ಆಲೂರು-ಮತಕ್ಷೇತ್ರದ ಶಾಲೆಗಳ ದುಸ್ಥಿತಿ-ಅನುದಾನಕ್ಕೆ ನಾಳೆ ಸಿ ಎಂ ಬಳಿ ಮನವಿ-ಶಾಸಕ ಸಿಮೆಂಟ್ ಮಂಜು

ಆಲೂರು;ತನ್ನ ಮತಕ್ಷೇತ್ರದಲ್ಲಿ ಹಲವಾರು ಶಾಲೆಗಳ ಕಟ್ಟಡಗಳು ದುಸ್ಥಿತಿಗೆ ತಲುಪಿದ್ದು ಹೊಸ ಕಟ್ಟಡಗಳ ನಿರ್ಮಾಣಕ್ಕಾಗಿ ಅನುದಾನ ನೀಡುವಂತೆ ನಾಳೆ ಇಲ್ಲಿಗೆ ಆಗಮಿಸಲಿರುವ ಮುಖ್ಯಮಂತ್ರಿಗಳು ಹಾಗು ಉಪಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಶಿಕ್ಷಕರ ದಿನಾಚರಣೆ ಸಮಿತಿ ಆಲೂರು ಇವರ ವತಿಯಿಂದ ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಗಿಸಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣರವರ ಜನ್ಮ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನನ್ನ ಮತಕ್ಷೇತ್ರದ ಸರ್ಕಾರಿ ಶಾಲೆಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ.ಆ ಕಾರಣಕ್ಕೆ ಕೆಲವು ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ.ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಅವುಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡುವುದು ಜನಪ್ರತಿನಿಧಿಗಳಾದ ನಮ್ಮ ಕರ್ತವ್ಯ. ನಾಳೆ ಎತ್ತಿನಹೊಳೆ ಯೋಜನೆಯ ಉದ್ಘಾಟನೆಗೆ ಆಗಮಿಸುವ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಶೀಘ್ರ ಅನುದಾನಕ್ಕೆ ಕೋರಲಾಗುವುದು ಎಂದರು.

ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದ್ದು,ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು.ರಾಷ್ಟ್ರಾಭಿಮಾನ ಮೂಡಿಸುವ ಶಿಕ್ಷಣಕ್ಕೆ ಶಿಕ್ಷಕರು ಕಾರ್ಯೋನ್ಮುಖರಾಗಬೇಕು. ಶಿಸ್ತು,ವಿದ್ಯೆ,ವಿನಯ ಇವುಗಳು ಇಂದಿನ ವಿದ್ಯಾರ್ಥಿಗಳಲ್ಲಿ ಇರಬೇಕಾದ ಅತ್ಯಂತ ಮೌಲ್ಯಯುತ ಗುಣಗಳಾಗಿವೆ ಶಿಕ್ಷಕರಲ್ಲಿ ಕರ್ತವ್ಯ ಪ್ರಜ್ಞೆ ಇದ್ದರೆ ಶಿಕ್ಷಣ ಸುಧಾರಣೆಯಾಗುವುದು ಖಚಿತ.

ಮಕ್ಕಳ ಸಾಮರ್ಥ್ಯಕ್ಕನುಗುಣವಾಗಿ ಶಿಕ್ಷಕರು ಬೋಧಿಸಿದರೆ ಮಕ್ಕಳ ಕಲಿಕೆಯ ಗುಣಮಟ್ಟಕ್ಕೆ ಪೂರಕವಾಗುತ್ತದೆ.ಕೇವಲ ಶಿಕ್ಷಕರು ಪಾಠ ಹೇಳಿದರೆ ಸಾಲದು,ಪಾಲಕರೂ ಮಕ್ಕಳ ಕಲಿಕಾ ಮಟ್ಟವನ್ನು ಪರೀಕ್ಷಿಸುವ ಪ್ರಯತ್ನ ಮಾಡಿದಾಗ ಮಾತ್ರ ಪರಿಪೂರ್ಣ ವಿದ್ಯಾರ್ಥಿಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.

