ಆಲೂರು-ವಕ್ಫ್ ಬೋರ್ಡ್ ಹೆಸರಿನಲ್ಲಿ ರಾಜ್ಯದಲ್ಲಿ ಅಶಾಂತಿ ಮೂಡಲು ಕಾರಣವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಜನರ ಕ್ಷಮೆಯಾಚಿಸಬೇಕು.ಈ ಗೊಂದಲಕ್ಕೆ ಮೂಲ ಕಾರಣಕರ್ತರಾದ ಸಚಿವ ಜಮೀರ್ ಅಹಮದ್ ಖಾನ್ ರವರ ರಾಜೀನಾಮೆ ಪಡೆಯಬೇಕು ಎಂದು ಬಿಜೆಪಿ ಮಂಡಲ ಅಧ್ಯಕ್ಷೆ ಉಮಾ ರವಿಪ್ರಕಾಶ್ ಆಗ್ರಹಿಸಿದರು.
ಪಟ್ಟಣದ ಮಿನಿ ವಿದಾನಸೌಧ ಆವರಣದಲ್ಲಿ ಬಿಜೆಪಿ ವತಿಯಿಂದ ವಕ್ಫ್ ಕಬಳಿಕೆ ಬಗ್ಗೆ ಏರ್ಪಡಿಸಲಾಗಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ವಕ್ಫ್ ಬೋರ್ಡ್ ಹೆಸರಿಗೆ ರೈತರು ಮತ್ತು ಮಠ ಮಂದಿರಗಳು ಹೊಂದಿರುವ ಭೂಮಿಯ ಪಹಣಿ ಬದಲಾವಣೆ ಮಾಡುತ್ತಿರುವುದು ಕಳವಳಕಾರಿಯಾಗಿದೆ.ಬೇಲೂರು ತಾಲ್ಲೂಕು ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಾವಿರಾರು ವರ್ಷಗಳಿಂದ ಮೂಲ ಖಾತೆ, ಪಹಣಿ ಹೊಂದಿರುವ ಜಮೀನು ಮತ್ತು ರೈತರ ಆಸ್ತಿಗಳು ವಕ್ಫ್ ಮಂಡಳಿಗೆ ಸೇರಿದ್ದು ಎಂದು ಪಹಣಿಯಲ್ಲಿ ತಿದ್ದುಪಡಿ ಮಾಡಿ ಆಸ್ತಿ ಕಬಳಿಕೆಗೆ ಮುಂದಾಗಲಾಗಿದೆ.
ಕಾಂಗ್ರೆಸ್ ಕೇವಲ ಮತಗಳ ಗಳಿಕೆಗಾಗಿ ಒಂದು ವರ್ಗದ ಓಲೈಕೆ ಮಾಡುತ್ತಿರುವುದು ವಿಷಾದಕರ.ಇದರಿಂದ ಹಲವು ಜಿಲ್ಲೆಗಳಲ್ಲಿ ಈಗಾಗಲೆ ಶಾಂತಿ ಸೌಹಾರ್ದತೆಗೆ ಧಕ್ಕೆಯಾಗಿ ಜನರು ಪ್ರತಿಭಟನೆಯಲ್ಲಿ ತೊಡಗುತ್ತಿದ್ದಾರೆ.ಸದ್ಯ ನಡೆಯುತ್ತಿರುವ ಘಟನೆಗಳಿಗೆ ಶಾಶ್ವತವಾಗಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಎರಡು ಕೋಮಿನ ನಡುವೆ ಸಂಘರ್ಷ ನಡೆದು ಅಶಾಂತಿ ಮೂಡುವ ಸಂಭವ ಹೆಚ್ಚಾಗಿದೆ ಎಂದರು.
ಸಾಮರಸ್ಯಕ್ಕೆ ಹೆಸರಾಗಿದ್ದ ಕರ್ನಾಟಕ ರಾಜ್ಯವನ್ನು ಕಾಂಗ್ರೆಸ್ ಸರ್ಕಾರ ವಕ್ಫ್ ಮಂಡಳಿ ಮೂಲಕ ಹಾಳುಮಾಡುತ್ತಿದೆ. ಇನ್ನು ಮುಂದೆ ಯಾವುದೆ ವಕ್ಫ್ ಅದಾಲತ್ ನಡೆಸದಂತೆ ಸರ್ಕಾರಿ ಆದೇಶವನ್ನು ಹೊರಡಿಸಬೇಕು.ಇದಕ್ಕೆ ಸಂಬoಧಿಸಿದ ಗೆಜೆಟ್ ನೋಟಿಫಿಕೇಶನ್ ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದೆ ಆಗುವ ಪರಿಣಾಮಗಳಿಗೆ ಕಾಂಗ್ರೆಸ್ ಸರ್ಕಾರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಪ್ರದಾನ ಕಾರ್ಯದರ್ಶಿಗಳಾದ ಎ. ಆರ್. ಕೃಷ್ಣಮೂರ್ತಿ,ಎ. ಹೆಚ್. ರಮೇಶ್, ಎಸ್.ಸಿ. ಮೋರ್ಚಾ ಅಧ್ಯಕ್ಷ ಬಾಲನಿಲೋಚನ, ಅಜಿತ್ ಚಿಕ್ಕಕಣಗಾಲು, ಸುಷ್ಮ ಕಾಂತರಾಜ್ ಕಾರ್ಯದರ್ಶಿ, ನವೀನ್ ದಡದಳ್ಳಿ , ನಿತೀನ್ ಉಡುವಾರೆ , ಸತೀಶ್ , ಲೋಹಿತ್, ಕದಾಳು ಲೋಕೇಶ್,ಹರೀಶ್,ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.
————–-ದರ್ಶನ್ ಕೆರೇಹಳ್ಳಿ