
ಹೊಳೆನರಸೀಪುರ:ಜನರ ನಡುವಿನ ಅಸಮಾನತೆ, ಮೇಳುಕೀಳೆಂಬ ಭಾವನೆ ತೊಡೆದುಹಾಕಿ ಸಮಾನತೆ ಸಾರಲು ಕನಕದಾಸರು ತಮ್ಮ ಅಮೂಲ್ಯವಾದ ವಚನಗಳ ಮೂಲಕ ಗಮನ ಸೆಳೆದರು.ದೇಶದ ಪ್ರತೀಹಳ್ಳಿಯ ಜನರಿಗೂ ಎಲ್ಲಾ ಸೌಲಭ್ಯಗಳು ಸಿಗಬೇಕು.ಹಳ್ಳಿಯ ಜನರು ಸುಖವಾಗಿರಬೇಕು ಎನ್ನುವ ಕನಸನ್ನೂ ಕಂಡಿದ್ದರು.ಆದರೆ ಕನಕದಾಸರ ಕನಸಿನ ಗ್ರಾಮಗಳು ಇನ್ನೂ ನನಸಾಗಲಿಲ್ಲ ಎಂದು ನಿಮ್ಮೂರಿನ ರಸ್ತೆ,ಇಲ್ಲಿನ ಅವ್ಯವಸ್ಥೆ ಸಾರಿ ಸಾರಿ ಹೇಳುತ್ತಿದೆ ಎಂದು ಅರಕಲಗೂಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ವಿಷಾಧಿಸಿದರು.
ತಾಲ್ಲೂಕಿನ ಹಳ್ಳಿಮೈಸೂರು ಹೋಬಳಿ ಹೊಸಲಕ್ಕೇಗೌಡನಕೊಪ್ಪಲು ಗ್ರಾಮದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಕನಕದಾಸರ 537ನೇ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ, ಸ್ವಾತಂತ್ರ್ಯದ ನಂತರ ಡಾ.ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದ ಇಂದಿನ ಸಮಾಜದ ಎಲ್ಲಾ ಜನಾಂಗದವರೂ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗಿದೆ. ಸಂವಿಧಾನದಲ್ಲಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗಿದೆ, ಆದರೆ ನಿಮ್ಮ ಗ್ರಾಮವೂ ಸೇರಿದಂತೆ ರಾಜ್ಯದ ಸಾವಿರಾರು ಹಳ್ಳಿಗಳಿಗೆ ಮೂಲ ಸೌಕರ್ಯ ಇನ್ನೂ ಮರೀಚಿಕೆ ಆಗಿ ಉಳಿದಿದೆ. ಹಳ್ಳಿಯ ಜನರು ಕನಕ ದಾಸರ ಜಯಂತಿಯನ್ನು ಅತ್ಯಂತ ಶ್ರದ್ಧೆ ಹಾಗೂ ಭಕ್ತಿಯಿಂದ ಆಚರಿಸಿ ಅವರಿಗೆ ಕನಕದಾಸರ ಮೇಲಿರುವ ಭಕ್ತಿ ಹಾಗೂ ಗೌರವವನ್ನು ತೋರಿಸುತ್ತಿದ್ದಾರೆ. ಕನಕದಾಸರು ಯಾವೊಂದು ಜಾತಿಗೂ ಸೀಮಿತರಲ್ಲ. ಆದ್ದರಿಂದ ಹಳ್ಳಿಯ ಎಲ್ಲ ಜಾತಿ, ಜನಾಂಗಗಳ ಜನರು ಕನಕ ಜಯಂತಿ ಆಚರಿಸುತ್ತಿರುವುದು ಸೌಹಾರ್ಧತೆಗೆ ಸಾಕ್ಷಿ ಆಗಿದೆ ಎಂದರು.

ಕೆಪಿಸಿಸಿ ಸದಸ್ಯ ಮಂಜೇಗೌಡ ಮಾತನಾಡಿ ನಾವು ಹಳ್ಳಿಮೈಸೂರು ಹೋಬಳಿಯ ಹಾಗೂ ತಾಲ್ಲೂಕಿನ ಬಹುತೇಕ ಜನರು ಒಟ್ಟಿಗೆ ಸೇರಿ ಕನಕದಾಸರ, ಬಸವೇಶ್ವರರ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತೇವೆ. ಇಂತಹ ಮಹನೀಯರ ಜಯಂತಿ ಆಚರಣೆಯಿಂದ ನಮ್ಮಲ್ಲಿ ಸಹೋದರತ್ವ ಸದಾ ಜಾಗೃತವಾಗಿರುತ್ತದೆ. ನಮ್ಮ ಈ ಕಾರ್ಯಕ್ರಮದಲ್ಲಿ ನಮ್ಮ ಹಳ್ಳಿಯ ಎಲ್ಲ ಜನರ ಭಕ್ತಿ ಮತ್ತು ಶ್ರದ್ಧೆ ಕಾಣಿಸುತ್ತದೆ ಎಂದರು.
ಗ್ರಾಮ ಪಂಚಾಯ್ತಿ ಸದಸ್ಯ ರಂಗೇಗೌಡ, ಕಾಂಗ್ರೆಸ್ ಪಕ್ಷದ ಮುಖಂಡ ಮಧು, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಅವ್ವಯಮ್ಮ, ಅಣ್ಣೇಗೌಡ, ಹಿರಿಯರಾದ ಕಾಳೇಗೌಡ, ಯೋಗಣ್ಣ, ಮಹದೇವ, ನಾಗೇಂದ್ರ, ಸುಬ್ಬಣ್ಣ, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಅಲಂಕೃತ ವಾಹನದಲ್ಲಿ ಕನಕದಾಸರ ಮೆರವಣಿಗೆ ನಡೆಸಿದರು. ಕಾರ್ಯಕ್ರಮದ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಿದ್ದರು.
————ಸುಕುಮಾರ್