ಯಾವುದೇ ಒಬ್ಬ ವ್ಯಕ್ತಿ ದೊಡ್ಡ ಮಟ್ಟಕ್ಕೆ ಬೆಳೆಯಬೇಕಾದರೆ ಅದಕ್ಕೆ ಮುಖ್ಯ ಕಾರಣ ಶಿಕ್ಷಕರಾಗುತ್ತಾರೆ.ಶಿಕ್ಷಕರನ್ನು ನಾವು ಯಾವ ಸಂದರ್ಭದಲ್ಲಿಯೂ ಮರೆಯಬಾರದು.ಹಲವು ದಿನಗಳಿಂದ ಶಿಕ್ಷಕರ ಹಲವು ಬೇಡಿಕೆಗಳ ನನ್ನ ಗಮನಕ್ಕೆ ತಂದಿದ್ದೀರಿ.ವಿಧಾನಸಭಾ ಅಧಿವೇಶನದಲ್ಲಿ ತಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದೇನೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ ಮಾತನಾಡಿ ಸಮಾಜ ನಿರ್ಮಾಣದಲ್ಲಿ ಶಿಕ್ಷಕರು ಭದ್ರ ಬುನಾದಿ ಇದ್ದಂತೆ.ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಅವರನ್ನು ಈ ನಾಡಿನ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕ ಸಮುದಾಯದ ಮೇಲಿದೆ ಎಂದರು.

ಪ್ರಾಥಮಿಕ ಶಾಲಾ,ಪ್ರೌಢಶಾಲಾ,ಹಾಗೂ ಶಿಕ್ಷಣ ಇಲಾಖೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಹಾಗೂ ಮರಣ ಹೊಂದಿದ ನೌಕರರ ಕುಟುಂಬಸ್ಥರನ್ನ ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.

ಉಪನ್ಯಾಸಕಿ ಜಯಶೀಲ ಪ್ರಧಾನ ಭಾಷಣಕಾರರಾಗಿ ಮಾತನಾಡಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಾಹಿರಾ ಬೇಗಂ,ಉಪ ತಹಶೀಲ್ದಾರ್ ಪೂರ್ಣಿಮಾ,ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಸ್ಟೀಫನ್ ಪ್ರಕಾಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಕೆ ಎಸ್ ಮಂಜೇಗೌಡ,ಬಿಜೆಪಿ ತಾಲೂಕುಅಧ್ಯಕ್ಷ ಉಮಾ ರವಿಪ್ರಕಾಶ್,ತಾಲೂಕು ಕಾಂಗ್ರೆಸ್ ಅಧ್ಯಕ್ಷ ಶಿವಮೂರ್ತಿ,ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ,ಪ್ರಾರ್ಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಮೃತೇಶ್,ನೌಕರರ ಸಂಘದ ತಾಲೂಕು ಅಧ್ಯಕ್ಷ ನಯನ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ ಎನ್ ಬಸವರಾಜು,ಶಾಲಾ ಶಿಕ್ಷಕರ ಸಂಘದ ಸಹಕಾರ್ಯದರ್ಶಿ ವರದರಾಜು,ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ ವಾಸುದೇವ್, ಭೂಪಾಲಯ್ಯ, ಎಚ್‍ ಡಿ ಸೋಮೇಶ್,ರಾಮಚಂದ್ರ,ಖಾಸಗಿ ವಿದ್ಯಾಸಂಸ್ಥೆಗಳ ಸಂಘದ ಅಧ್ಯಕ್ಷ ರಂಗೇಗೌಡ,ಪರಮೇಶ್, ಹಾಗೂ ಇತರರು ಉಪಸ್ಥಿತರಿದ್ದರು.

———————————ಧರ್ಶನ್

Leave a Reply

Your email address will not be published. Required fields are marked *

× How can I help you?