒದಗಿಸಬೇಕು. ರೈತರು ತಮ್ಮ ಜಮೀನಿಗೆ ಹೋಗಲು ರಸ್ತೆ ಇಲ್ಲದೆ ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದ್ದು ಜಮೀನಿಗೆ ತೆರಳಲು ರಸ್ತೆ ಗುರುತಿಸಬೇಕು ಎಂದು ಕನಕಚೇನಹಳ್ಳಿ ಪಟೇಲ್ ಪ್ರಸನ್ನ ಕುಮಾರ್ ಮನವಿ ಮಾಡಿದರು.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ದಸ್ತಗಿರ್ ಮಾತನಾಡಿ, ಪ್ರಸ್ತುತ ವರ್ಷದಲ್ಲಿ ಮಳೆ ಎಡಬಿಡದೆ ಸುರಿಯುತ್ತಿರುವುದರಿಂದ ರೈತರು ಸಂಕಷ್ಟದಲ್ಲಿದ್ದಾರೆ.ನಮ್ಮ ಸಂಘಟನೆ ಈ ಆದರದ ಮೇಲೆ ಸುಮಾರು 40 ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ. ಸರ್ಕಾರ ಹಾಗೂ ಸರ್ಕಾರದ ಪ್ರತಿನಿಧಿಗಳು ಕೂಡಲೇ ನಮ್ಮ ಬೇಡಿಕೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಪಾದಯಾತ್ರೆಯಲ್ಲಿ ರೈತ ನಾಯಕ ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿ ಸ್ಥಾಪಿತ ರಾಷ್ಟ್ರೀಯ ಮಹತ್ವವಾದ ಬೃಹತ್ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ರಾಜ್ಯ ಉಪಾಧ್ಯಕ್ಷ ಬೋಜರಾಜ್,ರಾಜ್ಯ ಗೌರವಾಧ್ಯಕ್ಷ ನಿಂಗಪ್ಪ ಜವನಳ್ಳಿ,ಮಹಿಳಾ ಹೋರಾಟಗಾರ್ತಿ ನಂಜಮ್ಮ, ಜಿಲ್ಲಾ ಕಾರ್ಯಾಧ್ಯಕ್ಷ ಏಜಸ್ ಭಾಷಾ, ಜಿಲ್ಲಾ ಸಂಚಾಲಕ ಆಯುಷ್ ಭಾಷಾ, ಅಮ್ಜದ್ ಲಕ್ಷ್ಮೀಪತಿಯಪ್ಪ,ಹನುಮಂತ, ಕಾಂತಪ್ಪ, ಅಬ್ದುಲ್ ಕುಂಜಿ, ಮುಬಾರಕ್, ತಮಯಣ್ಣ,ಅಮ್ಜದ್, ಕಾಂತಣ್ಣ, ರೆಡ್ಡಿಯಪ್ಪ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.
————–ದರ್ಶನ್ ಕೆರೇಹಳ್ಳಿ